ADVERTISEMENT

ಚುನಾವಣೆ ಸಿದ್ಧತೆಗೆ ಪ್ರವಾಸ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 5:40 IST
Last Updated 20 ಜನವರಿ 2012, 5:40 IST

ತುಮಕೂರು: ಮುಂದಿನ 15 ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿರಬೇಕೆಂಬ ಆಸೆ ಹೊತ್ತು ರಾಜ್ಯವ್ಯಾಪಿ ಪ್ರವಾಸ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಹೊನ್ನುಡಿಕೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ಅವರು ಹೆಲಿಪ್ಯಾಡ್ ಬಳಿ ಪತ್ರಕರ್ತರೊಂದಿಗೆ ಮಾತನಾಡಿ, ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳನ್ನು ಸುತ್ತುತ್ತೇನೆ. ಕನಿಷ್ಠ 150 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆರಿಸಿ ಬರಬೇಕು ಎನ್ನುವುದು ನನ್ನ ಕನಸು ಎಂದರು.

ಬಿಜೆಪಿಯಲ್ಲಿ ಆಂತರಿಕ ಭಿನ್ನಮತವಿದೆ ಎಂಬ ಆರೋಪವನ್ನು ಅಲ್ಲಗೆಳೆದ ಅವರು, ನಾನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳು ತ್ತಿದ್ದೇನೆ. ಅದನ್ನು ಶಕ್ತಿ ಪ್ರದರ್ಶನ ಎಂದು ಮಾಧ್ಯಮಗಳು ತಪ್ಪಾಗಿ ವ್ಯಾಖ್ಯಾನಿಸುತ್ತಿವೆ. ನಾವು ಕಾಂಗ್ರೆಸ್- ಜೆಡಿಎಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡುತ್ತೇವೆ. ಬಿಜೆಪಿಗೆ ಯಡಿಯೂರಪ್ಪ ಬೆಲೆ ಗೊತ್ತಿದೆ ಎಂದು ಹೇಳಿದರು.

ನಾನು ಸಂಪೂರ್ಣ ಆರ್‌ಎಸ್‌ಎಸ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತೇನೆ. ಆರ್‌ಎಸ್‌ಎಸ್ ನನ್ನ ತಂದೆಯಿದ್ದಂತೆ. ತಂದೆಯ ಮಾತನ್ನು ಮಗ ಎಂದಿಗೂ ಮೀರಲಾರ. ಹೈಕಮಾಂಡ್ ಮನಸ್ಸು ಮಾಡಿದರೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮೊದಲೇ ನನ್ನನ್ನು ಮುಖ್ಯಮಂತ್ರಿ ಎಂದು ಘೋಷಿಸ ಬಹುದು ಎಂದರು.

ಈ ಹಿಂದೆಯೂ ರಾಜ್ಯದ ಜಲಾಶಯಗಳಲ್ಲಿ ನೀರಿತ್ತು. ಆದರೆ ಅದನ್ನು ಜನರಿಗೆ ಒದಗಿಸಲು ಅಧಿಕಾರದಲ್ಲಿರುವವರಿಗೆ ಮನಸ್ಸು ಇರಲಿಲ್ಲ. ಶಾಸಕರಿಗೆ ಜನರ ಕಣ್ಣೀರು ಒರೆಸುವ ಛಲ ಬರುವವರೆಗೆ ಪರಿಸ್ಥಿತಿ ಬದಲಾಗುವುದಿಲ್ಲ ಎಂದರು. ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ನೇತ್ರಾವತಿ ತಿರುವು ಯೋಜನೆಯ ಅಗತ್ಯತೆಯನ್ನು ಒತ್ತಿ ಹೇಳಿದರು.

ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಸುರೇಶ್‌ಗೌಡ ಮಾತನಾಡಿದರು. ಸಚಿವರಾದ ಶೋಭಾ ಕರಂದ್ಲಾಜೆ, ಎಂ.ಪಿ.ರೇಣುಕಾಚಾರ್ಯ, ವಿ.ಸೋಮಣ್ಣ, ಬಿಜೆಪಿ ಜಿಲ್ಲಾ ಘಟಕದ ಶಿವಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.