ADVERTISEMENT

ಕುಡಿಯುವ ನೀರು ಪೂರೈಕೆಗೆ ಅನುದಾನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 10:35 IST
Last Updated 26 ಫೆಬ್ರುವರಿ 2012, 10:35 IST

ತುರುವೇಕೆರೆ: ಬರ ಪರಿಹಾರ ಕಾಮಗಾರಿ ನಿರ್ವಹಣೆಗೆ ಪ್ರತಿ ತಾಲ್ಲೂಕಿಗೆ ಈಗಾಗಲೇ ನೀಡಿರುವ ರೂ.35 ಲಕ್ಷ ಅನುದಾನದ ಜೊತೆಗೆ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಸಲು ಶನಿವಾರ ಪ್ರತಿ ತಾಲ್ಲೂಕಿಗೆ ತಲಾ ರೂ.2 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಬರ ಪರಿಹಾರ ಕಾಮಗಾರಿ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದ ನಂತರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳು ಬರ ಪರಿಹಾರ ಕಾಮಗಾರಿಯಡಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಕೊಳವೆ ಬಾವಿ ದುರಸ್ತಿ, ಕೊಳಾಯಿ ರಿಪೇರಿ, ಬದಲಾವಣೆ, ವಿದ್ಯುತ್ ಠೇವಣಿ ಸೇರಿದಂತೆ ಎಲ್ಲ ಖರ್ಚುಗಳನ್ನು ಬರ ಪರಿಹಾರಕ್ಕೆ ಬಿಡುಗಡೆಯಾಗಿರುವ ಅನುದಾನದಡಿ ನಿರ್ವಹಿಸಲು ಅವಕಾಶವಿದೆ.

ಕೊಳವೆ ಬಾವಿಯ ತುರ್ತು ಅವಶ್ಯಕತೆ ಇದ್ದರೆ ಜಿಲ್ಲಾ ಪಂಚಾಯಿತಿಯ ಐಎಂಎಸ್ ಯೋಜನೆಯಡಿ ಕೊರೆಸಬಹುದು. ಈ ನಿಧಿಯಲ್ಲಿ ಇನ್ನೂ ರೂ.42 ಕೋಟಿ ಲಭ್ಯವಿದೆ ಎಂದರು.
ಜಿಲ್ಲೆಯಲ್ಲಿ ಶಿರಾ, ಪಾವಗಡದಲ್ಲಿ ಗೋಶಾಲೆ ತೆರೆಯಲಾಗಿದೆ. ಮುಂದಿನ 16 ವಾರ ಮೇವಿಗೆ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆದಾಗ್ಯೂ ಜಿಲ್ಲಾಡಳಿತ ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಿದ್ಧವಾಗಿದೆ. ತುರ್ತು ಸಂದರ್ಭಗಳಲ್ಲಿ ಪ್ರಕೃತಿ ವಿಕೋಪ ನಿಧಿಯ ನೆರವನ್ನೂ ಪಡೆಯಬಹುದು ಎಂದು ತಿಳಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ದಬ್ಬೇಘಟ್ಟ, ಕಣತೂರು, ಅಮ್ಮಸಂದ್ರ ಮುಂತಾದೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಬೆಸ್ಕಾಂ ಮುಂದಿನ ಜೂನ್‌ವರೆಗೆ ಉದಾರ ನೀತಿ ಅನುಸರಿಸುವ ಮೂಲಕ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಅಂತೆಯೇ ಕೆರೆ, ಕಟ್ಟೆ, ಬದು ನಿರ್ಮಾಣಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಿ ಜನ ಗುಳೆಹೋಗುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ಜಿ.ಪಂ.ಸದಸ್ಯರಾದ ಲತಾ ವಿಶ್ವನಾಥ್, ಜಗದೀಶ್, ಶ್ರೀನಿವಾಸ್ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.
ತಾ.ಪಂ.ಅಧ್ಯಕ್ಷೆ ಪದ್ಮಾವೆಂಕಟೇಶ್, ಜಿ.ಪಂ.ಸದಸ್ಯೆ ಮಂಗಳಗೌರಮ್ಮ, ಪ.ಪಂ.ಅಧ್ಯಕ್ಷ ನಜೀರ್ ಅಹಮದ್, ತಾ.ಪಂ.ಸದಸ್ಯ ವೆಂಕಟರಾಮಯ್ಯ, ತಹಸೀಲ್ದಾರ್ ಶೋಭಾ, ಪ್ರಭಾರ ಇಒ ಶ್ರೀಧರಮೂರ್ತಿ ಇತರರು ಹಾಜರಿದ್ದರು.

