ADVERTISEMENT

ಕಾರ್ಮಿಕರ ವಲಸೆ: ಕಾರ್ಖಾನೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 4:45 IST
Last Updated 22 ಆಗಸ್ಟ್ 2012, 4:45 IST

ತುರುವೇಕೆರೆ: ಈಶಾನ್ಯ ರಾಜ್ಯಗಳ ಕಾರ್ಮಿಕರ ವಲಸೆ ಪ್ರಕ್ರಿಯೆ ಕೇವಲ ನಗರಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಕೈಗಾರಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜೋಗಿಪಾಳ್ಯದ ರಾಮ್ಕೊ ಇಂಡಸ್ಟ್ರೀಸ್ ವಾರದಿಂದ ಸ್ಥಗಿತಗೊಂಡಿದೆ.

ಮೂರು ವರ್ಷಗಳ ಹಿಂದೆ ಆರಂಭವಾದ ರಾಮ್ಕ ಇಂಡಸ್ಟ್ರೀಸ್ ಐಎಸ್‌ಐ ಪರವಾನಗಿ ಪಡೆದ ಜಿಲ್ಲೆಯ ಪ್ರತಿಷ್ಠಿತ ಪ್ಲೇವುಡ್ ತಯಾರಿಕಾ ಸಂಸ್ಥೆ. ಇಲ್ಲಿ ತಯಾರಾದ ಪ್ಲೇವುಡ್ ಹಾಸುಗಳು ಬೆಂಗಳೂರಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿವೆ. ಕೈಗಾರಿಕಾ ಘಟಕದಲ್ಲಿ 60ಕ್ಕೂ ಹೆಚ್ಚು ಜನಕ್ಕೆ ಉದ್ಯೋಗಾವಕಾಶ ಲಭಿಸಿದೆ.
 
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಒರಿಸ್ಸಾ ಮೂಲದ 38 ಕಾರ್ಮಿಕರು ವಿವಿಧ ವದಂತಿಗಳಿಗೆ ಹೆದರಿ ಮೂರು ದಿನಗಳ ಹಿಂದೆ ಇಲ್ಲಿಂದ ಹೊರಟು ಹೋಗಿದ್ದಾರೆ. ಹೀಗೆ ಹೋಗಿರುವ ಕಾರ್ಮಿಕರೆಲ್ಲ ಕೌಶಲ್ಯ ಹೊಂದಿದ್ದ ಅನುಭವಿ ಕೆಲಸಗಾರರಾದ್ದರಿಂದ ಕೈಗಾರಿಕಾ ಘಟಕ ಸ್ಥಗಿತಗೊಂಡಿದೆ.

ರಾಮ್ಕೊ ಮಾಲೀಕ ಮಂಜುನಾಥ್ ಪ್ರಕಾರ ಈ ಕಾರ್ಮಿಕರ‌್ಯಾರಿಗೂ ವದಂತಿಗಳ ಅಥವಾ ಭಯ ಸೃಷ್ಟಿಸುವ ನೇರ ಎಸ್‌ಎಂಎಸ್ ಬಂದಿಲ್ಲ. ಆದರೆ ಬೆಂಗಳೂರಿನಲ್ಲಾದ ಬೆಳವಣಿಗೆ, ಪರಿಚಿತರ, ಸ್ನೇಹಿತರ ಹಾಗೂ ಬಂಧುಗಳು ತವರಿಗೆ ತೆರಳುವ ನಿರ್ಧಾರ ಇವರನ್ನೂ ಕೈಗಾರಿಕಾ ಘಟಕ ತೊರೆಯುವಂತೆ ಪ್ರೇರೇಪಿಸಿದೆ. ಇದರಿಂದ ದಿನವಹಿ 150 ಪ್ಲೇವುಡ್ ಹಾಸು ತಯಾರಿಸುತ್ತಿದ್ದ ಘಟಕ ಸ್ಥಗಿತಗೊಂಡಿದೆ. ನಿತ್ಯ ಹತ್ತು ಸಾವಿರ ರೂಪಾಯಿ ನಷ್ಟ ಸಂಭವಿಸುತ್ತಿದೆ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.