ADVERTISEMENT

ಗುಡುಗು ಸಹಿತ ಮಳೆ; ಉರುಳಿದ ಕಂಬಗಳು

ತುರುವೇಕೆರೆ: ಹಾರಿಹೋದ ಶೀಟ್‌ಗಳು; ಟ್ರಾನ್ಸ್‌ಫಾರ್ಮರ್‌– ವಿದ್ಯುತ್‌ ಕಂಬಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಮೇ 2018, 10:21 IST
Last Updated 21 ಮೇ 2018, 10:21 IST
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಾವಿನಕೆರೆಯಲ್ಲಿ ಟ್ರಾನ್ಸ್‌ಫಾರ್ಮರ್‌ ಮಳೆಗಾಳಿಗೆ ನೆಲಕ್ಕೆ ಬಿದ್ದಿದೆ
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಾವಿನಕೆರೆಯಲ್ಲಿ ಟ್ರಾನ್ಸ್‌ಫಾರ್ಮರ್‌ ಮಳೆಗಾಳಿಗೆ ನೆಲಕ್ಕೆ ಬಿದ್ದಿದೆ   

ತುರುವೇಕೆರೆ: ತಾಲ್ಲೂಕಿನ ವಿವಿಧೆಡೆ ಶನಿವಾರ ರಾತ್ರಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಆಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ತಾಲ್ಲೂಕಿನ ಗಡಿ ಗ್ರಾಮ ಕುರುಬರಹಳ್ಳಿಯಲ್ಲಿ ಮಳೆ – ಗಾಳಿಗೆ ಮರ ಬಿದ್ದು 2 ವಿದ್ಯುತ್ ಕಂಬಗಳು ಮುರಿದಿವೆ. 3ಕ್ಕೂ ಹೆಚ್ಚು ಮನೆಯ ಶೀಟ್‌ಗಳು ಧರೆಗುರುಳಿವೆ. ಪಕ್ಕದ ಗ್ರಾಮವಾದ ಮತ್ತಿಘಟ್ಟ ಕಾಲೊನಿಯ ಚನ್ನಮ್ಮ, ಬಸವರಾಜು, ರಾಜು ಎಂಬುವವರ ಮನೆಯ ಶೀಟ್‌ಗಳು ಹಾಗೂ ಶಿವಯ್ಯ ಎಂಬುವರ ಮನೆಯ ಹೆಂಚುಗಳು ಮಳೆ ಗಾಳಿಗೆ ಹಾರಿ ಹೋಗಿವೆ.

ಮಾಯಸಂದ್ರ ಹೋಬಳಿಯ ದೇವನಾಯಕನಹಳ್ಳಿ- ನಾಗಲಾಪುದಲ್ಲಿ ಮರಬಿದ್ದು 1 ವಿದ್ಯುತ್‌ ಕಂಬ, ಮಾವಿನಕೆರೆಯಲ್ಲಿ ಒಂದು ಕಂಬ ಮತ್ತು ಟ್ರಾನ್ಸ್‌ಫಾರ್ಮರ್‌ ಮುರಿದಿವೆ. ಕಾಡಸೂರಿನಲ್ಲಿ 1 ವಿದ್ಯುತ್‌ ಕಂಬ ಮತ್ತು ಟ್ರಾನ್ಸ್‌ಫಾರ್ಮರ್‌ ಜಖಂಗೊಂಡಿದೆ. ವಡನವಹಳ್ಳಿಯಲ್ಲಿ ಮರದ ಕೊಂಬೆಗಳು ವಿದ್ಯುತ್ ಲೈನ್ ಮೇಲೆ ಬಿದ್ದುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ADVERTISEMENT

ಮಳೆಯಿಂದ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಜೋಳ ಮತ್ತು ಉದ್ದು ಬೆಳೆಗೆ ಅನುಕೂಲವಾಗಿದೆ. ಇನ್ನೊಂದೆಡೆ ತೆಂಗು ಮತ್ತು ಅಡಿಕೆ ಬೆಳೆಗೆ ತಂಪೆರೆದಿದೆ.

ಸಂಪಿಗೆ ವ್ಯಾಪ್ತಿಯ ಗ್ರಾಮಗಳಲ್ಲಿ 13.6 ಮಿ.ಮೀ, ಮಾಯಸಂದ್ರದಲ್ಲಿ 37.4 ಮಿ.ಮೀ, ತುರುವೇಕೆರೆ ಪಟ್ಟಣ 40.8ಮಿ.ಮೀ, ದಬ್ಬೇಘಟ್ಟದಲ್ಲಿ 30 ಮಿ.ಮೀ ಮಳೆ ಆಗಿರುವುದು ಮಳೆ ಮಾಪಕದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.