ADVERTISEMENT

ಕುಡಿಯುವ ನೀರಿಗಾಗಿ ಹರಿದು ಬಂದ ಜನಸಾಗರ

ಬುಕ್ಕಾಪಟ್ಟಣ ಹೋಬಳಿ ಜನರ ಒಗ್ಗಟ್ಟು ಸಂಸದರಿಗೆ ಮಾದರಿಯಾಗಲಿ-ನಂಜಾವಧೂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2013, 5:44 IST
Last Updated 6 ಫೆಬ್ರುವರಿ 2013, 5:44 IST
ಶಿರಾ ಪ್ರವಾಸಿ ಮಂದಿರದ ಸರ್ಕಲ್‌ನಲ್ಲಿ ಮಂಗಳವಾರ ನಡೆದ ಸಭೆ ಉದ್ದೇಶಿಸಿ ನಂಜಾವಧೂತ ಸ್ವಾಮೀಜಿ ಮಾತನಾಡಿದರು.
ಶಿರಾ ಪ್ರವಾಸಿ ಮಂದಿರದ ಸರ್ಕಲ್‌ನಲ್ಲಿ ಮಂಗಳವಾರ ನಡೆದ ಸಭೆ ಉದ್ದೇಶಿಸಿ ನಂಜಾವಧೂತ ಸ್ವಾಮೀಜಿ ಮಾತನಾಡಿದರು.   

ಶಿರಾ: ನಮ್ಮೂರ ಕೆರೆಗಳಿಗೆ ಕುಡಿಯುವ ನೀರು ಕೊಡಿ ಎಂದು ಆಗ್ರಹಿಸಿ ಬುಕ್ಕಾಪಟ್ಟಣ ಹೋಬಳಿಯ ಸಹಸ್ರಾರು ಜನ 20-25 ಕಿಲೋ ಮೀಟರ್ ರಸ್ತೆಯನ್ನು ಕಾಲ್ನಡಿಗೆಯಲ್ಲಿ ಸಾಗಿ ಬಂದು ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಮಂಗಳವಾರ ಬೆಳಗ್ಗೆ ಬುಕ್ಕಾಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರಂಭವಾದ ಪಾದಯಾತ್ರೆಗೆ ಸುತ್ತಮುತ್ತಲಿನ ಗ್ರಾಮದ ಜನ ಸ್ವಯಂ ಪ್ರೇರಿತರಾಗಿ ತಂಡೋಪತಂಡದಲ್ಲಿ ಆಗಮಿಸಿದ್ದರು.
ಕಾಲ್ನಡಿಗೆ ಸಾಗಿದಂತೆ ಮುಂದಿನ ಊರುಗಳ-ಅವುಗಳ ಅಕ್ಕ-ಪಕ್ಕದ ಊರಿನ ಜನ ಕೂಡ ನೀರಿನ ಹಾಹಾಕಾರ ನೆನೆದು ಪಾದಯಾತ್ರೆ ಸೇರಲು ಉತ್ಸುಕರಾಗಿ ಕಾಯುತ್ತಿದ್ದ ದೃಶ್ಯ ಪಾದಯಾತ್ರೆ ಸಂಘಟಕರಿಗೆ ರೋಮಾಂಚನ ತರಿಸುತ್ತಿತ್ತು.

ರಾಜಕೀಯ ಪಕ್ಷಗಳ ಹಂಗಿಲ್ಲದೆ ಎಲ್ಲ ಪಕ್ಷಗಳ ಕಾರ್ಯಕರ್ತರು, ರೈತರು, ಯುವಕರು, ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಸಂಘದ ಮಹಿಳೆಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಎಂಥ ಹೋರಾಟಕ್ಕೂ ಹೋಬಳಿ ಜನ ಸಿದ್ದ ಎಂದು ಸಾರಿದರು.

ಕಾಲ್ನಡಿಗೆಯಲ್ಲಿ ಬರುವ ಜನರಿಗೆ ಕೆಲ ಗ್ರಾಮಗಳ ಜನರು ಮಜ್ಜಿಗೆ, ಶರಬತ್, ತಿಂಡಿ ನೀಡಿ ಸ್ವಾಗತಿಸಿದರು. ಹುಯಿಲ್‌ದೊರೆಯಲ್ಲಿ ತಿಂಡಿ ತಿಂದು ಹೊರಟ ಹೋರಾಟಗಾರರಿಗೆ ಹೊನ್ನೇನಹಳ್ಳಿ ಜನ ಗೇಟ್‌ನಲ್ಲಿ ಜ್ಯೂಸ್ ಕೊಟ್ಟು ಸ್ವಾಗತಿಸಿದರೆ, ಮೇಕೇರಹಳ್ಳಿ ಗೇಟ್‌ನಲ್ಲಿ ತಂಪಾದ ಮಜ್ಜಿಗೆ ಕೊಟ್ಟು ಬೀಳ್ಕೊಟ್ಟರು ಎಂದು ಪಾದಯಾತ್ರಿಯೊಬ್ಬರು ಹೇಳಿದರು.

