ADVERTISEMENT

ಕಗ್ಗಲಡು: ಕೊಕ್ಕರೆಗಳ ಕಲರವ

​ಪ್ರಜಾವಾಣಿ ವಾರ್ತೆ
Published 22 ಜನವರಿ 2014, 8:43 IST
Last Updated 22 ಜನವರಿ 2014, 8:43 IST

ಶಿರಾ: ಬಣ್ಣಬಣ್ಣದ ಕೊಕ್ಕರೆಗಳು ಸಣ್ಣಸಣ್ಣ ಕಡ್ಡಿಗಳನ್ನು ತಂದು ಗೂಡು ಕಟ್ಟುತ್ತಿವೆ. ಮತ್ತಷ್ಟು ಮರಗಳ ಮೇಲೆ ಪ್ರದಕ್ಷಿಣೆ ಹಾಕಿ, ಸ್ಥಳ ಪರಿಶೀಲಿಸಿ ಸೂಕ್ತ ಜಾಗ ಹುಡುಕುತ್ತಿವೆ. ಎಲ್ಲೆಂದರಲ್ಲಿ ಕೊಕ್ಕರೆಗಳ ಕಲರವ ಮನೆ ಮಾಡಿದೆ....

ತಾಲ್ಲೂಕಿನ ಕಗ್ಗಲಡು ಗ್ರಾಮಕ್ಕೆ ಪ್ರತಿ ವರ್ಷ ಜನವರಿಯಲ್ಲಿ ಕೊಕ್ಕರೆಗಳು ವಲಸೆ ಬರುತ್ತವೆ. ಇಲ್ಲಿನ ಹುಣಸೆ ಮರಗಳಲ್ಲಿ ಗೂಡು ಕಟ್ಟಿ, ಸಂಸಾರ ಹೂಡಿ, ಮೊಟ್ಟಿ ಇಟ್ಟು, ಮರಿ ಮಾಡಿ ಪೋಷಣೆ ಮಾಡುತ್ತವೆ. ಜೂನ್‌ ತಿಂಗಳಲ್ಲಿ ಹಿಂತಿರುಗುತ್ತವೆ. ಕಳೆದ 1999ರಿಂದ ಇದು ನಡೆದಿದೆ. ಆದರೆ ಕಳೆದ ವರ್ಷ ಬರ ಮತ್ತು ಹುಣಸೆ ಮರಗಳ ಹಣ್ಣು ಕಿತ್ತು ಬೋಳು ಮಾಡಿದ್ದರಿಂದ ಕೊಕ್ಕರೆಗಳು ಬಂದಿರಲಿಲ್ಲ.

1999ರಲ್ಲಿಯೇ 600 ಪಕ್ಷಿಗಳು ಬಂದು 280ಕ್ಕೂ ಹೆಚ್ಚು ಗೂಡು ಕಟ್ಟಿದ್ದವು. ಈ ವರ್ಷವೂ 400 ಪಕ್ಷಗಳು ಬರಬಹುದು. ಪಕ್ಷಿಗಳು ಬಂದು ಹೋಗುವವರೆಗೂ ಹುಣಸೆ ಮರಗಳಿಂದ ಹಣ್ಣು ಬಡಿ­ಯುವುದಿಲ್ಲ. ಹಕ್ಕಿಗಳನ್ನು ಸಂರಕ್ಷಣೆ ಮಾಡು­ತ್ತೇವೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಅಲ್ಲದೆ ಇಲ್ಲಿನ ಸರ್ಕಾರಿ ಶಾಲೆ ಮಕ್ಕಳು ಪಕ್ಷಿಗಳ ಆಗಮನದ ಬಗ್ಗೆ ಕುತೂಹಲ ಹೊಂದಿದ್ದಾರೆ. ಶಿಕ್ಷಕ ರಂಗನಾಥ್‌ ಮಾರ್ಗದರ್ಶನದಲ್ಲಿ ಚಲನವಲನ ದಾಖಲಿಸಲು ಮುಂದಾಗಿದ್ದಾರೆ.

ಬಣ್ಣದ ಕೊಕ್ಕರೆಗಳು ಅಳಿವಿನಂಚಿನಲ್ಲಿವೆ. ಐಯು­ಸಿಎನ್‌ ಸಂಸ್ಥೆ ಬಣ್ಣದ ಕೊಕ್ಕರೆಗಳನ್ನು ಕೆಂಪು ಪಟ್ಟಿ­ಯಲ್ಲಿ ಸೇರಿಸಿದ್ದು, ಸಂರಕ್ಷಣೆಗೆ ಸೂಚಿಸಿದೆ. ಅರಣ್ಯ ಇಲಾಖೆ ಗ್ರಾಮಕ್ಕೆ ಸಿಬ್ಬಂದಿ ನಿಯೋಜಿಸಿ ಸುತ್ತಲಿನ ಕೆರೆಕಟ್ಟೆಗಳಲ್ಲಿ ಪಕ್ಷಿಗಳನ್ನು ಬೇಟೆ ಮಾಡದಂತೆ ನಿಯಂ­ತ್ರಿಸಬೇಕು ಎಂದು ವನ್ಯಜೀವಿ ಜಾಗೃತ ನಿಸರ್ಗ ಸಂಸ್ಥೆಯ ಬಿ.ವಿ.ಗುಂಡಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.