ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 9:05 IST
Last Updated 12 ಅಕ್ಟೋಬರ್ 2011, 9:05 IST

ತುಮಕೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆಯನ್ನು ವಿರೋಧಿಸಿ ಬಿಜೆಪಿ ನಗರ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಓಟ್ ಬ್ಯಾಂಕ್‌ಗಾಗಿ ಅಲ್ಪ ಸಂಖ್ಯಾತರನ್ನು ತೃಪ್ತಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ ಎಂದು ಕಿಡಿಕಾರಿದರು.

ದೇಶವನ್ನು ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂದು ವಿಭಾಗಿಸಿ ಗೊಂದಲ ಸೃಷ್ಟಿಗೆ ಯತ್ನಿಸುತ್ತಿದೆ. ಇದರೊಂದಿಗೆ ಕ್ಷುಲ್ಲಕ ರಾಜಕೀಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಪ್ರತಿಭಟನೆ ನೇತೃತ್ವವನ್ನು ನಗರ ಯುವ ಮೋರ್ಚಾ ಅಧ್ಯಕ್ಷ ಕೆ.ಎಸ್.ವಿಶ್ವನಾಥ್, ಉಪಾಧ್ಯಕ್ಷ ಚಂದನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಎಸ್.ರಮೇಶ್ ಇತರರು ವಹಿಸಿದ್ದರು.

ಮಸೂದೆಗೆ ವಿರೋಧ
ಕುಣಿಗಲ್:
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಡಿ.ಕೃಷ್ಣಕುಮಾರ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಕುಮಾರ್  ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕರಾಮಣ್ಣ, ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಎಚ್.ಎನ್.ನಟರಾಜ್, ಕೆ.ಎಂ.ತಿಮ್ಮಪ್ಪ, ಬ್ಯಾಡಗೆರೆ ನಾಗರಾಜ್, ಕೆ.ಕೆ.ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.

ತಹಶೀಲ್ದಾರ್ ಎಸ್.ಆರ್.ಕೃಷ್ಣಯ್ಯ ಅವರಿಗೆ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಮನವಿಪತ್ರ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.