ADVERTISEMENT

ಜಿಲ್ಲೆಗೆ ಬರಬೇಕಾದ ನೀರು ತಡೆದಿರುವ ಸೀಮಾಂಧ್ರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 10:08 IST
Last Updated 23 ಅಕ್ಟೋಬರ್ 2017, 10:08 IST
ಸೀಮಾಂಧ್ರದ ಮಡಕಶಿರಾ ತಾಲ್ಲೂಕಿನ ಕೊಡಗಾರಿಗುಟ್ಟ ಗ್ರಾಮದ ಸಮೀಪದ ಪೀಡರ್ ಚಾನಲ್ ತೆಗೆದಿರುವುದು
ಸೀಮಾಂಧ್ರದ ಮಡಕಶಿರಾ ತಾಲ್ಲೂಕಿನ ಕೊಡಗಾರಿಗುಟ್ಟ ಗ್ರಾಮದ ಸಮೀಪದ ಪೀಡರ್ ಚಾನಲ್ ತೆಗೆದಿರುವುದು   

ಮಧುಗಿರಿ: ತಾಲ್ಲೂಕಿನ ಗಡಿಭಾಗದ ಕೆರೆಗಳಿಗೆ ಸೀಮಾಂಧ್ರದ ಕಡೆಯಿಂದ ನೈಸರ್ಗಿಕವಾಗಿ ಬರುವ ಮಳೆ ನೀರನ್ನು ಅಲ್ಲಿನ ಸರ್ಕಾರ ತಡೆದಿರುವುದರಿಂದ ಕೆರೆಗಳು ತುಂಬುತ್ತಿಲ್ಲ. ಕೆರೆಗಳು ರಾಜ್ಯದ ಗಡಿಭಾಗದಲ್ಲಿದ್ದರೂ ಈ ಕೆರೆಗಳಿಗೆ ನೀರಿನ ಒಳ ಹರಿವು ಸೀಮಾಂಧ್ರದ ಕಡೆಯಿಂದ ಬರಬೇಕು.

ಅಲ್ಲಿ ಹೆಚ್ಚು ಮಳೆ ಬಿದ್ದರೂ ಹನಿ ನೀರು ಸಹ ರಾಜ್ಯದ ಕಡೆಗೆ ಬಾರದರಂತೆ ಅಲ್ಲಿ ಚೆಕ್‌ ಡ್ಯಾಂ, ಫೀಡರ್‌ ಕಾಲುವೆ ತೆಗೆಯಲಾಗಿದೆ ಎಂದು ಗಡಿಭಾಗದ ರೈತರು ಆರೋಪಿಸಿದ್ದಾರೆ.

ಮಡಕಶಿರಾ ತಾಲ್ಲೂಕಿನ ಹೊಟ್ಟೆಬೆಟ್ಟ, ಬಸವನ ಬೆಟ್ಟ, ತಿರುಮಲದೇವರಹಳ್ಳಿ ಹಾಗೂ ಅರಣ್ಯ ಪ್ರದೇಶದಲ್ಲಿ ಮಳೆಯಾದ ನೀರು  ರಾಜ್ಯದ ರೆಡ್ಡಿಹಳ್ಳಿ, ಮಿಡಿಗೇಶಿ ಹಾಗೂ ಬೇಡತ್ತೂರು ಕೆರೆಗಳು ತುಂಬಿಕೊಂಡು ಆಂಧ್ರ ಪ್ರದೇಶದ ಯರ್ಬೊಮ್ಮನಹಳ್ಳಿ ಕೆರೆಗೆ ಹರಿಯಬೇಕು.

ADVERTISEMENT

ಆದರೆ ಮಡಕಶಿರಾ ತಾಲ್ಲೂಕಿನ ಕೊಡಗಾರಿಗುಟ್ಟ ಗ್ರಾಮದ ಸಮೀಪದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿ ಅಲ್ಲಿಂದ 1 ಕಿಲೋ ಮೀಟರ್ ನಷ್ಟು ಉದ್ದ  ಫೀಡರ್ ಕಾಲುವೆ ತೆಗೆದು ನೀರನ್ನು ಸೀಮಾಂಧ್ರದ ರೊಳ್ಳೆ ಕೆರೆಗೆ ನೀರು ಹರಿಸಿಕೊಳ್ಳಲಾಗುತ್ತಿದೆ ಗ್ರಾಮಸ್ಥ ರಮೇಶ್ ಜಿ.ಗೊಲ್ಲರಹಟ್ಟಿ ಎಂದು ಹೇಳಿದರು.

’ಮಿಡಿಗೇಶಿ ಕೆರೆಗೆ ಹರಿಯುತ್ತಿದ್ದ ನೀರಿಗೆ ತಡೆಯಾಗಿ ಮಡಕಶಿರಾ ತಾಲ್ಲೂಕಿನ ದಾಸಪ್ಪನ ಪಾಳ್ಯಂ ಗ್ರಾಮದ ಸಮೀಪ ಕೆರೆ, ಚೆಕ್ ಡ್ಯಾಂ ಹಾಗೂ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿರುವುದರಿಂದ ನಮ್ಮ ಭಾಗಕ್ಕೆ ಹರಿಯಬೇಕಿದ್ದ ನೀರು ಬರುತ್ತಿಲ್ಲ’ ಎಂದು ಗಡಿಭಾಗದ ಜನರು ದೂರಿದರು.

ಕೆಲವು ವರ್ಷಗಳ ಹಿಂದೆ ಫೀಡರ್‌ ಕಾಲುವೆ ತೆಗೆಯುವ ವೇಳೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ಮಾಡಿದ್ದರು. ಆದರೂ ಸೀಮಾಂಧ್ರ ಸರ್ಕಾರ ಮಾತ್ರ ಹೋರಾಟಕ್ಕೆ ಬೆಲೆ ನೀಡಲಿಲ್ಲ. ರಾಜ್ಯಸರ್ಕಾರ ತಕ್ಷಣ  ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.