ADVERTISEMENT

ಕುಣಿಗಲ್‌ನಲ್ಲಿ ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 6:25 IST
Last Updated 6 ಆಗಸ್ಟ್ 2013, 6:25 IST

ಕುಣಿಗಲ್: ಅನ್ಯ ಧರ್ಮದ ಯುವಕ-ಯುವತಿ ವಿಚಾರದಲ್ಲಿ ಪಟ್ಟಣದ ಕೆನರಾ ಬ್ಯಾಂಕ್ ಬಸ್ ನಿಲ್ದಾಣದ ಸಮೀಪ ಜಮಾಯಿಸಿದ್ದ ಗುಂಪನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಸೋಮವಾರ ರಾತ್ರಿ 8.30ರ ವೇಳೆಯಲ್ಲಿ ಚದುರಿಸಿದರು. ಯುವಕ- ಯುವತಿಯನ್ನು ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದರು. ನಂತರ ಪೋಷಕರ ವಶಕ್ಕೆ ಒಪ್ಪಿಸಿದರು.

ನೆಲಮಂಗಲದ ಗಾರ್ಮೆಂಟ್ಸ್ ಕಾರ್ಖಾನೆಗೆ ಉದ್ಯೋಗಕ್ಕೆ ಹೋಗುವ ಮಾಗಡಿ ತಾಲ್ಲೂಕು ಮರೂರಿನ ಯುವತಿ ಹಾಗೂ ತಾಲ್ಲೂಕಿನ ಅಮೃತೂರಿನ ಯುವಕ ಅನ್ಯ ಧರ್ಮೀಯರಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದರು. ಸೋಮವಾರ ಯುವತಿಯ ಜನ್ಮದಿನ. ಈಕೆ ತನ್ನ ಸ್ನೇಹಿತರಿಗೆ ನೆಲಮಂಗಲದಲ್ಲಿ ಸಿಹಿ ವಿತರಿಸಿ ಕುಣಿಗಲ್‌ಗೆ ಬಂದಿದ್ದರು. ಈ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಿಕ್ಕಿದ ಸ್ನೇಹಿತ ಸಿಹಿ ಕೊಡಿಸುವುದಾಗಿ ಬೇಕರಿಗೆ ಕರೆದೊಯ್ದಿದ್ದಾನೆ. ಇದನ್ನು ಗಮನಿಸಿದ ಹುಡುಗಿಯ ಧರ್ಮದ ಯುವಕರ ಗುಂಪು ಇಬ್ಬರನ್ನು ಹಿಡಿದು ಥಳಿಸಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗುಂಪಿನಿಂದ ಇಬ್ಬರನ್ನು ರಕ್ಷಿಸಿದ್ದಾರೆ. ನಂತರ ಹುಡಗಿಯನ್ನು ಠಾಣೆಗೆ ಕರೆತರುವಂತೆ ಸೂಚಿಸಿ ಹುಡುಗನನ್ನು ಕರೆದೊಯ್ದರು. ಪೊಲೀಸರ ಆದೇಶದಂತೆ ಹುಡುಗಿಯನ್ನು ಆಟೊದಲ್ಲಿ ಕರೆದೊಯ್ಯುವಾಗ, ಗುಂಪು ಅಡ್ಡಿಪಡಿಸಿದೆ. ಠಾಣೆಗೆ ಕರೆದೊಯ್ಯುವ ಬದಲು ಬುದ್ಧಿ ಮಾತು ಹೇಳಿ ಊರಿಗೆ ಕಳುಹಿಸಿಕೊಡೋಣ ಎಂದಿದೆ.

ಈ ವಿಚಾರದಲ್ಲಿ ಒಂದೇ ಧರ್ಮದ ಎರಡು ಗುಂಪುಗಳ ನಡುವೆ ಪರ-ವಿರೋಧ ಚರ್ಚೆ ನಡೆದು ತಳ್ಳಾಟ ಸಂಭವಿಸಿದೆ. ಇದರಿಂದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆನರಾ ಬ್ಯಾಂಕ್ ಬಸ್ ನಿಲ್ದಾಣದ ಬಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.