ADVERTISEMENT

ಕ್ಷೀಣಿಸುತ್ತಿರುವ ರೇಷ್ಮೆ ಕೃಷಿ-ಆತಂಕ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:04 IST
Last Updated 19 ಡಿಸೆಂಬರ್ 2012, 11:04 IST

ಕುಣಿಗಲ್: ದೇಶದ ರೇಷ್ಮೆ ಉದ್ಯಮಕ್ಕೆ ಮೈಸೂರು ಬಿತ್ತನೆ ವಲಯ ಮಾತೃ ಸ್ಥಾನದಲ್ಲಿದೆ. ಸರ್ಕಾರದ ದಂದ್ವ ನೀತಿ, ರೈತರ ನಿರ್ಲಕ್ಷ್ಯದಿಂದ ರೇಷ್ಮೆ ಕೃಷಿ ಕ್ಷೀಣಿಸುತ್ತಿದೆ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ವಿಷಾದಿಸಿದರು.

ತಾಲ್ಲೂಕಿನ ಚಲಮಸಂದ್ರ ಗ್ರಾಮದಲ್ಲಿ ಸೋಮವಾರ ನಡೆದ `ರೇಷ್ಮೆ ಕೃಷಿ ಕ್ಷೇತ್ರೋತ್ಸವ'ದಲ್ಲಿ ಮಾತನಾಡಿ, ಅಧಿಕಾರಿಗಳು ಬಿತ್ತನೆ ವಲಯಕ್ಕೆ ಸರ್ಕಾರ ನೀಡುತ್ತಿರುವ ಸವಲತ್ತುಗಳ ಅರಿವು ಮೂಡಿಸಿ ಹೆಚ್ಚಿನ ಉತ್ಪಾದನೆ ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ರೈತರೂ ಸಹ ಕೃಷಿ ಚಟುವಟಿಕೆ ಜತೆಗೆ ರೇಷ್ಮೆ ಸಾಕಣೆಗೂ ಹೆಚ್ಚಿನ ಗಮನಹರಿಸಿ ಕ್ಷೀಣಿಸುತ್ತಿರುವ ರೇಷ್ಮೆ ಕೃಷಿಗೆ ಮರು ಜೀವ ನೀಡುವಂತೆ ಮನವಿ ಮಾಡಿದರು.

ಜಂಟಿ ನಿರ್ದೇಶಕ ಆರ್.ಪ್ರಭಾಕರ್ ಮಾತನಾಡಿ, ಚಲಮಸಂದ್ರ ಮತ್ತು ಶಿವನಹಳ್ಳಿ ಗ್ರಾಮಗಳು ಮೈಸೂರು ಬಿತ್ತನೆ ವಲಯದಿಂದ ಕೈಬಿಟ್ಟು ಹೋಗುವ ಪರಿಸ್ಥಿತಿ ಇದ್ದು, ಶಾಸಕರ ಪ್ರಯತ್ನದಿಂದ ಬಿತ್ತನೆ ವಲಯದಲ್ಲಿ ಉಳಿದಿದೆ.

ಸರ್ಕಾರವು ರೇಷ್ಮೆ ಕೃಷಿ ಅಭಿವೃದ್ಧಿಗೆ ರೂ. 85 ಲಕ್ಷ ಮಂಜೂರು ಮಾಡಿದ್ದು, 35 ಲಕ್ಷ ಬಿಡುಗಡೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಅನುದಾನದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸೌಭಾಗ್ಯಮ್ಮ, ಉಪಾಧ್ಯಕ್ಷ ಬೋರಯ್ಯ, ಸಹಾಯಕ ನಿರ್ದೇಶಕ ರವಿ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೈತರಿಗೆ ಅಗತ್ಯ ಸಲಕರಣೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT