ADVERTISEMENT

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವೃತ್ತಿಪರ ಲೈಂಗಿಕ ಕಾರ್ಯಕರ್ತೆಯರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 8:50 IST
Last Updated 10 ಜುಲೈ 2012, 8:50 IST

ತುಮಕೂರು: ರಾಜಧಾನಿಗೆ ಸಮೀಪದ ನಗರಿಯಲ್ಲಿ ದಿನೇ ದಿನೇ ವೇಶ್ಯಾವಾಟಿಕೆ ದಂಧೆ ಹೆಚ್ಚುತ್ತಿದ್ದು, ಜಿಲ್ಲೆಯ ಪಟ್ಟಣ ಪ್ರದೇಶಗಳಿಗೂ `ಕೆಂಪು  ದೀಪ~ ವ್ಯಾಪಿಸುತ್ತಿರುವ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ.

ವರ್ಷದಿಂದ ವರ್ಷಕ್ಕೆ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚುತ್ತಿದೆ. ಯುವತಿಯರಿಗಿಂತ ಸಂಸಾರಸ್ಥ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದಾರೆ. ಆರ್ಥಿಕ ಕಾರಣದಿಂದಲೇ ಮಹಿಳೆಯರು ಸುಲಭವಾಗಿ ಹಣ ಸಂಪಾದನೆಗಾಗಿ ಈ ವೃತ್ತಿಗೆ ಇಳಿಯತೊಡಗಿದ್ದಾರೆ ಎಂದು ಲೈಂಗಿಕ ಕಾರ್ಯಕರ್ತೆಯರ ಯೋಗ ಕ್ಷೇಮಕ್ಕಾಗಿ ದುಡಿಯುತ್ತಿರುವ `ಸಹಚರ~ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.


ನಗರದ ಬಟವಾಡಿ, ಗುಬ್ಬಿಗೇಟ್, ಹನುಮಂತಪುರ, ಮರಳೂರು ದಿಣ್ಣೆ ಹಾಗೂ ಈ ಭಾಗದ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶಗಳು `ರೆಡ್‌ಲೈಟ್~ ಪ್ರದೇಶಗಳಾಗಿ ಕುಖ್ಯಾತಿ ಪಡೆಯುತ್ತಿವೆ. ಕೆಲವು ಮಹಿಳೆಯರು ಮನೆಯಲ್ಲೇ ಒಬ್ಬಂಟಿಯಾಗಿ ವೇಶ್ಯಾವಾಟಿಕೆ ದಂಧೆ ನಡೆಸಿದರೆ, ಮತ್ತಷ್ಟು ಕಡೆಗಳಲ್ಲಿ ಹುಡುಗಿಯರು, ಮಹಿಳೆಯರನ್ನು ಇಟ್ಟುಕೊಂಡಿರುವ ವೇಶ್ಯಾವಾಟಿಕೆ ಕೇಂದ್ರಗಳೇ ತಲೆ ಎತ್ತಿವೆ ಎಂದು ಮೂಲಗಳು ತಿಳಿಸಿವೆ.

ನಗರದ ಹೊರವಲಯದ ಜಯನಗರ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಇಂಥ ವೇಶ್ಯಾವಾಟಿಕೆ ಕೇಂದ್ರಗಳಿವೆ. ಕೆಲವೊಮ್ಮೆ ನೆಪಮಾತ್ರಕ್ಕೆ ಇಂಥ ಕೇಂದ್ರಗಳ ಮೇಲೆ ದಾಳಿ ನಡೆಸುವ ಪೊಲೀಸರು ನಂತರದ ದಿನಗಳಲ್ಲಿ ಮೌನವಹಿಸುವುದು ಕೂಡ ವೇಶ್ಯಾವಾಟಿಕೆ ಹೆಚ್ಚಾಗಲು ಕಾರಣ ಎಂಬ ಆರೋಪ ಕೇಳಿಬಂದಿದೆ.

