ADVERTISEMENT

ಕಲ್ಯಾಣಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 9:53 IST
Last Updated 13 ಅಕ್ಟೋಬರ್ 2017, 9:53 IST

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಲವೆಡೆ ಮಕ್ಕಳು, ಯುವಕರು, ವೃದ್ಧರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಲ್ಯಾಣಿ ಸ್ವಚ್ಛತೆಗೆ ಮುಂದಾದರು. ಶತಾಯುಷಿ ಲಕ್ಕಣ್ಣಜ್ಜ ಯುವಕರ ಜತೆ ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ಪಟ್ಟಣದ 6ನೇ ವಾರ್ಡ್‌ ಕೇದಿಗೆಹಳ್ಳಿ ಪಾಳ್ಯದ ನವರಾತ್ರಿ ಮಂಟಪದ ಸೋಪನಬಾವಿಯನ್ನು ನೆರಳು ತಂಡ, ಕೇದಿಗೆಹಳ್ಳಿ ಗ್ರಾಮಸ್ಥರು ಹಾಗೂ ಪುರಸಭೆ ಸಿಬ್ಬಂದಿ ಒಗ್ಗೂಡಿ ಸ್ವಚ್ಛಗೊಳಿಸಿದರು. ಕಳ್ಳಿ, ಲಾಂಟನ ಹಾಗೂ ಕಳೆಗಿಡಗಳಿಂದ ಮುಚ್ಚಿ ಹೋಗಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಯಿತು.

ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಕರ್ ಮಾತನಾಡಿ, ‘ಈಗಾಗಲೇ ನೆರಳು ತಂಡ ಪುರಸಭೆ ಹಾಗೂ ಪಟ್ಟಣದ ಜನರ ಸಹಕಾರದಿಂದ ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನದ ಕಲ್ಯಾಣ, ಚೌಕಿಮಠದ ಕಲ್ಯಾಣಿ, ಕೇದಿಗೆಹಳ್ಳಿ ಪಾಳ್ಯದ ಕಲ್ಯಾಣಿ ಸ್ವಚ್ಛಗೊಳಿಸಲಾಗಿದೆ.

ADVERTISEMENT

ದಬ್ಬೇಘಟ್ಟದ ಯುವಕರು ಒಗ್ಗೂಡಿ ಊರಿನ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದೆ. ಪಟ್ಟಣದಲ್ಲಿ ಇನ್ನೂ ನಾಲ್ಕೈದು ಕಲ್ಯಾಣಿಗಳು ಊಳಿನಲ್ಲಿ ಮುಚ್ಚಿಹೋಗಿವೆ. ಅವುಗಳನ್ನೂ ಸ್ವಚ್ಛಗೊಳಿಸಿ ಜಲ ಮೂಲಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

300 ವರ್ಷ ಹಳೇ ಕಲ್ಯಾಣಿ: ಕೇದಿಗೆಹಳ್ಳಿ ಪಾಳ್ಯದ ಕಲ್ಯಾಣಿಗೆ 300 ವರ್ಷದ ಇತಿಹಾಸ ಇದೆ. ಪಕ್ಕದಲ್ಲೇ ನವರಾತ್ರಿ ಮಂಟಪ ಇದ್ದು, ಪ್ರತೀ ವರ್ಷ ವಿಜಯದಶಮಿಯಂದು ಹಳೆಯೂರು ಆಮಜನೇಯಸ್ವಾಮಿ ಹಾಗೂ ಗ್ರಾಮ ದೇವತೆ ಎಲ್ಲಮ್ಮ ದೇವರು ಇಲ್ಲಿ ಬಂದು ಪೂಜೆಗೊಳ್ಳುತ್ತವೆ.

