ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯೂ ಸ್ಥಗಿತ

ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ಖಾಸಗಿ ಆಸ್ಪತ್ರೆಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2013, 8:33 IST
Last Updated 9 ಫೆಬ್ರುವರಿ 2013, 8:33 IST
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಚಿಕಿತ್ಸೆ ದೊರೆಯದೆ ಮಕ್ಕಳೊಂದಿಗೆ ಹೊರಗೆ ಕುಳಿತಿರುವ ರೋಗಿಗಳು
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಚಿಕಿತ್ಸೆ ದೊರೆಯದೆ ಮಕ್ಕಳೊಂದಿಗೆ ಹೊರಗೆ ಕುಳಿತಿರುವ ರೋಗಿಗಳು   

ತುಮಕೂರು: ವೈದ್ಯರ ಮುಷ್ಕರದಿಂದ ಶುಕ್ರವಾರ ವೈದ್ಯಕೀಯ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಜಿಲ್ಲಾ ಆಸ್ಪತ್ರೆ ಬಿಕೋ ಎನ್ನುತ್ತಿದೆ. ರೋಗಿಗಳಿಗೆ ತುರ್ತು ಸೇವೆ ಸಹ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ಅನಿವಾರ್ಯವಾಗಿ ಸ್ಥಳಾಂತರಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲಾ ಆಸ್ಪತ್ರೆಗಳನ್ನು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಬಾರದು, ಈಗಾಗಲೇ ವರ್ಗಾವಣೆ ಮಾಡಿರುವ ಆಸ್ಪತ್ರೆಗಳನ್ನು ಮತ್ತೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಶುಕ್ರವಾರದಿಂದ ವೈದ್ಯರು ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ವೈದ್ಯರು ತುರ್ತು ಸೇವೆಗಳನ್ನು ಸಹ ಬಹಿಷ್ಕರಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಕೆಲಕಾಲ ವೈದ್ಯರು ಪ್ರತಿಭಟನೆ ನಡೆಸಿ, ನಂತರ ತೆರಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ರಜನಿ ಅವರನ್ನು ಹೊರತುಪಡಿಸಿ ಯಾವುದೇ ವೈದ್ಯರು, ವೈದ್ಯಕೀಯ ಸೇವೆ, ಅರೆ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕೆಲವು ಮಂದಿ ಹೌಸ್ ಸರ್ಜನ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಡಾ.ರಜನಿ ಅಗತ್ಯ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದರು.

ಜಿಲ್ಲಾ ಆಸ್ಪತ್ರೆಯ 28 ಮಂದಿ ತಜ್ಞ ವೈದ್ಯರು, 202 ಮಂದಿ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಗುತ್ತಿಗೆ ಆಧಾರದ ಒಬ್ಬರು ಪ್ರಸೂತಿ ತಜ್ಞ ವೈದ್ಯರು ಮಾತ್ರ ಮಹಿಳೆಯರಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದರು. ಅಂಬುಲೆನ್ಸ್ ಚಾಲಕರು ಇಲ್ಲದೆ ಅಂಬುಲೆನ್ಸ್ ಸೇವೆ ಸಹ ದೊರೆಯುತ್ತಿಲ್ಲ. ಆಸ್ಪತ್ರೆಯಲ್ಲಿ 282 ಮಂದಿ ಒಳರೋಗಿಗಳಿದ್ದಾರೆ. 31 ಮಂದಿ ಹೌಸ್ ಸರ್ಜನ್‌ಗಳಲ್ಲಿ 7- 8 ಮಂದಿ ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ. ಎಲ್ಲ ರೋಗಿಗಳನ್ನು ಇಷ್ಟೇ ವೈದ್ಯರು ನೋಡಿಕೊಳ್ಳಬೇಕಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಭೀತಿಗೊಂಡಿರುವ ಕೆಲವು ರೋಗಿಗಳು ಸಿದ್ಧಾರ್ಥ ಆಸ್ಪತ್ರೆಗೆ 108 ವಾಹನದ ಮೂಲಕ ಸ್ಥಳಾಂತರಗೊಂಡರು. ಮುಷ್ಕರ ಮುಂದುವರಿದರೆ ಉಳಿದ ರೋಗಿಗಳು ಸಹ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.

ಸ್ಚಇಚ್ಛೆಯಿಂದ ತಾವು ವರ್ಗಾವಣೆ ಆಗುತ್ತಿದ್ದೇವೆ ಎಂದು ಬರೆದು ಕೊಟ್ಟು ರೋಗಿಗಳು ಸ್ಥಳಾಂತರಗೊಳ್ಳುತ್ತಿದ್ದಾರೆ. ಚಿಕಿತ್ಸೆ ದೊರೆಯದೆ ರೋಗಿಗಳು ವೈದ್ಯರಿಗೆ ಶಾಪ ಹಾಕುತ್ತಿದ್ದರೆ, ಮತ್ತೊಂದೆಡೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದದ್ದು ಆಸ್ಪತ್ರೆ ಆವರಣದಲ್ಲಿ ಕಂಡುಬಂತು.

ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳ ಸಂಖ್ಯೆ ಅತಿ ಹೆಚ್ಚಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಇಲ್ಲಿಂದ ಸ್ಥಳಾಂತರಗೊಂಡವರಿಗೆ ಕಡಿಮೆ ಶುಲ್ಕ ವಿಧಿಸುವಂತೆ ಸಿದ್ಧಾರ್ಥ ಸಂಸ್ಥೆ ಅಧಿಕಾರಿಗಳಿಗೆ ಕೋರಲಾಗಿದೆ ಎಂದು ಡಾ.ರಜನಿ ತಿಳಿಸಿದ್ದಾರೆ.

ಜಿಲ್ಲಾಡಳಿತ ಬದಲಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಿಂದ 10 ಮಂದಿ ವೈದ್ಯರು ಮತ್ತು 30 ಮಂದಿ ವೈದ್ಯಕೀಯ ಸಿಬ್ಬಂದಿಯನ್ನು ಜಿಲ್ಲಾ ಆಸ್ಪತ್ರೆಗೆ ಶುಕ್ರವಾರ ಬೆಳಿಗ್ಗೆ ಕರೆ ತರಲಾಗಿತ್ತು. ಆದರೆ ಹೊರಗಿನ ಸಿಬ್ಬಂದಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ಇಲ್ಲಿನ ಸಿಬ್ಬಂದಿ ಗಲಾಟೆ ಮಾಡಿದ್ದರಿಂದ ಬಂದಿದ್ದ ವೈದ್ಯರು ಹಿಂತಿರುಗಿದರು.

ಪೊಲೀಸ್ ಭದ್ರತೆ: ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.