ADVERTISEMENT

ಜನಪದ ಭಾರತದ ಭದ್ರ ಬುನಾದಿ

ತುಮಕೂರು: ರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:05 IST
Last Updated 29 ಮಾರ್ಚ್ 2018, 6:05 IST
ವಿಚಾರ ಸಂಕಿರಣವನ್ನು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ಸಿಬಂತಿ ಪದ್ಮನಾಭ, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಮಚಂದ್ರಪ್ಪ, ಬಿ.ಡಿ.ನಾಯಕ್, ಡಿ.ವಿ.‍ಪರಮಶಿವಮೂರ್ತಿ ಇದ್ದರು.
ವಿಚಾರ ಸಂಕಿರಣವನ್ನು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ಸಿಬಂತಿ ಪದ್ಮನಾಭ, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಮಚಂದ್ರಪ್ಪ, ಬಿ.ಡಿ.ನಾಯಕ್, ಡಿ.ವಿ.‍ಪರಮಶಿವಮೂರ್ತಿ ಇದ್ದರು.   

ತುಮಕೂರು: ಬದಲಾವಣೆಯ ವಿಚಾರದಲ್ಲಿ ಭಾರತವು ವಿಶಿಷ್ಟವಾದ ಸ್ಥಾನದಲ್ಲಿದೆ. ಜನಪದ ಗೀತೆಗಳು, ಲಾವಣಿ, ಯಕ್ಷಗಾನ, ಬಯಲಾಟ ಹೀಗೆ ಜನಪದ ಕಲಾಪ್ರಕಾರಗಳು ಭಾರತಕ್ಕೆ ಭದ್ರ ಬುನಾದಿಯಂತೆ ಕಂಗೊಳಿಸುತ್ತಿದೆ. ಇವು ದೇಶದ ಶಕ್ತಿ’ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಮತ್ತು ಪತ್ರಿಕೋದ್ಯಮ ವಿಭಾಗ ಬುಧವಾರ ಆಯೋಜಿಸಿದ್ದ ‘ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಸಾಮಾಜಿಕ ಸಂವಹನ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸ ಓದದವ ಇತಿಹಾಸ ಸೃಷ್ಟಿಸಲಾರ. 90ರ ದಶಕದಲ್ಲಿ ಜಾಗತೀಕರಣ ಪ್ರವಹಿಸಿತು. ಅಂತೆಯೇ ಜನಪದ ಮಾಧ್ಯಮಗಳು ಕೂಡ ಅಂತರರಾಷ್ಟೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು ಎಂದು ಅಭಿಪ್ರಾಯಪಟ್ಟರು.

ADVERTISEMENT

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ ಮಾತನಾಡಿ, ’ಮನುಷ್ಯ ಸಮಾಜಜೀವಿ ಅಷ್ಟೇ ಅಲ್ಲ. ವೈಚಾರಿಕ ಜೀವಿಯೂ ಹೌದು ಎಂದ ಅವರು ‘ಆಧುನಿಕ ಮಾಧ್ಯಮಗಳನ್ನು ಕಂಡುಕೊಳ್ಳದಿದ್ದರೆ ಮನುಷ್ಯ ಮನುಷ್ಯನಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂಬ ಜಾನ್ ಬಿಲಿಯನ್‌ ವಾಕ್ಯವನ್ನು ಪ್ರಸ್ತಾಪಿಸಿದರು.

ಜಾಗತಿಕ ಕಾಲಘಟ್ಟದಲ್ಲಿ ಹಾಡುಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆ ಮೂಲಕ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುತ್ತಿರುವುದು ಈ ಜನಪದ ಮಾಧ್ಯಮಗಳಾಗಿವೆ. ಕುಟುಂಬಗಳು ಮಾಧ್ಯಮಗಳ ಮೂಲಕ ಸಂವಹನ ನಡೆಸಲು ಸಹಕಾರಿಯಾಗಿವೆ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಪರಮಶಿವಮೂರ್ತಿ ಮಾತನಾಡಿ, ’ಮಧ್ಯಕಾಲದಲ್ಲಿ ನೋಡುಗನಿಂದ, ಕೇಳುಗನಿಂದ ಸಂವಹನವು ಹುಟ್ಟಿತು. ಹಿರಿಯ ತಲೆಮಾರಿನವರು ಮುಂದಿನ ಜನಾಂಗಕ್ಕೆ ಬೇಕಾದ ಕಲೆಗಳನ್ನು ರೂಪಿಸಿದರು. ಈ ಜನಪದ ಕಲೆಗಳನ್ನು ಉಳಿಸುವಲ್ಲಿ ಇದು ಒಂದು ಪ್ರಭಾವಿ ಪಾತ್ರವಾಗಿದೆ. ಇದಕ್ಕೆ ಪೂರ್ವಿಕರ ಸಂವಹನ ಕಲೆಯೇ ಸಾಕ್ಷಿ’ ಎಂದು ಹೇಳಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಟಿ.ಎನ್.ಹರಿಪ್ರಸಾದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.