ತಾಲ್ಲೂಕು ಆಡಳಿತದ ವತಿಯಿಂದ ಇಲ್ಲಿ ಶಮಿ ಪೂಜೆ ನೆರವೇರಿಸಲಾಗುತ್ತದೆ. ಹಿಂದೆ ಮೈಸೂರು ಅರಸರು ಚಿತ್ರದುರ್ಗದ ಕಡೆ ಹೋಗುವಾಗ ಇಲ್ಲಿ ತಂಗಿ ಕಲ್ಯಾಣಿಯಲ್ಲಿ ಮಿಂದು ಹೋಗುತ್ತಿದ್ದರೂ ಎಂಬ ಮಾಹಿತಿ ಇದೆ’ ಎಂದು ನಿವೃತ್ತ ಶಿಕ್ಷಕ ನಾಗರಾಜು ವಿವರಿಸುವರು.

ಹಂದನಕೆರೆ ವರದಿ: ತಾಲ್ಲೂಕಿನ ಹಂದನಕೆರೆ ಹೋಬಳಿ ಚಿಕ್ಕೆಣ್ಣೆಗೆರೆ ಗ್ರಾಮದ ಹಳೆ ಕಲ್ಯಾಣಿಯನ್ನು ಗ್ರಾಮದ ಯುವಕರು, ಶಾಲಾ ಮಕ್ಕಳು ಒಗ್ಗೂಡಿ ಸ್ವಚ್ಛಗೊಳಿಸಿದರು. ಬೆಳಿಗ್ಗೆ 8ಕ್ಕೆ ಆರೆ, ಗುದ್ದಲಿ, ಮಂಕರಿ ಹಿಡಿದು ಕಲ್ಯಾಣಿಗೆ ಇಳಿದ 50 ಜನರ ಸ್ವಚ್ಛತಾ ಪಡೆ 20 ಅಡಿಯಷ್ಟು ಊಳು ಎತ್ತಿ ಹಾಕಿದರು. ಕಳಚಿ ಬಿದ್ದಿದ್ದ ಕಲ್ಯಾಣಿ ಮೆಟ್ಟಿಲುಗಳನ್ನು ದುರಸ್ತಿಗೊಳಿಸಿದರು. ಕಿರಣ್, ಶ್ರೀಧರಾಚಾರ್, ಬಸವರಾಜು, ಕಾಮತರಾಜು, ಮುನ್ನಾ, ಕಲ್ಲೇಶ್, ಮಾರುತಿ, ಧರಣೀಶ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಕಲ್ಯಾಣಿ ಉಳಿಸಿ ಅಭಿಯಾನ: ನಮ್ಮ ಪೂರ್ವಜರ ಜಲ ಸಾಕ್ಷರತೆಯ ಕುರುಹುಗಳಾಗಿ ಕಲ್ಯಾಣಿಗಳು ಇವೆ. ಊರಿನಲ್ಲಿ ಬಿದ್ದ ಮಳೆ ನೀರು ಒಂದು ಹನಿಯೂ ವ್ಯರ್ಥವಾಗದೆ ಒಂದೆಡೆ ಶೇಕರವಾಗಲೆಂದು ಪೂರ್ವಜರು ಊರ ಸುತ್ತ ಕಲ್ಯಾಣಿ ನಿರ್ಮಿಸಿದ್ದಾರೆ. ತಾಲ್ಲೂಕಿನಾದ್ಯಂತ ಇರುವ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ಅಭಿಯಾನವನ್ನು ನೆರಳು ಸಂಘಟನೆ ಪ್ರಾರಂಭಿಸಿದೆ.

ಈ ಅಭಿಯಾನಕ್ಕೆ ನಾಗರಿಕರು, ಜನ ಪ್ರತಿನಿಧಿಗಳು, ಸ್ಥಳೀಯ ನಾಗರಿಕರು, ಜನಪರ ಸಂಘಟನೆಗಳು ಪ್ರೋತ್ಸಾಹ ನೀಡುತ್ತಿರುವುದು ಸಂತಸ ತಂದಿದೆ ಎಂದು ನೆರಳು ಸಂಘಟನೆಯ ಪದಾಧಿಕಾರಿ ನಾಗಕುಮಾರ್ ಚೌಕಿಮಠ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.