ADVERTISEMENT

ಒಕ್ಕಲಿಗರ ಸಂಘದ ಚುನಾವಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 9:21 IST
Last Updated 4 ಜನವರಿ 2014, 9:21 IST

ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಜ. 5ರಂದು ಚುನಾವಣೆ ನಡೆಯಲಿದ್ದು, 8 ತಾಲ್ಲೂಕು ಕೇಂದ್ರಗಳಲ್ಲಿ 38 ಮತಗಟ್ಟೆ ಸ್ಥಾಪಿಸಲಾಗಿದೆ.

ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ಅಭ್ಯರ್ಥಿಯ ಪರವಾಗಿ ಒಬ್ಬೊಬ್ಬ ಏಜೆಂಟರನ್ನು ಮತಗಟ್ಟೆಗೆ ನೇಮಕ ಮಾಡಲಾಗಿದೆ ಎಂದು ಸಹಕಾರ ಇಲಾಖೆ ಉಪನಿಬಂಧಕ ಬಾಲಶೇಖರ್‌ ತಿಳಿಸಿದರು.

ತುಮಕೂರಿನ ಹಳೆ ಡಯಟ್‌, ಕುಣಿಗಲ್‌, ತಿಪಟೂರು, ಮಧುಗಿರಿ, ಶಿರಾದಲ್ಲಿ ಒಕ್ಕಲಿಗರ ಸಂಘದ ಕಟ್ಟಡ, ಕೊರಟಗೆರೆ, ಗುಬ್ಬಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. 6ರಂದು ಮತ ಎಣಿಕೆ ನಡೆಯಲಿದೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಎಸ್ಪಿ ಲಕ್ಷ್ಮಣ್‌ ಮಾತನಾಡಿ, ಚುನಾವಣೆಗೆ ಬಿಗಿ ಭದ್ರತೆ ಮಾಡಲಾಗಿದೆ. 8 ಮಂದಿ ಪಿಎಸ್‌ಐ, 8 ಎಎಸ್‌ಐ, 40 ಮಂದಿ ಕಾನ್‌ಸ್ಟೆಬಲ್‌, ಡಿಎಆರ್‌ ಪೊಲೀಸರನ್ನು ನಿಯೋಜಿಸ­ಲಾಗಿದೆ. ತುಮಕೂರು, ಕುಣಿಗಲ್‌, ತುರುವೇಕೆರೆಗೆ ಒಂದೊಂದು ವ್ಯಾನ್‌ ಡಿಎಆರ್‌ ಪೊಲೀಸರನ್ನು ನೀಡ­ಲಾಗುವುದು ಎಂದು ಹೇಳಿದರು.

ಡಿಎಸ್ಪಿ ಜಗದೀಶ್‌ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮತದಾರರ ಸೆಳೆಯಲು ಪೈಪೋಟಿ
ಕುಣಿಗಲ್: ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ತಾಲ್ಲೂಕಿನ ಮತದಾರರ ಸಂಖ್ಯೆ ಹೆಚ್ಚಿದೆ. ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವವರು ಸಹ ತಾಲ್ಲೂಕಿನ ಮತದಾರರೇ.

ಪ್ರಸ್ತುತ ಚುನಾವಣೆಗೆ ಸ್ಪರ್ಧಿಸಿರುವವರಲ್ಲಿ ಆಡಿಟರ್‌ ನಾಗರಾಜ್‌, ಶಶಿಕಿರಣ್‌, ಬೆಟ್ಟಸ್ವಾಮಿಗೌಡ ತಾಲ್ಲೂಕಿನ ಮೂಲದವರು. ಇವರ ಜತೆ ಉಳಿದ ಸ್ಪರ್ಧಿಗಳಾದ ಹನುಮಂತರಾಯಪ್ಪ, ನರೇಂದ್ರಬಾಬು, ಜಗದೀಶ್‌ ಸಹ ತಾಲ್ಲೂಕಿನ ಮತದಾರರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ.

ಮನೆ ಮನೆಗೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಬಿರುಸು ಪಡೆದಿದೆ. ಕಳೆದ ಚುನಾವಣೆಯಲ್ಲಿ ಬೆಲೆ ಬಾಳುವ ಉಡುಗೊರೆ ಪಡೆದವರು, ಗೋವಾ ಪ್ರವಾಸದ ಸವಿ ಅನುಭವಿಸಿದವರು ಈಗಲೂ ಅದೇ ಗುಂಗಿನಲ್ಲಿದ್ದಾರೆ. ಮತ್ತೊಮ್ಮೆ ಅಂಥ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಚುನಾವಣೆ ಪ್ರಕ್ರಿಯೆ ಆರಂಭದ ದಿನದಿಂದಲೇ ರಂಗಸ್ವಾಮಿ ಗುಡ್ಡ ಸೇರಿದಂತೆ, ಡಾಬಾ, ತೋಟದ ಮನೆಗಳಲ್ಲಿ ಬಾಡೂಟದ ಹಬ್ಬಗಳು ನಿರಂತರವಾಗಿ ನಡೆಯುತ್ತಿವೆ. ಮತದಾನದ ದಿನ ಸಮೀಪಿಸುತ್ತಿದ್ದಂತೆ; ಮೈ ಕೊರೆವ ಚಳಿಯಲ್ಲೂ ಕಣ ಕಾವೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.