ADVERTISEMENT

ಜೆಡಿಎಸ್ ಭದ್ರಕೋಟೆ ಉಳಿಯುವುದೇ?

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:27 IST
Last Updated 2 ಏಪ್ರಿಲ್ 2013, 4:27 IST

ತುಮಕೂರು: ಜಿಲ್ಲೆಯ ಇತರ ವಿಧಾನಸಭೆ ಕ್ಷೇತ್ರಗಳಿಗಿಂತ ಗುಬ್ಬಿ ಕ್ಷೇತ್ರ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ವ್ಯಕ್ತಿಯನ್ನು ಆಧರಿಸಿ ಚುನಾವಣೆ ನಡೆದಿರುವುದೇ ಹೆಚ್ಚು. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದ್ದು, ಒಂದು ರೀತಿಯಲ್ಲಿ ಪಕ್ಷದ ಭದ್ರಕೋಟೆಯಾಗಿಯೂ ಪರಿಣಮಿಸಿದೆ.

ಹಿಂದಿನ ಐದು ವಿಧಾನಸಭೆ ಚುನಾವಣೆಯಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಶಾಸಕರು ಗೆಲುವು ಕಂಡಿದ್ದಾರೆ. ಉಳಿದಂತೆ ಎರಡು ಬಾರಿ ಪಕ್ಷೇತರರು ಹಾಗೂ ಎರಡು ಸಲ ಜೆಡಿಎಸ್ ಅಧಿಕಾರ ಅನುಭವಿಸಿದೆ.

1989ರಿಂದ 2008ರ ವರೆಗೆ ತಲಾ ಎರಡು ಬಾರಿ ಶಿವನಂಜಪ್ಪ ಹಾಗೂ ಎಸ್.ಆರ್.ಶ್ರೀನಿವಾಸ್ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಒಮ್ಮೆ ಮಾತ್ರ ಎನ್.ವೀರಣ್ಣಗೌಡ ಆಯ್ಕೆ ಆಗಿದ್ದರು.

ಕಳೆದ ಐದು ಚುನಾವಣೆ ಫಲಿತಾಂಶ ಗಮನಿಸಿದರೆ ಶಿವನಂಜಪ್ಪ ನಾಲ್ಕು ಬಾರಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್, ಮಗದೊಮ್ಮೆ ಪಕ್ಷೇತರರಾಗಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.

1989ರಲ್ಲಿ ಶಿವನಂಜಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಯಶಸ್ಸು ಕಂಡಿದ್ದರು. 1994ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೊಮ್ಮೆ ಆಯ್ಕೆ ಆಗಿದ್ದರು. 1999ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಜೆಡಿಎಸ್‌ನ ಎನ್.ವೀರಣ್ಣಗೌಡ ವಿರುದ್ಧ ಪರಾಜಿತರಾಗಿದ್ದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಜೆಡಿಎಸ್ ಸೇರಿ ಸ್ಪರ್ಧಿಸಿ ಸೋತರು.

2004ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ಎಸ್.ಆರ್.ಶ್ರೀನಿವಾಸ್ ವಿಧಾನಸಭೆ ಪ್ರವೇಶಿಸಿದರು. 2008ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದರು. ಈಗ ಮತ್ತೊಮ್ಮೆ ಜೆಡಿಎಸ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಮತಗಳ ಅಂತರ: 1989ರಲ್ಲಿ ಶಿವನಂಜಪ್ಪ 16 ಸಾವಿರ ಮತಗಳ ಅಂತರದಿಂದ ಜಯಗಳಿಸಿರುವುದನ್ನು ಹೊರತುಪಡಿಸಿದರೆ, ನಂತರದ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳ ಮತಗಳ ಅಂತರ 15 ಸಾವಿರ ದಾಟಿಲ್ಲ. ಚುನಾವಣೆಯಿಂದ ಚುನಾವಣೆಗೆ ಗೆಲುವಿನ ಅಂತರದಲ್ಲಿ ಬದಲಾವಣೆ ಕಂಡುಬರುತ್ತದೆ.

ಈಗಿನ ಸ್ಥಿತಿ: ಚುನಾವಣೆ ಸಮೀಪಿಸಿದಂತೆ ಟಿಕೆಟ್ ಕಸರತ್ತು ಬಿರುಸಾಗಿದೆ. ತಮ್ಮ ನಾಯಕರ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ. ಜೆಡಿಎಸ್ ಹೊರತುಪಡಿಸಿದರೆ ಉಳಿದ ಪಕ್ಷಗಳಲ್ಲಿ ಇನ್ನೂ ಯಾರು ಅಭ್ಯರ್ಥಿಗಳು ಎಂಬುದು ನಿರ್ಧಾರವಾಗಿಲ್ಲ. ಈಗಾಗಲೇ ಎಸ್.ಆರ್.ಶ್ರೀನಿವಾಸ್ ಪ್ರಚಾರ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಗೊಂದಲ ಮುಂದುವರಿದಿದ್ದು, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಒಬ್ಬರ ಹೆಸರು ಪ್ರಸ್ತಾಪವಾದರೆ, ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸುತ್ತದೆ. ಹೊರಗಿನವರಿಗೆ ಟಿಕೆಟ್ ಕೊಡಬಾರದು, ಸ್ಥಳೀಯರಿಗೆ ಅವಕಾಶ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕುವ ಕೆಲಸ ನಡೆದಿದೆ. ಟಿಕೆಟ್‌ಗಾಗಿ ಪಕ್ಷದಲ್ಲಿ ಗುಂಪುಗಳಾಗಿರುವುದು ಮುಖಂಡರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಬಿಜೆಪಿಯಿಂದ ಎಂ.ಸಿ.ಪ್ರಕಾಶ್, ವಿಜಯಕುಮಾರ್ ಹೆಸರು ಕೇಳಿಬರುತ್ತಿದೆ. ಕೆಜೆಪಿಯಿಂದ ಯಾರನ್ನು ನಿಲ್ಲಿಸಬೇಕು ಎಂಬುದನ್ನು ಜಿ.ಎಸ್.ಬಸವರಾಜು ಇನ್ನೂ ನಿರ್ಧರಿಸಬೇಕಿದೆ. ಪ್ರಮುಖವಾಗಿ ಬೆಟ್ಟಸ್ವಾಮಿ ಹೆಸರು ಕೇಳಿಬರುತ್ತಿದೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮಹದೇವಯ್ಯ ಟಿಕೆಟ್ ಪಡೆಯಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.