ಶಿರಾದ ರಿಲಯನ್ಸ್ ಪೆಟ್ರೋಲ್ ಬಂಕ್‌ಗೆ ಬರುವ ಹೊತ್ತಿಗೆ ಊಟ ರೆಡಿ ಇತ್ತು. ಊಟ ಮಾಡಿ ಪ್ರವಾಸಿ ಮಂದಿರದ ಬಳಿಯ ಸರ್ಕಲ್‌ನಲ್ಲಿ ಬಹಿರಂಗ ಸಭೆಗೆ ಸೇರಿದ ಜನಸ್ತೋಮ ಕಂಡು ಮಂಗಳವಾರದ ಸಂತೆಗೆ ಆಗಮಿಸಿದ್ದ ಬೇರೆ ಹೋಬಳಿ ಜನ ಬೆಕ್ಕಸ ಬೆರಗಾದರು. ಬುಕ್ಕಾಪಟ್ಟಣ ಹೋಬಳಿ ಜನರ ಒಗ್ಗಟ್ಟು ಹೊಗಳುತ್ತಾ ತಾವು ಹೋರಾಟಕ್ಕೆ ಸೇರಿಕೊಂಡರು.

ಸಭೆ ಉದ್ದೇಶಿಸಿ ಮಾತನಾಡಿದ ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಕೂಡ ಬುಕ್ಕಾಪಟ್ಟಣ ಹೋಬಳಿ ಜನರ ಒಗ್ಗಟ್ಟು ಶ್ಲಾಘಿಸುತ್ತಾ, ಕಾವೇರಿ ನದಿ ನೀರಿನ ಅಧಿಸೂಚನೆ ವಿಷಯದಲ್ಲಿ ರಾಜ್ಯದ ಸಂಸದರು, ಕೇಂದ್ರ ಸಚಿವರು, ಶಾಸಕರು ಪಕ್ಷಭೇದ ಮರೆತು ರಾಜ್ಯಕ್ಕಾಗಿ-ನೀರಿಗಾಗಿ ಒಗ್ಗಟ್ಟು ಪ್ರದರ್ಶಿಸಿದರೆ ಖಂಡಿತ ರಾಜ್ಯಕ್ಕೆ ನ್ಯಾಯ ದೊರೆಯಲಿದೆ ಎಂದರು.

ಈಗಾಗಲೇ ಬುಕ್ಕಾಪಟ್ಟಣ ಬಂದ್ ಮೂಲಕ, ಈಗ ಪಾದಯಾತ್ರೆ ಮೂಲಕ ಕುಡಿಯುವ ನೀರಿಗಾಗಿ ಒತ್ತಾಯಿಸಿದ್ದೇವೆ. ಮುಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ. ನಂತರ ಬುಕ್ಕಾಪಟ್ಟಣದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಇದಕ್ಕೆ ಮಣಿದು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹೋಬಳಿಯ ಕುಡಿಯುವ ನೀರಿನ ಯೋಜನೆ ಸೇರಿಸಿದರೆ ಸರಿ. ಇಲ್ಲದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ಹೋಬಳಿ ಜನ ಬಹಿಷ್ಕರಿಸುವುದಾಗಿ ಸಭೆ ಉದ್ದೇಶಿಸಿ ಮಾತನಾಡಿದ ಮುಖಂಡರು ಎಚ್ಚರಿಸಿದರು.

ಪಾದಯಾತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ರಾಮಚಂದ್ರಯ್ಯ, ಬೊಮ್ಮಣ್ಣ, ಜೆಡಿಎಸ್ ಮುಖಂಡ ಕೆ.ಎಲ್.ಮಹಾದೇವಪ್ಪ, ರೈತ ಸಂಘದ ರಾಜ್ಯ ಮುಖಂಡ ಕೆಂಕೆರೆ ಸತೀಶ್, ತಾಲ್ಲೂಕು ಅಧ್ಯಕ್ಷ ಪರಮಶಿವಯ್ಯ, ಜೈಪ್ರಕಾಶ್, ಎಚ್.ಲಿಂಗಯ್ಯ, ಬಿ.ಡಿ.ದ್ಯಾಮಣ್ಣ, ರವಿಶಂಕರ್, ನೇರಲಗುಡ್ಡ ಶಿವಕುಮಾರ್, ಆರ್.ವಿ.ಪುಟ್ಟಕಾಮಣ್ಣ, ಮುದ್ದುಗಣೇಶ್, ಕಲೀಲ್, ಯಲ್ಲಪ್ಪಶೆಟ್ಟರ್, ಶಿವು ಮತ್ತಿತರರು ಪಾದಯಾತ್ರೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.