ಕೆಲವು ಕಡೆಗಳಲ್ಲಿ ಬೆಂಗಳೂರಿನಿಂದ ಲೈಂಗಿಕ ಕಾರ್ಯಕರ್ತೆಯರನ್ನು ಕರೆಸಿಕೊಳ್ಳಲಾಗುತ್ತಿದೆ. ಆದರೆ ಬಹುತೇಕ ಕಡೆಗಳಲ್ಲಿ ನಗರದ ಮಹಿಳೆಯರು, ಯುವತಿಯರೇ ವೇಶ್ಯಾವಾಟಿಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಬಡತನ ಮತ್ತು ತಕ್ಷಣದ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಈ ದಂಧೆಗೆ ಸಂಸಾರಸ್ಥ ಮಹಿಳೆಯರು ಬಲಿಯಾಗುತ್ತಿರುವುದು ಗೋಚರವಾಗುತ್ತಿದೆ ಎಂದು `ಸಹಚರ~ದ ಮೂಲಗಳು ತಿಳಿಸಿವೆ.

ಲೈಂಗಿಕ ಕಾರ್ಯಕರ್ತೆಯರು ಧರಿಸುವ ಬಟ್ಟೆಯ ಮೇಲೆ ಅವರ ಬೆಲೆ ನಿರ್ಧಾರವಾಗುತ್ತದೆ. ಸೀರೆ ಉಟ್ಟವರಿಗೆ ರೂ. 500ರ ವರೆಗೂ ಬೇಡಿಕೆ ಇರುತ್ತದೆ. ಚೂಡಿದಾರ್, ಸ್ಕರ್ಟ್ ತೊಟ್ಟ ಯುವತಿಯರಿಗೆ ಬೇಡಿಕೆ, ಬೆಲೆಯೂ ಹೆಚ್ಚು. `ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಗಂಡ ದೈಹಿಕವಾಗಿ ಅಶಕ್ತ. ಹೀಗಾಗಿ ಸಂಸಾರ ನೀಗಿಸಲು ಬೇರೆ ದಾರಿಗಳಿಲ್ಲ. ಸಂಘ ಸಂಸ್ಥೆಗಳು ನೆರವಿಗೆ ಬಂದರೆ ಈ ಉದ್ಯೋಗದಿಂದ ದೂರ ಸರಿಯುತ್ತೇನೆ. ಆದರೆ ಯಾರೂ ಕೂಡ ನೆರವು ನೀಡುವುದಿಲ್ಲ.
 
ಲೈಂಗಿಕ ಕಾರ್ಯಕರ್ತೆಯರು ಎಂದು ತಿಳಿದ ಕೂಡಲೇ ನಮ್ಮನ್ನು ನೋಡುವ ನೋಟ, ಭಾವ ಬದಲಾಗುತ್ತದೆ. ಅನಿವಾರ್ಯವಾಗಿ ಈ ವೃತ್ತಿಯಲ್ಲಿರಬೇಕಾಗಿದೆ~ ಎಂದು ಹೆಸರು ಹೇಳಲಿಚ್ಛಿಸದ ಎಸ್‌ಎಸ್‌ಐಟಿ ಕಾಲೇಜು ಸಮೀಪದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಯುತ್ತಿರುವ ಮಹಿಳೆಯೊಬ್ಬರು ದುಃಖ ತೋಡಿಕೊಂಡರು.
`ಲೈಂಗಿಕ ಕಾರ್ಯಕರ್ತೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ.

ಸ್ವಯಂ ಉದ್ಯೋಗ ಕೈಗೊಳ್ಳಲು ಬೆಂಗಳೂರಿಗೆ ಕರೆದುಕೊಂಡು ಹೋಗಿ ತರಬೇತಿ ಕೊಡಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಿದರೂ ಬಹುತೇಕರು ವೃತ್ತಿ ಬಿಟ್ಟು ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದಾಗುತ್ತಿಲ್ಲ. ಮತ್ತೆ ವೇಶ್ಯಾವಾಟಿಕೆಯಲ್ಲೇ ತೊಡಗುತ್ತಾರೆ~ ಎಂದು `ಸಹಚರ~ದ ಮಲ್ಲಿಕಾರ್ಜುನ್ ಹೇಳುತ್ತಾರೆ.