ಚಿಕ್ಕನಾಯಕನಹಳ್ಳಿ: 25 ಲಕ್ಷ ಬಿಡುಗಡೆ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ 18 ಗ್ರಾಮಗಳಲ್ಲಿ ತ್ವರಿತ ಕಾಮಗಾರಿ ಕೈಗೊಳ್ಳಲು ರೂ.25ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರಾಜು ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಶನಿವಾರ ತಾಲ್ಲೂಕಿನ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಕ್ಷಣ ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

ತಾಲ್ಲೂಕಿನ 18 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರೂ.25 ಲಕ್ಷ ಬಿಡುಗಡೆ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಕಾಮಗಾರಿಗಳನ್ನು ಮಾರ್ಚ್ 8ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹನ್ನೆರೆಡು ಕಡೆ ವಿದ್ಯುತ್ ಪರಿವರ್ತಕದ ಸಮಸ್ಯೆಯಿದ್ದು ಇನ್ನೊಂದು ವಾರದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದ ಸಿಇಒ ಅಗತ್ಯವಿರುವ 14 ಸ್ಥಳಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಹುಳಿಯಾರು ಪಟ್ಟಣಕ್ಕೆ ಬೋರನಕಣಿವೆಯಿಂದ ಸರಬರಾಜಾಗುವ ನೀರು ಕಲುಷಿತವಾಗುತ್ತಿದ್ದು, ಈ ಸಮಸ್ಯೆ ನಿವಾರಣೆಗಾಗಿ ತಕ್ಷಣವೇ ರೂ.1ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಬೇಸಿಗೆಯಲ್ಲಿ ಎಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತಕ್ಷಣ ಕರೆಗೆ ಸ್ಪಂದಿಸುವ ಸಹಾಯ ವಾಣಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಬರಗೂರು, ಮಲ್ಲಿಗೆರೆ ಹಾಗೂ ದೊಡ್ಡಎಣ್ಣೆಗೆರೆ ಗ್ರಾಮ ಪಂಚಾಯಿತಿ ಕನಿಷ್ಠ ಸಾಧನೆ ಮಾಡಿದ ಕಾರಣ ಅಲ್ಲಿನ ಅಭಿವೃದ್ಧಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅರಣ್ಯ, ತೋಟಗಾರಿಕೆ ಹಾಗೂ ಜಲಾನಯನ ಇಲಾಖೆ ಜಿಲ್ಲಾ ಪಂಚಾಯಿತಿ ಅನುದಾನ ಬಳಕೆಯಲ್ಲಿ ವೈಫಲ್ಯವಾದ ಕಾರಣ 20 ದಿನದ ಅವಕಾಶ ನೀಡಿದ್ದು, ಅಷ್ಟರಲ್ಲಿ ಅನುದಾನ ಬಳಸುವಂತೆ ತಾಕೀತು ಮಾಡಲಾಗಿದೆ ಎಂದರು.

ತಹಶೀಲ್ದಾರ್ ಉಮೇಶ್‌ಚಂದ್ರ, ಇಒ ದಯಾನಂದ್, ತಾಲ್ಲೂಕು ನೋಡಲ್ ಅಧಿಕಾರಿ ಆಂಜನಪ್ಪ ಇದ್ದರು.
ಕೇಂದ್ರಸ್ಥಾನದಲ್ಲಿರಲು ಸೂಚನೆ

ಕುಣಿಗಲ್: ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ ಮತ್ತು ವಾಟರ್‌ಮೆನ್‌ಗಳು ಕೇಂದ್ರಸ್ಥಾನದಲ್ಲಿದ್ದು, ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಯ ಕ್ಷಿಪ್ರ ಪರಿಹಾರಕ್ಕಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೇಸಿಗೆ ಕಾಲವಾದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವಂತೆ ಎಚ್ಚರಿಸಿದರು.

ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಲು ತಾಲ್ಲೂಕು ಕೇಂದ್ರದಲ್ಲಿ ಜಲ ಸೇವಾ ನಿಯಂತ್ರಣ ಕೊಠಡಿ ಆರಂಭಿಸಲಾಗಿದ್ದು, ತಾಲ್ಲೂಕು ಪಂಚಾಯಿತಿ ಇಒ ದೂರವಾಣಿ ಸಂಖ್ಯೆ 220929, ತಹಶೀಲ್ದಾರ್ ಕಚೇರಿ- 220617 ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ- 220239 ದೂರವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಶಾಮಯ್ಯ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ರಾಮಚಂದ್ರಪ್ಪ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಂಜಿನಿಯರ್‌ಗಳು, ಬೆಸ್ಕಾಂ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು,  36 ಗ್ರಾಮ ಪಂಚಾಯಿತಿಗಳ ಪಿಡಿಒ, ಕಾರ್ಯದರ್ಶಿ, ನೋಡಲ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.