ADVERTISEMENT

ಕುರಿಹಳ್ಳಿ ಕ್ರೀಡಾ ಚಾಂಪಿಯನ್ ಶಿವಮ್ಮ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 8:15 IST
Last Updated 14 ಮಾರ್ಚ್ 2012, 8:15 IST

ನಲವತ್ತೊಂದು ವರ್ಷಗಳ ಹಿಂದೆ ಹಳ್ಳಿಯಿಂದ ದೂರದೂರಿನ ಶಾಲೆಗೆ ನಡೆಯುತ್ತಿದ್ದ ಬಾಲಕಿಗೆ, ಮುಂದೊಂದು ದಿನ ಪ್ರಶಸ್ತಿಗಾಗಿ ದೇಶ-ವಿದೇಶದಲ್ಲಿ ಓಡಬೇಕಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಅಂಥ ಬಾಲೆಯ ಸಾಧನೆಯ ಹಾದಿ ದೊಡ್ಡದು.

ತೋವಿನಕೆರೆ ಸಮೀಪದ ನೂರು ಮನೆಗಳಿರುವ ಗ್ರಾಮ ಕುರಿಹಳ್ಳಿ. ಗ್ರಾಮದ ದಿ.ಕೆ.ವಿ.ಚಂದ್ರೇಗೌಡ, ಸಿದ್ದಲಿಂಗಮ್ಮ ದಂಪತಿ ಆರನೇ ಮಗುವೇ ಶಿವಮ್ಮ. ಸಾಧನೆಯ ಪಥದಲ್ಲಿ ಸಾಗಿಬಂದ ಛಲಗಾತಿ. ಎಂಟು ಮಕ್ಕಳ ರೈತ ಕುಟುಂಬದಲ್ಲಿ ಜನಿಸಿದ ಶಿವಮ್ಮ ಓದಿ ಗಾಗಿ ಕುರಿಹಳ್ಳಿಯಿಂದ ತೋವಿನಕೆರೆಗೆ ನಿತ್ಯ ನಡೆದು ಬರುತ್ತಿದ್ದರು.

ಶಾಲೆಗಾಗಿ ಆರಂಭವಾದ ಈ ನಡಿಗೆ ಭವಿಷ್ಯದಲ್ಲಿ ಪ್ರಶಸ್ತಿಯ ಸುರಿಮಳೆಯನ್ನೇ ಸುರಿಸಿತು.
ಪ್ರೌಢಶಾಲೆ, ಕಾಲೇಜು ಓದಿನ ದಿನಗಳಲ್ಲಿ ಅಥ್ಲೆ ಟಿಕ್ಸ್, ಕೊಕ್ಕೊ, ಕಬಡ್ಡಿ, ಎತ್ತರ ಜಿಗಿತ, ಉದ್ದ ಜಿಗಿತ ಸ್ಪರ್ಧೆಗಳಲ್ಲಿ ಕೆ.ಸಿ.ಶಿವಮ್ಮ ಹೆಸರು ಜಿಲ್ಲೆಯಲ್ಲಿ ಜನಪ್ರಿಯ. 1972ರಲ್ಲಿ ಜಿಲ್ಲಾ ಪ್ರತಿನಿಧಿಯಾಗಿ ಉದ್ದ ಜಿಗಿತ, ಕಬಡ್ಡಿಯಲ್ಲಿ ಬಹುಮಾನ ಪಡೆದರು. 1984 ರಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

ಅಖಿಲ ಭಾರತ ಗ್ರಾಮೀಣ ಕ್ರೀಡೆ, ಮಹಾರಾಷ್ಟ್ರ ದಲ್ಲಿ ನಡೆದ 32ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯ ನ್‌ಷಿಪ್, 1985ರಲ್ಲಿ ನಡೆದ ಹತ್ತನೇ ರಾಷ್ಟ್ರೀಯ ಹೆಣ್ಣು ಮಕ್ಕಳ ಕ್ರೀಡಾಕೂಟ, 1986ರಲ್ಲಿ ಬೆಂಗಳೂ ರಿನಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್,ತಮಿಳುನಾಡಿನಲ್ಲಿ ನಡೆದ ಅಖಿಲ ಭಾರತ `ಎ~ ಶ್ರೇಣಿ ಕಬಡ್ಡಿ ಪಂದ್ಯಾವಳಿ, 1988ರಲ್ಲಿ ನಡೆದ 12ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

2007ರಲ್ಲಿ ಬೆಂಗಳೂರಿನಲ್ಲಿ ನಡೆದ ಮುಕ್ತ ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉದ್ದ ಜಿಗಿತ, 100 ಮೀಟರ್ ಓಟದಲ್ಲಿ ಪ್ರಥಮ, 200 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು, ಆಸ್ಟ್ರೇ ಲಿಯಾ, ನ್ಯೂಜಿಲೆಂಡ್‌ನಲ್ಲಿ ನಡೆದ ಅಂತರ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಯ 3 ಕಿ.ಮೀ. ರಸ್ತೆ ಓಟದಲ್ಲಿ  ಚಿನ್ನದ ಪದಕ ಪಡೆದಿದ್ದಾರೆ.

2008-09ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ 100, 200 ಮೀ ಓಟದಲ್ಲಿ ಪ್ರಥಮ, 5 ಕಿ.ಮೀ. ನಡಿಗೆಯಲ್ಲಿ ದ್ವಿತೀಯ, ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ ಯಾದರು. ಮಲೇಷಿಯಾದ ಫೆರಿಲಿಸ್‌ನಲ್ಲಿ ನಡೆದ 22ನೇ ಹಿರಿಯರ ಮುಕ್ತ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶ ಪ್ರತಿನಿಧಿಸಿ, ರಿಲೆ ಓಟದಲ್ಲಿ ಎರಡು ಚಿನ್ನದ ಪದಕ, ಮೂರು ಕಿ.ಮೀ ನಡಿಗೆಯಲ್ಲಿ ಬೆಳ್ಳಿಪದಕ, 100, 200 ಮೀಟರ್ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

2009ರಲ್ಲಿ ಲಕ್ನೋದಲ್ಲಿ ನಡೆದ 30ನೇ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್, 100, 200, 400, 800 ಮೀಟರ್ ಓಟದಲ್ಲಿ ಪ್ರಥಮ, 2010ರಲ್ಲಿ ಪುಣೆಯಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲೂ 100, 200, 400 ಮೀಟರ್ ಓಟದಲ್ಲಿ ಪ್ರಥಮ, 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ತಮಿಳುನಾಡಿನ ಈರೋಡ್‌ನಲ್ಲಿ ನಡೆದ ದಕ್ಷಿಣ ಭಾರತ ಅಥ್ಲೆಟಿಕ್ ಸ್ಪರ್ಧೆಯ 45 ವರ್ಷ ಮೇಲ್ಪಟ್ಟು ವಿಭಾಗದಲ್ಲಿ 100, 200, 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಶಿವಮ್ಮ ಪ್ರಸ್ತುತ ಬೆಂಗಳೂರಿನ ರಮಣಶ್ರೀ ಉದಯ ವಿದ್ಯಾಸಂಸ್ಥೆಯಲ್ಲಿ ಇಪ್ಪತ್ತೊಂಬತ್ತು ವರ್ಷದಿಂದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಗರಡಿಯಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಬೆಳಕಿಗೆ ಬಂದಿದ್ದಾರೆ. ಪತಿ ವಿಜಯದೇವ್ ಹಾಗೂ ಇಬ್ಬರು ಮಕ್ಕಳೊಂದಿಗೆ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.