ADVERTISEMENT

ಖಾಸಗಿ ಟ್ಯಾಂಕರ್ ಬಳಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 6:26 IST
Last Updated 23 ಜುಲೈ 2013, 6:26 IST

ಮಧುಗಿರಿ: ಕುಡಿಯುವ ನೀರು ಪೂರೈಸಲು ಪುರಸಭೆ ಆಡಳಿತ ವಿಫಲವಾಗಿದೆ. ಸ್ವಂತ ಟ್ಯಾಂಕರ್‌ಗಳಿದ್ದರೂ ಬಳಸದೆ; ಬಾಡಿಗೆ ಟ್ಯಾಂಕರ್‌ಗಳ ಮೊರೆ ಹೋಗಿದೆ. ಇದರಿಂದ ನೀರಿನ ಸಮಸ್ಯೆ ಬಗೆಹರಿಯದಿದ್ದರೂ, ಟ್ಯಾಂಕರ್ ಮಾಲೀಕರ ಕಿಸೆ ತುಂಬುತ್ತಿದೆ.

ಕಳೆದ ವರ್ಷ ಬಾಡಿಗೆ ಟ್ಯಾಂಕರ್‌ಗಳಿಗೆ ರೂ.4.50 ಲಕ್ಷ ವೆಚ್ಚ ಮಾಡಿದ್ದರೆ, 2013ರ ಫೆಬ್ರುವರಿಯಿಂದ ನಾಲ್ಕು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ಈಗಾಗಲೇ ಇದರ ವೆಚ್ಚ ರೂ.12.50 ಲಕ್ಷ ದಾಟಿದೆ. ಹಣ ಮಂಜೂರಿಗಾಗಿ ಜಿಲ್ಲಾಧಿಕಾರಿಗೆ ಪುರಸಭೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ 23 ವಾರ್ಡ್‌ಗಳಿಗೆ 49 ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಇದರ ಜತೆಗೆ ಹೊಸದಾಗಿ ಆರು ಬೋರ್‌ವೆಲ್ ಕೊರೆಸಲು ಅನುದಾನ ಬಿಡುಗಡೆಯಾಗಿದೆ. ಇರುವ ನೀರನ್ನೇ ಸಮರ್ಪಕವಾಗಿ ಬಳಸಿಕೊಂಡರೆ ಸಮಸ್ಯೆ ಕಾಡುವುದಿಲ್ಲ. ಆದರೂ ಪುರಸಭೆ ಆಡಳಿತ ಖಾಸಗಿ ಟ್ಯಾಂಕರ್ ಬಳಸುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದು.

ನಿತ್ಯ 8400 ರೂಪಾಯಿ ವೆಚ್ಚ ಮಾಡಿ ನೀರು ಪೂರೈಸುತ್ತಿದ್ದರೂ; ಇದು ಬಡವರ ಬೀದಿಗೆ ತಲುಪದೆ ಪ್ರಭಾವಿಗಳ, ಅಧಿಕಾರಿಗಳ ಮನೆಯ ಸಂಪು ತುಂಬುತ್ತಿದೆ. ಪುರಸಭೆ ಟ್ಯಾಂಕರ್‌ಗಳನ್ನೇಕೆ ಬಳಸಿಕೊಳ್ಳುತ್ತಿಲ್ಲ ಎಂದು ಕಿರಿಯ ಎಂಜಿನಿಯರ್ ಶ್ರೀರಂಗ ಅವರನ್ನು ಪ್ರಶ್ನಿಸಿದರೆ ವಾಹನ ಚಾಲಕರ ಕೊರತೆಯಿದೆ ಎಂದು ತಿಳಿಸುತ್ತಾರೆ. ಪುರಸಭೆ ಸ್ವಂತ ಟ್ಯಾಂಕರ್ ಹೊಂದಿದ್ದರೂ ಬಾಡಿಗೆ ಟ್ಯಾಂಕರ್ ಬಳಸುವುದು ಆರ್ಥಿಕ ಹೊರೆಯಾಗುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿ ದುಂದುವೆಚ್ಚ ಮಾಡುತ್ತಿದ್ದಾರೆ ಎಂಬ ಟೀಕೆ ಪಟ್ಟಣದೆಲ್ಲೆಡೆ ಕೇಳಿ ಬರುತ್ತಿದೆ.

ಸಮಸ್ಯೆ ಹೊತ್ತು ಪುರಸಭೆ ಕಚೇರಿಗೆ ಬಂದರೂ ನೌಕರರು ಯಾರೊಬ್ಬರು ಇರುವುದಿಲ್ಲ. ಬಹಳಷ್ಟು ನೌಕರರು ತುಮಕೂರಿನಿಂದ ನಿತ್ಯ ಓಡಾಡುತ್ತಿರುವುದು ಸಮಸ್ಯೆಗೆ ಕಾರಣ. ಎಲ್ಲವೂ ಗೊತ್ತಿದ್ದರೂ ಹಿರಿಯ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ ಎಂದು ಪಟ್ಟಣದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.