ADVERTISEMENT

ಗ್ಯಾಸ್‌ ದರ ಹೆಚ್ಚಳ; ವಿವಿಧ ಸಂಘಟನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 11:04 IST
Last Updated 3 ಜನವರಿ 2014, 11:04 IST

ತುಮಕೂರು: ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಅಡುಗೆ ಅನಿಲ ಮತ್ತು ಆಟೊ ಗ್ಯಾಸ್‌ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿ ನಗರ­ದಲ್ಲಿ ಬಿಜೆಪಿ, ಸಿಪಿಎಂ, ಜೆಡಿಯು ಸೇರಿದಂತೆ ವಿವಿಧ ಸಂಘಟನೆ­ಗಳು ಗುರು­ವಾರ ಪ್ರತಿಭಟನೆ ನಡೆಸಿದವು.   ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿ­ಸು­ತ್ತಿದೆ ಎಂದು ಸಂಘಟನೆಗಳ ಕಾರ್ಯ­ಕರ್ತರು ಘೋಷಣೆ ಕೂಗಿದರು.

ಆಟೊ ಚಾಲಕರ ಪ್ರತಿಭಟನೆ
ಸಬ್ಸಿಡಿ ರಹಿತ ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಅಖಿಲ ಕರ್ನಾಟಕ ಆಟೊ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಸದಸ್ಯರು ನಗರದ ಜಿಲ್ಲಾಧಿ­ಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಏಕಾಏಕಿ ಒಂದು ತಿಂಗಳ ಅವಧಿಯಲ್ಲಿ 2 ಬಾರಿ ಗ್ಯಾಸ್‌ ದರ ಹೆಚ್ಚಳ ಮಾಡಿರುವುದು ಸಾಮಾನ್ಯ ಜನರಿಗೆ ಹೊರೆಯಾಗಿದೆ. ಆಟೊ ಬಿಡಿ ಭಾಗಗಳು, ದಿನ ಬಳಕೆ ವಸ್ತುಗಳ ಬೆಲೆ ದಿನ ನಿತ್ಯ ಹೆಚ್ಚಳವಾಗುತ್ತಿದೆ. ಈ ನಡುವೆ ಗ್ಯಾಸ್‌ ಬೆಲೆ ಹೆಚ್ಚಳ ಆಘಾತ­ಕಾರಿಯಾಗಿದೆ. ಆಟೊ ಪ್ರಯಾಣ ದರವನ್ನು ಪರಿಷ್ಕರಿಸಬೇಕು ಎಂದು ಆಗ್ರ­ಹಿಸಿ ಜಿಲ್ಲಾಧಿಕಾರಿಗೆ ಪ್ರತಿಭಟನಾ­ಕಾರರು ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ವಿ.ಪ್ರತಾಪ್‌, ಮುಖಂಡರಾದ ಕುಮಾರಸ್ವಾಮಿ, ಬಾಬು ಹನುಮಂತಪುರ, ಇಮ್ತಿ­ಯಾಜ್‌ ಪಾಷಾ, ಲಿಂಗಣ್ಣ, ಪ್ರಕಾಶ್‌, ತಿಪ್ಪೇಸ್ವಾಮಿ, ರಾಮಸ್ವಾಮಿ, ಪರಮೇಶ್‌, ಅಕ್ರಂ, ಜಗದೀಶ್‌, ವೆಂಕಟೇಶ್‌ ಇತರರು ಭಾಗವಹಿಸಿದ್ದರು.

ಬೆಲೆ ಏರಿಕೆ ಹಿಂಪಡೆಯಲು ಆಗ್ರಹ
ಸಹಾಯಧನ ರಹಿತ ಗ್ಯಾಸ್ ಸಿಲಿಂ­ಡರ್ ದರವನ್ನು ರೂ. 220 ಹೆಚ್ಚಳ ಮಾಡಿರುವುದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಪ್ರತಿನಿತ್ಯ ಬೆಲೆ ಹೆಚ್ಚಳದ ನಡುವೆ ಬದುಕುತ್ತಿರುವ ಜನತೆ ಮೇಲೆ ಈ ರೀತಿ ಹೊರೆ ಹಾಕುವುದು ಸರಿಯಲ್ಲ. 9 ಸಿಲಿಂಡರ್‌ಗೆ ಸಹಾಯಧನ ಸೀಮಿತಗೊಳಿಸಿ ಈಗ ದುಬಾರಿ ಮಾಡಿರುವುದು ಜನ­ವಿರೋಧಿ ನೀತಿ. ಬೆಲೆ ಏರಿಕೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಕ್ಕಳ, -ವಯಸ್ಕರ ಬ್ಯಾಂಕ್ ಉಳಿ­ತಾಯ ಖಾತೆಗಳನ್ನು ತೆರೆಯಲು ಆಧಾರ್‌­ಕಾರ್ಡ್‌ಅನ್ನು ಸುಪ್ರೀಂ­ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕಡ್ಡಾಯಗೊಳಿಸಿರುವ ಕ್ರಮವನ್ನು ವಿರೋಧಿಸಿದೆ. ಸಿಪಿಐಎಂ ನಗರ ಸಮಿತಿಯು ನಗರದ ಸದಾಶಿವನಗರದ ಎಸ್.ಬಿ.ಎಂ ಶಾಖೆ ಎದುರು ಪ್ರತಿಭಟನೆ ನಡೆಸಲಾಯಿತು. ಸಿಪಿಎಂ ಮುಖಂಡರಾದ ಎನ್.ಕೆ.ಸುಬ್ರಹ್ಮಣ್ಯ, ರಾಘವೇಂದ್ರ, ಸೈಯದ್‌ ಮುಜೀಬ್‌, ಮುಖಂಡರಾದ ಎನ್.ಕೆ.ಸುಬ್ರಹ್ಮಣ್ಯ, ಮುತ್ತುರಾಜ್, ಆದಿಮೂರ್ತಿ, ರಫೀಕ್, ಕುಲ್ಸುಂಬು, ರೇಷ್ಮ, ಅಲೀಮಾ, ಯುನಿಸ್, ತಿಮ್ಮಣ್ಣ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.