ADVERTISEMENT

ಊರು ಚಿಕ್ಕದು; ಸಾಧನೆ ದೊಡ್ಡದು

ಪ್ರಜಾವಾಣಿ ವಿಶೇಷ
Published 16 ಜುಲೈ 2013, 10:19 IST
Last Updated 16 ಜುಲೈ 2013, 10:19 IST

ಚಿಕ್ಕನಾಯಕನಹಳ್ಳಿ: ಜಲ ಸಂವರ್ಧನೆ ಯೋಜನೆಯಡಿ ತಾಲ್ಲೂಕಿನ 40 ಕೆರೆ ಗುರುತಿಸಲಾಗಿತ್ತು. ಇದರ ಪೈಕಿ ಗೋಪಾಲನಹಳ್ಳಿ ಕೆರೆಯಲ್ಲಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ರಾಜ್ಯದ ಮತ್ತು ವಿಶ್ವಬ್ಯಾಂಕ್‌ನ ಗಮನ ಸೆಳೆಯಿತು.

ತಾಲ್ಲೂಕಿನ ಗಡಿ ಭಾಗದ ಕೇವಲ 120 ಮನೆಗಳ ಪುಟ್ಟ ಗ್ರಾಮದ ಯುವಕರು ಯೋಜನೆಯ ಎಲ್ಲ ಅಂಶಗಳನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳೊಂದಿಗೆ ಸ್ಪಂದಿಸಿದ್ದು ಮತ್ತು ಕೆರೆ ನಿರ್ವಹಣೆ ಸಮಿತಿಯಲ್ಲಿ ರಾಜಕೀಯ ನುಸುಳದಂತೆ ಎಚ್ಚರ ವಹಿಸಿದ್ದ ಯೋಜನೆ ಯಶಸ್ಸಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

2009ರಲ್ಲಿ ಹಳ್ಳಿಗೆ ಅಧಿಕಾರಿಗಳು ಬಂದು ಯೋಜನೆ ಅನುಷ್ಠಾನಕ್ಕಾಗಿ 9 ಜನರ ಕಾರ್ಯಕಾರಿ ಮಂಡಲಿ ರಚಿಸಿದರು. 4 ಸ್ವಸಹಾಯ ಗುಂಪುಗಳಿಗೆ 3 ದಿನಗಳ ತರಬೇತಿ ನೀಡಿ, `ಕೆರೆ ಹಳ್ಳಿಯ ಸಮುದಾಯದ ಸಂಪತ್ತು' ಎಂಬುದನ್ನು ಮನಗಾಣಿಸಿದರು.

ರೂ. 20 ಲಕ್ಷ ಮೊತ್ತದ ಯೋಜನೆಗೆ ಗ್ರಾಮದ ಜನರೇ ಮುಂದೆ ಬಂದು ರೂ. 1.19 ಲಕ್ಷ ವಂತಿಗೆ ಸಂದಾಯ ಮಾಡಿದರು. ಜಿಲ್ಲೆಯಲ್ಲೇ ಸಮುದಾಯದ ಹಣವನ್ನು ಮೊದಲು ನೀಡಿದ ಊರು ಎಂಬ ಹೆಗ್ಗಳಿಕೆಗೂ ಗೋಪಾಲನಹಳ್ಳಿ ಪಾತ್ರವಾಯಿತು. ಜನರೇ ಮುಂದೆ ಬಂದು ರಾಯಕಾಲುವೆ ತೆರವು ಮತ್ತು ದುರಸ್ತಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ನೀರು ದಾರಿ ಸಲೀಸು ಮಾಡಿದರು.

ಕೆರೆಯ ಸುತ್ತಮುತ್ತ 23 ಜಾತಿಯ 1450 ಸಸಿಗಳನ್ನು ನೆಟ್ಟು ಕಾಪಾಡಿದರು. ಇದರ ಫಲವಾಗಿ ಕೆರೆಯ ದಾರಿ, ಅಂಗಳದಲ್ಲಿ ಇದೀಗ ಒಂದು ಪುಟ್ಟ ಮಳೆಕಾಡು ತಲೆ ಎತ್ತಿ ನಿಂತಿದೆ.

ಕೆರೆ ಸಂರಕ್ಷಣೆಯ ಗೋಪಾಲನಹಳ್ಳಿ ಮಾದರಿ ಬಗ್ಗೆ ಮಾತನಾಡುವಾಗ ಹಳ್ಳಿಗರು ಸಮೂಹ ಸಹಭಾಗಿತ್ವದಲ್ಲಿ ನಿರ್ಮಿಸಿದ 24 ಕಣ್ಣಿನ ಸೇತುವೆ ಮರೆಯುವಂತಿಲ್ಲ. ಗ್ರಾಮಸ್ಥರು ಸೇತುವೆ ನಿರ್ಮಾಣದ ಬೇಡಿಕೆ ಮುಂದಿಟ್ಟಾಗ ಜಲ ಸಂವರ್ಧನೆ ಅಧಿಕಾರಿಗಳು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈಚೆಲ್ಲಿದರು.

ಗ್ರಾಮಸ್ಥರು ಛಲ ಬಿಡದೆ ಸೇತುವೆ ನಿರ್ಮಾಣಕ್ಕೆ ಮುಂದಾದರು. ಜಲಪೂರಣಕ್ಕೆ ಸೇತುವೆ ಅಗತ್ಯ ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿಯಾಗಿದ್ದ ನಾಗರಾಜ್ ಜಿ.ನಾಯಕ್ ಹೆಚ್ಚುವರಿಯಾಗಿ ರೂ. 7.5 ಲಕ್ಷ ಅನುದಾನ ಬಿಡುಗಡೆ ಮಾಡಿದರು. ಜನರೇ ಶ್ರಮದಾನ ಮಾಡಿ ಸೇತುವೆಯನ್ನು ಪೂರ್ಣಗೊಳಿಸಿದರು.

ಜನಶಕ್ತಿಯ ಮಹತ್ವ ಸಾರಿ ಹೇಳುವ ಸೇತುವೆ ಗ್ರಾಮದಲ್ಲಿ ಇಂದಿಗೂ ನಗುತ್ತಾ ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT