ADVERTISEMENT

ಜಿಲ್ಲೆ ಅಭಿವೃದ್ಧಿಗೆ ವಿಷನ್ 2020

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 10:40 IST
Last Updated 6 ಸೆಪ್ಟೆಂಬರ್ 2011, 10:40 IST

ತುಮಕೂರು: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ `ವಿಷನ್-2020~ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಇಲ್ಲಿ ಸೋಮವಾರ ಹೇಳಿದರು. ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ 10 ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ತಯಾರಿಸಿ, ವಿಷನ್- 2020 ಕ್ರಿಯಾ ಯೋಜನೆ ರೂಪಿಸಲಾಗುವುದು. ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಲಾಗುವುದು. ಈ ಸಮಿತಿಯಲ್ಲಿ ವಿವಿಧ ವಿಷಯಗಳಲ್ಲಿ ಪರಿಣಿತರಾಗಿರುವ ಸಾರ್ವಜನಿಕರು ಸದಸ್ಯರಿರುತ್ತಾರೆ ಎಂದು ನುಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಸರ್ಕಾರಿ ನೌಕರರ ದಿನನಿತ್ಯದ ಕಾರ್ಯ ನಿರ್ವಹಣೆ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದಲ್ಲಿ ನೌಕರರಿಗೆ ಕೆಟ್ಟ ಹೆಸರು ಬರುತ್ತಿದೆ. ಪೊಲೀಸ್ ಗುಪ್ತಚರ ವಿಭಾಗದ ನೆರವಿನೊಂದಿಗೆ ಮಧ್ಯವರ್ತಿಗಳನ್ನು ಮಟ್ಟ ಹಾಕಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಎಸ್.ಶಿವಣ್ಣ, ಸುರೇಶ್‌ಗೌಡ, ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸಿಇಒ ಶಿವಯೋಗಿ ಚ.ಕಳಸದ, ಡಿಡಿಪಿಐ ಬಿ.ಮೋಹನ್‌ಕುಮಾರ್ ಉಪಸ್ಥಿತರಿದ್ದರು.

ಉಸ್ತುವಾರಿ ಸಚಿವರ `ದೌರ್ಭಾಗ್ಯ~
ಶಿಕ್ಷಕರ ದಿನಾಚರಣೆ ಸಮಾರಂಭದ ಸ್ವಾಗತ ಭಾಷಣ ಮಾಡಿದ ಡಿಡಿಪಿಐ ಬಿ.ಮೋಹನ್‌ಕುಮಾರ್, ಮಾತಿನ ಭರದಲ್ಲಿ `ಈ ಹಿಂದೆ ಧಾರವಾಡದಲ್ಲಿ ಮುರುಗೇಶ್ ನಿರಾಣಿ ಸಾಹೇಬರು ಉಸ್ತುವಾರಿ ಸಚಿವರಾಗಿದ್ದರು. ಆಗ ಅವರೊಂದಿಗೆ ಕೆಲಸ ಮಾಡಿದ್ದೆ. ಈಗ ಮತ್ತೆ ನಿರಾಣಿ ಸಾಹೇಬರು ತುಮಕೂರಿಗೆ ಉಸ್ತುವಾರಿ ಸಚಿವರಾಗಿದ್ದಾರೆ. ಇದು ನನ್ನ ದೌರ್ಭಾಗ್ಯ~ ಎಂದರು.

ಸಭೆಯಲ್ಲಿ ನಗೆಯಲೆ ಉಕ್ಕಿತು. ನಂತರ ಸಾವರಿಸಿಕೊಂಡ ಡಿಡಿಪಿಐ ಸಚಿವರ ಬಳಿಗೆ ತೆರಳಿ ತಪ್ಪು ಪದ ಪ್ರಯೋಗವಾಯಿತು. ನನ್ನ ಉದ್ದೇಶ ಅದಲ್ಲ ಎಂದರು. `ಪರವಾಗಿಲ್ಲ ಬಿಡಿ~ ಎಂದು ನಿರಾಣಿ ನಕ್ಕು ಸುಮ್ಮನಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.