ADVERTISEMENT

ಗ್ರಾಮೀಣ ಸೊಗಡಿನಲ್ಲಿ ಕೊರತೆಗಳ ಅಳಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2013, 7:30 IST
Last Updated 25 ಫೆಬ್ರುವರಿ 2013, 7:30 IST
ತುಮಕೂರು ದೇವರಾಯಪಟ್ಟಣದ ಗ್ರಾಮೀಣ ವಾತಾವರಣದಲ್ಲಿ ಇರುವ ಹುಲ್ಲಿನ ಬಣವೆ.
ತುಮಕೂರು ದೇವರಾಯಪಟ್ಟಣದ ಗ್ರಾಮೀಣ ವಾತಾವರಣದಲ್ಲಿ ಇರುವ ಹುಲ್ಲಿನ ಬಣವೆ.   

ತುಮಕೂರು: ನಗರದ ಅತಿ ವಿಸ್ತಾರವಾದ ವಾರ್ಡ್. ಗ್ರಾಮೀಣ ಮತ್ತು ನಗರ ಪ್ರದೇಶದ ಸಮ್ಮಿಶ್ರಣದಂತಿದೆ. ಒಂದೆಡೆ ಗ್ರಾಮೀಣ ಸೊಗಡಿದ್ದರೆ, ಮತ್ತೊಂದೆಡೆ ಹೈಟೆಕ್ ಮನೆಗಳಿವೆ. ಆದರೆ ಎಲ್ಲಿಯೂ ಮೂಲಸೌಲಭ್ಯಗಳಿಲ್ಲ. ಇದು ಕೊನೆಯ 35ನೇ ವಾರ್ಡ್‌ನ ಚಿತ್ರಣ.

ಇಲ್ಲಿನ ಯಾವುದೇ ಬಡಾವಣೆಯಲ್ಲಿ ರಸ್ತೆ, ಒಳಚರಂಡಿ, ಮಳೆನೀರು ಚರಂಡಿ, ಕುಡಿಯುವ ನೀರು, ಉದ್ಯಾನ ಸೇರಿದಂತೆ ಯಾವುದೇ ಮೂಲ ಸೌಲಭ್ಯವನ್ನು ಕಾಣಲು ಸಾಧ್ಯವಿಲ್ಲ. `ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂಬಂತೆ ಅಲ್ಲಲ್ಲಿ ಕೆಲವು ಕೆಲಸಗಳಾಗಿವೆ. ಅತಿ ವಿಸ್ತಾರವಾದ ವಾರ್ಡ್ ಆದ ಕಾರಣ ಇದು ಏನೇನೂ ಅಲ್ಲ.

ಇಲ್ಲಿನ ರಸ್ತೆಗಳ ಸ್ಥಿತಿಯಂತೂ ಹೇಳ ತೀರದು. ಮಣ್ಣಿನ ರಸ್ತೆಗಳನ್ನು ಸಹ ಕಾಣಲು ಸಾಧ್ಯವಿಲ್ಲ. ಹಳ್ಳಗುಂಡಿಗಳೇ ರಸ್ತೆಗಳಂತೆ ಇವೆ. ಗ್ರಾಮೀಣ ಪ್ರದೇಶದಂತಿರುವ ದೇವರಾಯಪಟ್ಟಣ, ಬಂಡೇಪಾಳ್ಯದ ಮಾತಿರಲಿ ಹೈಟೆಕ್ ಮನೆಗಳಿರುವ ಹೊಸ ಬಡಾವಣೆ,  ಶ್ರೀನಗರ, ಚೇತನಾ, ಎಸ್‌ಬಿಎಂ ಬಡಾವಣೆಗಳಲ್ಲಿಯೇ ರಸ್ತೆಗಳಿಲ್ಲ. ಚರಂಡಿಗಳನ್ನಂತು ಕಾಣುವಂತೆಯೇ ಇಲ್ಲ. ಮಳೆ ನೀರಿನಿಂದ ರಸ್ತೆಗಳು ಹಳ್ಳಕೊಳ್ಳಗಳಂತಾಗಿವೆ.

