ADVERTISEMENT

`ಕೊಳೆಗೇರಿಗಳು ಮತ ಬ್ಯಾಂಕ್ ಆಗಬಾರದು'

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:08 IST
Last Updated 19 ಡಿಸೆಂಬರ್ 2012, 11:08 IST

ತುಮಕೂರು: ಕೊಳೆಗೇರಿ ಜನತೆ ರಾಜಕೀಯ ಪಕ್ಷಗಳ ಮತ ಬ್ಯಾಂಕ್ ಆಗಬಾರದು. ತಮ್ಮ ಸೌಲಭ್ಯಗಳಿಗಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.

ಸ್ಲಂ ಜನಾಂದೋಲನ ಮತ್ತು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮಂಗಳವಾರ ಏರ್ಪಡಿಸಿದ್ದ ಜಾಥಾದಲ್ಲಿ ಮಾತನಾಡಿ, ಸ್ಲಂ ಜನರ ಮತಗಳನ್ನು ಹಣಕ್ಕೆ ಖರೀದಿ ಮಾಡುವ ರಾಜಕಾರಣಿಗಳು ನಮ್ಮ ಬದುಕನ್ನು ಬೀದಿಗೆ ತರುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.

ಕಳೆದ ನಾಲ್ಕು ವರ್ಷಗಳಿಂದ ಬಡವರ ಪಾಲಿಗೆ ಸರ್ಕಾರ ಉಳಿದಿಲ್ಲ. ರಾಜ್ಯದ ಯಾವುದೇ ಬಡವರಿಗೆ ನಿವೇಶನ, ವಸತಿ ಸೌಲಭ್ಯ ನೀಡಿಲ್ಲ. ಕೊಳೆಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾತ್ರ ನಡೆಯುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸುವ ಕೆಲಸವಾಗುತ್ತಿಲ್ಲ. ಕಳೆದ 20 ವರ್ಷಗಳಿಂದ ನಗರದ ಶಾಸಕರು ಸಹ ಕೊಳೆಗೇರಿ ನಿವಾಸಿಗಳಿಗಾಗಿ ಒಂದೇಒಂದು ಕೆಲಸ ಮಾಡಿಲ್ಲ ಎಂದು ಅವರು ಆಪಾದಿಸಿದರು.

ಕೊಳೆಗೇರಿಗಳಿಗೆ ರಸ್ತೆ, ನೀರು, ಬೀದಿ ದೀಪ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲಾಗಿಲ್ಲ. ರಾಜ್ಯದ ಶೇ 83 ಕೊಳೆಗೇರಿ ಪ್ರದೇಶಗಳು ಸರ್ಕಾರದ ಜಾಗದಲ್ಲಿವೆ. ಎಲ್ಲರಿಗೂ ಹಕ್ಕುಪತ್ರ ನೀಡಬೇಕೆಂಬ ಹೋರಾಟ ನಡೆಯುತ್ತಿದೆ. ಆದರೆ ಉದ್ಯಮಿಗಳಿಗೆ ಸಾವಿರಾರು ಎಕರೆ ನೀಡುವ ಸರ್ಕಾರ ನಮಗೆ ನಿವೇಶನ ನೀಡುತ್ತಿಲ್ಲ. ಸಂಘಟನೆ, ಹೋರಾಟದಿಂದ ಮಾತ್ರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಐಸಾಕ್ ಅರುಳ್ ಸೆಲ್ವ, ಸಿಐಟಿಯು ಕಾರ್ಯದರ್ಶಿ ಸೈಯದ್‌ಮುಜೀಬ್, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಲ್ತಾಫ್, ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು. ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಟೌನ್‌ಹಾಲ್ ವೃತ್ತದವರೆಗೆ ಜಾಥಾ ನಡೆಯಿತು.

ಜೈಲ್‌ಭರೋ ಇಂದು
ತುಮಕೂರು:
ರಾಷ್ಟ್ರದಾದ್ಯಂತ ಜೈಲ್‌ಭರೋ ಚಳವಳಿ ಹಮ್ಮಿಕೊಂಡಿದ್ದು, ಜಿಲ್ಲಾ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಡಿ.19ರಂದು ನಗರದಲ್ಲಿ ಹಲ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೈಲ್‌ಭರೋ ಚಳವಳಿ, ಕೇಂದ್ರ ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್ ಕಚೇರಿ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.