ಮುಂಬರುವ ಏಷ್ಯನ್ ಗೇಮ್ಸನಲ್ಲಿ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯೂ ಸ್ಥಾನ ಪಡೆದಿದೆ. 2011-12ನೇ ಸಾಲಿನ `ಸ್ಟಾರ್ ಆಫ್ ಇಂಡಿಯಾ~ ಆಟಗಾರ ತುಮಕೂರು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಲ್ಯಾಬ್ ಇನ್‌ಸ್ಟ್ರಕ್ಟರ್ ಎಸ್.ದಿವಾಕರ್ ಅವರಿಗೆ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆಯಬೇಕು ಎಂಬ ಹಂಬಲ ದಿನ ದಿನಕ್ಕೂ ಹೆಚ್ಚುತ್ತಿದೆ.
ದೇಶ ಪ್ರತಿನಿಧಿಸಬೇಕು ಎಂಬ ಹಪಹಪಿತನದಿಂದ ಆಟದ ಅಭ್ಯಾಸ ಹೆಚ್ಚಿಸಿದ್ದಾರೆ. ಮುಂಜಾನೆ- ಮುಸ್ಸಂಜೆ ಬ್ಯಾಟ್ ಹಿಡಿಯದಿದ್ದರೆ ಮನಸ್ಸಿಗೆ ನೆಮ್ಮದಿ ಸಿಕ್ಕಲ್ಲ. ದೊರೆತ ಅವಕಾಶ ಬಳಸಿಕೊಂಡು ದೇಶಕ್ಕೆ ಕೀರ್ತಿ ತರಬೇಕು ಎಂಬ ಮನದಾಳದ ಮಾತುಗಳನ್ನು `ಪ್ರಜಾವಾಣಿ~ ಬಳಿ ಬಿಚ್ಚಿಟ್ಟರು.
ಅಭ್ಯಾಸ ನಡೆಸುವ ಜತೆಗೆ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳೂ ಸೇರಿದಂತೆ ಆಸಕ್ತ ಯುವ ಪ್ರತಿಭೆಗಳಿಗೂ ತರಬೇತಿ ನೀಡುತ್ತಿದ್ದಾರೆ. ಇದುವರೆಗೂ ನೂರಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದ್ದಾರೆ.
ಇದರಿಂದ ಇವರ ಆಟದ ಓಘವೂ ವೃದ್ಧಿಗೊಂಡಿದೆ. ಕ್ರೀಡಾ ಕೌಶಲಗಳು ಕರತಲಾಮಲಕವಾಗಿವೆ. ಇವರ ಮಾರ್ಗದರ್ಶನದಡಿ ಎಸ್‌ಎಸ್‌ಐಟಿ ಕಾಲೇಜು ತಂಡ ಸತತ ಐದನೇ ಬಾರಿ ವಿಟಿಯು ಚಾಂಪಿಯನ್‌ಶಿಪ್ ಪಡೆದಿದೆ.
ಹೈದರಾಬಾದ್‌ನಲ್ಲಿ ನಡೆದ 57ನೇ ಹಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ, ಭೂಪಾಲ್‌ನಲ್ಲಿ ನಡೆದ 48ನೇ ಹಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ, ಚೆನ್ನೈನಲ್ಲಿ ನಡೆದ 56ನೇ ಹಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ, ಆಂಧ್ರಪ್ರದೇಶದ ನಂದಿಯಾಲದಲ್ಲಿ ನಡೆದ 55ನೇ ಹಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಮುಡಿಗೇರಿಸಿಕೊಂಡಿದ್ದಾರೆ.
ಜಾರ್ಖಂಡ್‌ನ ಜೆಮ್‌ಷೆಡ್‌ಪುರ, ರಾಜಸ್ತಾನದ ಜೈಪುರದಲ್ಲಿ ನಡೆದ 44, 45ನೇ ಕಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ರಾಜಸ್ತಾನದ ಜೈಪುರದಲ್ಲಿ ನಡೆದ 42ನೇ ಕಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ. ತಮಿಳುನಾಡಿನಲ್ಲಿ ನಡೆದ 35ನೇ ದಕ್ಷಿಣ ವಲಯ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಕಿರಿಯರ ರಾಜ್ಯ ತಂಡದ ನಾಯಕತ್ವದ ಹೊಣೆಯನ್ನು ಎರಡು ಬಾರಿ ನಿರ್ವಹಿಸಿದ್ದಾರೆ. ಇದರ ಜತೆ ರಾಜ್ಯ ಮಟ್ಟದ ಹಲವು ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ದಿವಾಕರ್ ಅವರದ್ದು.
ದಿವಾಕರ್ ತಲಾ ಮೂರು ವರ್ಷ ಎಚ್‌ಎಂಟಿ, ಎಸ್‌ಬಿಎಂ, ಐದು ವರ್ಷ ಐಟಿಐ ತಂಡ ಪ್ರತಿನಿಧಿಸಿದ್ದಾರೆ. ಇದರ ಜತೆ ತುಮಕೂರು ಜಿಲ್ಲಾ ತಂಡ, ಡಿಲಕ್ಸ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್, ಸೋಮೇಶ್ವರ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಪ್ರತಿನಿಧಿಸಿದ್ದಾರೆ.
ಪ್ರಶಸ್ತಿ: ರಾಜಸ್ತಾನದಲ್ಲಿ ನಡೆದ 1999-2000ನೇ ಸಾಲಿನ ಕಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ `ಸ್ಟಾರ್ ಆಫ್ ಇಂಡಿಯಾ~, ಹೈದರಾಬಾದ್‌ನಲ್ಲಿ 2011-12ರಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ `ಸ್ಟಾರ್ ಆಫ್ ಇಂಡಿಯಾ~ ಪ್ರಶಸ್ತಿ ಪಡೆದ ಹಿರಿಮೆ ಇವರದ್ದು.
ರಾಜ್ಯ ಮಟ್ಟದ ಹಲವು ಟೂರ್ನಿಗಳಲ್ಲಿ ಉತ್ತಮ ಆಟಗಾರ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಜಿಲ್ಲೆ, ರಾಜ್ಯಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ತುಮಕೂರು ಜಿಲ್ಲಾಡಳಿತ 2001ರಲ್ಲೇ `ಗಣರಾಜ್ಯೋತ್ಸವ ಪ್ರಶಸ್ತಿ~ ನೀಡಿ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.