ನೀರಿನ ಸಮಸ್ಯೆಯನ್ನಂತು ಹೇಳ ತೀರದು. 10- 15 ದಿನಕ್ಕೊಮ್ಮೆ ನೀರು ಬರುತ್ತದೆ ಎನ್ನುತ್ತಾರೆ ನಿವಾಸಿಗಳು. ಅಲ್ಲದೆ ಇಲ್ಲಿಗೆ ಹೇಮಾವತಿ ನೀರು ಬರುವುದಿಲ್ಲ. ಕೊಳವೆ ಬಾವಿ ನೀರನ್ನೆ ಇಲ್ಲಿನ ಜನತೆ ಕುಡಿಯ ಬೇಕು. ಅದೂ ಯಾವಾಗಲೋ ಬಂದರೆ ನಮ್ಮ ಪುಣ್ಯ ಎನ್ನುತ್ತಾರೆ. ಇನ್ನು ಕಸ ತೆಗೆಯುವುದು ಕನಸಿನ ಮಾತು. ಅಲ್ಲಲ್ಲಿ ಹಾಕಿದ ಕಸವನ್ನು ಖಾಲಿ ನಿವೇಶನಗಳು ಮತ್ತು ಹೊರವಲಯದಲ್ಲಿ ಹಾಕಿ ಬರುತ್ತಾರೆ ನಗರಸಭೆ ಸಿಬ್ಬಂದಿ. ಅಲ್ಲಿನ ಕಸ ಅಲ್ಲಿಯೇ ಇರುತ್ತದೆ. ಇದೇ ಇಲ್ಲಿನ ವಿಶೇಷ.

ಇಲ್ಲಿ ಒಟ್ಟಾರೆ 30ಕ್ಕೂ ಹೆಚ್ಚು ಉದ್ಯಾನಗಳಿವೆ. ಈಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೂರು ಪಾರ್ಕ್‌ಗಳನ್ನು ಮಾತ್ರ ಅಭಿವೃದ್ಧಿ ಮಾಡಲಾಗುತ್ತಿದೆ. ಉಳಿದವು ಖಾಲಿ ಜಾಗಗಳಂತಿವೆ. ಅವು ಪಾರ್ಕ್‌ಗಳು ಎಂದು ಗುರುತಿಸಲು ಸಹ ಸಾಧ್ಯವಿಲ್ಲ. ಕೆಲವು ಒತ್ತುವರಿಯಾಗಿವೆ.

ಇಲ್ಲಿ ಏನೂ ಇಲ್ಲದಿದ್ದರೂ ಉತ್ತಮ ವಾತಾವರಣವಿದೆ. ಇನ್ನೂ ಗ್ರಾಮೀಣ ಪ್ರದೇಶದ ಸೊಗಡಿದೆ. ನಗರದ ಹೊರವಲಯದಲ್ಲಿರುವುದರಿಂದ ಹಸಿರು ಇದೆ. ದೇವರಾಯಪಟ್ಟಣದ ಸಮೀಪದಲ್ಲಿಯೇ ತೆಂಗು, ಅಡಿಕೆ ತೋಟಗಳಿವೆ. ನಗರಸಾರಿಗೆ ಬಸ್ ಸೌಕರ್ಯವಿದೆ. ಅಲ್ಲದೆ ಬಿ.ಎಚ್.ರಸ್ತೆಗೆ ಸಮೀಪ ಇರುವುದರಿಂದ ಸಾರಿಗೆ ಸಮಸ್ಯೆ ಇಲ್ಲ.

ಉತ್ತಮ ಕೆಲಸವಾಗಿದೆ
ಇದುವರೆಗೆ ರೂ. 2 ಕೋಟಿಗೂ ಹೆಚ್ಚು ಕೆಲಸವಾಗಿದೆ. ರೂ. 1 ಕೋಟಿಗೂ ಹೆಚ್ಚು ವೆಚ್ಚ ಮಾಡಿ ಒಳ ಚರಂಡಿ ಮಾಡಲಾಗಿದೆ. ರೂ. 50 ಲಕ್ಷದಲ್ಲಿ ರಸ್ತೆಗೆ ಜಲ್ಲಿ ಮೆಟ್ಲಿಂಗ್ ಹಾಕಲಾಗಿದೆ. ಇಲ್ಲಿ ಅಂಬೇಡ್ಕರ್ ಭವನ, ಶಿಶುವಿಹಾರ ಮತ್ತು ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಸಂಸದರು ಮತ್ತು ನಗರಸಭೆ ಶೇ 18ರ ಹಣದಲ್ಲಿ ದೇವರಾಯಪಟ್ಟಣದಲ್ಲಿ ಸರ್ಕಾರಿ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಮೂರು ಪಾರ್ಕ್‌ಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 5 ಕೊಳವೆ ಬಾವಿ ಕೊರೆಸಲಾಗಿದೆ. ಚೇತನಾ ಬಡಾವಣೆ ರಸ್ತೆ ಕಾಮಗಾರಿ ಗುತ್ತಿಗೆದಾರರ ಅಸಹಕಾರದಿಂದ ಅರ್ಧಕ್ಕೆ ನಿಂತಿದೆ. ಕಸ ತೆಗೆಯಲು ಪೌರಕಾರ್ಮಿಕರ ಕೊರತೆ ಇದೆ.
-ಮುನಿಯಪ್ಪ, ನಗರಸಭೆ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.