ವೃತ್ತಿಪರ ವೇಶ್ಯಾವಾಟಿಕೆ ಮುಕ್ತ ಜಿಲ್ಲೆಯನ್ನಾಗಿಸಲು ಸಹಚರ ಕಾರ್ಯೋನ್ಮುಖವಾಗಿದೆ. ಈ ಹಿನ್ನೆಲೆಯಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ವಿವಿಧ ಉದ್ಯೋಗದ ತರಬೇತಿ ನೀಡಿ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದೆ. ಎಚ್‌ಐವಿ,     ಏಡ್ಸ್‌ಗೆ ಬಲಿಯಾಗುವ ಕಾರಣ ಸುರಕ್ಷಿತ ಲೈಂಗಿಕತೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ಪೊಲೀಸರ ಕೈಗೆ ಸಿಕ್ಕಿಬೀಳುವ ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸುವ ಜಾಲ ನಗರದಲ್ಲಿರುವುದು ಬೆಳಕಿಗೆ ಬಂದಿದೆ. ಪೊಲೀಸರಿಗೆ ಸಿಕ್ಕಿಬಿದ್ದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಿಸುವ ಕೆಲಸ ಮಾಡುತ್ತಿರುವುದು ಕೂಡ ದಂಧೆ ಬೆಳೆಯಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ತುಮಕೂರು ನಗರ ಸೇರಿದಂತೆ ತಿಪಟೂರು, ಶಿರಾ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತುರುವೇಕೆರೆ ಪಟ್ಟಣದಲ್ಲಿ ಲೈಂಗಿಕ ಕಾರ್ಯಕರ್ತೆಯರು ಇರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಉಳಿದ ತಾಲ್ಲೂಕುಗಳಲ್ಲಿ ವೃತ್ತಿಪರ ಲೈಂಗಿಕ ಕಾರ್ಯಕರ್ತೆಯರು ಇಲ್ಲ. ಒಟ್ಟಾರೆ ಜಿಲ್ಲೆಯಲ್ಲಿ 1,496 ಕಾರ್ಯಕರ್ತೆಯರು ಇರುವುದು `ಸಹಚರ~ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ವೃತ್ತಿಪರ ಲೈಂಗಿಕ ಕಾರ್ಯಕರ್ತೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿರುವುದರಲ್ಲಿ ತುಮಕೂರು ನಗರ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನ ತಿಪಟೂರು ಪಡೆದುಕೊಂಡಿದೆ.
 

ಕರ್ನಾಟಕಕ್ಕೆ ಮೂರನೇ ಸ್ಥಾನ

ADVERTISEMENT

ಭಾರತದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ 6.8 ಲಕ್ಷ ಇದೆ. ಆಂಧ್ರಪ್ರದೇಶ ಪ್ರಥಮ ಸ್ಥಾನ ಪಡೆದರೆ, ಎರಡನೇ ಸ್ಥಾನ ಒಡಿಶಾ ಪಡೆದಿದೆ. ಮೂರನೇ ಸ್ಥಾನದಲ್ಲಿ ಕರ್ನಾಟಕ ಇದೆ. ರಾಜ್ಯದಲ್ಲಿ ಒಟ್ಟು 79 ಸಾವಿರ ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ ಎಂದು ಅಂದಾಜು ಮಾಡಲಾಗಿದೆ.

ಇದಕ್ಕೆಲ್ಲ ಸರ್ಕಾರ ಕಾರಣ

ವೃತ್ತಿಪರ ಲೈಂಗಿಕ ಕಾರ್ಯಕರ್ತೆಯರು ವೇಶ್ಯಾವಾಟಿಕೆ ನಡೆಸುವುದನ್ನು ಕಾನೂನುಬದ್ಧಗೊಳಿಸಬೇಕು. ಕೆಲವು ದೇಶಗಳಲ್ಲಿ ಈ ವೃತ್ತಿಯನ್ನು ಕಾನೂನುಬದ್ಧಗೊಳಿಸಲಾಗಿದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ.

ಎಲ್ಲ ಹೆಣ್ಣು ಮಕ್ಕಳಿಗೂ ಸಹ್ಯ ಜೀವನ ನಡೆಸುವಂತ ದುಡಿಮೆ, ಆರೋಗ್ಯ, ಮಕ್ಕಳಿಗೆ ಶಿಕ್ಷಣ ಸಿಗುವಂತ ವಾತಾವರಣ ಇದ್ದಿದ್ದರೆ ಯಾವ ಮಹಿಳೆ ತಾನೇ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಯಲು ಮುಂದಾಗುತ್ತಾರೆ. ಮಾನವೀಯ, ಆರ್ಥಿಕ, ಸಾಮಾಜಿಕ ದೃಷ್ಟಿಕೋನದಿಂದ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವೃತ್ತಿಪರ ಲೈಂಗಿಕ ಕಾರ್ಯಕರ್ತೆ ರಾಧಾ `ಪ್ರಜಾವಾಣಿ~ಯೊಂದಿಗೆ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.