ADVERTISEMENT

ಡಮ್ಮಿ ಅಭ್ಯರ್ಥಿ: ಕಾನೂನು ಬಾಹಿರ

ಜಿಲ್ಲಾಧಿಕಾರಿ ಅನುರಾಗ್‌ ತಿವಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 6:03 IST
Last Updated 13 ಏಪ್ರಿಲ್ 2013, 6:03 IST

ತುಮಕೂರು: ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯು ಮತ್ತೊಬ್ಬ ಅಭ್ಯರ್ಥಿಯ ಡಮ್ಮಿ ಅಭ್ಯರ್ಥಿಯಾಗುವುದು ಪ್ರಜಾಪ್ರತಿನಿಧಿ ಕಾಯ್ದೆ 1951ರ ಅನ್ವಯ ಕಾನೂನು ಬಾಹಿರ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಎಚ್ಚರಿಕೆ ನೀಡಿದ್ದಾರೆ.

ಒಬ್ಬ ಅಭ್ಯರ್ಥಿಯು ಮತ್ತೊಬ್ಬ ಅಭ್ಯರ್ಥಿ ಪರವಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮತ ಯಾಚಿಸಿದರೆ ಅಂತಹ ಡಮ್ಮಿ ಅಭ್ಯರ್ಥಿಯ ಖರ್ಚನ್ನು ಮೂಲ ಅಭ್ಯರ್ಥಿಗೆ ಸೇರಿಸಲಾಗುವುದು. ಸಾರ್ವಜನಿಕರು ಇಂತಹ ಚುನಾವಣಾ ಅಕ್ರಮ ಕಂಡು ಬಂದರೆ ಹತ್ತಿರದ ತಹಶೀಲ್ದಾರ್, ಪೊಲೀಸ್ ಅಧಿಕಾರಿ, ಕಂಟ್ರೋಲ್ ರೂಂ ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗೆ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.

ಡಮ್ಮಿ ಅಭ್ಯರ್ಥಿಯ ಹೆಸರಿನಲ್ಲಿ ಪರವಾನಗಿ ಪಡೆದ ವಾಹನಗಳನ್ನು ಬೇರೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಳಸಿಕೊಂಡರೆ ಡಮ್ಮಿ ಅಭ್ಯರ್ಥಿಯ ಮತಗಟ್ಟೆ ಏಜೆಂಟ್, ಎಣಿಕೆ ಏಜೆಂಟ್ ಬೇರೆ ಅಭ್ಯರ್ಥಿ ಪರವಾಗಿ ಕಾರ್ಯನಿರ್ವಹಿಸಿದ್ದು ಕಂಡು ಬಂದಲ್ಲಿ ಇದು ಚುನಾವಣಾ ಕಾನೂನಿನ ಉಲ್ಲಂಘನೆಯಾಗುತ್ತದೆ. ಅಂತಹ ಡಮ್ಮಿ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 171 ಎಚ್ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆಯುವ ಚುನಾವಣಾ ಸಂಬಂಧಿತ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗುವುದು ಮತ್ತು ಚಿತ್ರೀಕರಣ ಕೂಡ ಮಾಡಲಾಗುವುದು. ಯಾವುದೇ ಚುನಾವಣಾ ಅಕ್ರಮ ಅಥವಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆಧಾರ್ ಕಾರ್ಡ್: ಸ್ಪಷ್ಟನೆ
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ವಾಸ ಮತ್ತು ವಯಸ್ಸು ಸಮರ್ಥಿಸುವ ದಾಖಲೆಯಾಗಿ ಆಧಾರ್ ಕಾರ್ಡ್ ಪರಿಗಣಿಸಲು ಚುನಾವಣೆ ಆಯೋಗ ಸೂಚನೆ ನೀಡಿಲ್ಲ. ಆದರೂ ಆಧಾರ್ ದಾಖಲೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ಖಚಿತಪಡಿಸಿದ ನಂತರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

ಶನಿವಾರವೂ ನಾಮಪತ್ರ ಸಲ್ಲಿಕೆ
2ನೇ ಶನಿವಾರವಾದ ಏ. 13ರಂದು ವಿಧಾನಸಭೆ ಚುನಾವಣೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಚುನಾವಣೆ ಕಾರ್ಯ ಎಂದಿನಂತೆ ನಡೆಯುಯಲಿದೆ ಎಂದು ಉಪ ವಿಭಾಗಾಧಿಕಾರಿ ನಕುಲ್ ತಿಳಿಸಿದ್ದಾರೆ.

ಅಕ್ರಮ ಮದ್ಯ ವಶ
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗಳು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 450 ದಾಳಿ ನಡೆಸಿದ್ದು, 36 ಪ್ರಕರಣ ದಾಖಲಿಸಿದ್ದಾರೆ.

ಇದರಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಸಾಗಣೆ ಮತ್ತು ಸಂಗ್ರಹಕ್ಕೆ ಸಂಬಂಧಿಸಿದಂತೆ ಇದೆ. ಒಟ್ಟು ರೂ. 3.13 ಲಕ್ಷ ಬೆಲೆಯ ಸುಮಾರು 1272 ಲೀಟರ್ ಮದ್ಯ ಮತ್ತು 3 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಯೋಗದ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ನಕ್ಷೆಗಳೇ ಇಲ್ಲ
ತುಮಕೂರು:
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ನಕ್ಷೆಗಳು ಸಿಗುತ್ತವೆ. ಆದರೆ ಜಿಲ್ಲೆಯ 11 ಕ್ಷೇತ್ರಗಳ ನಕ್ಷೆಗಳು ಮಾತ್ರ ನಾಪತ್ತೆ.

ರಾಜ್ಯದ 224 ಕ್ಷೇತ್ರಗಳ ನಕ್ಷೆಯನ್ನು ಅನುಕ್ರಮವಾಗಿ ನೀಡಲಾಗಿದೆ. ವಿಧಾನಸಭೆ ಕ್ಷೇತ್ರಗಳ ಸಂಖ್ಯೆ 127ರ ವರೆಗೆ ನಕ್ಷೆಗಳಿವೆ. 128ರಿಂದ 138ರ ವರೆಗೆ ಕ್ಷೇತ್ರಗಳ ಹೆಸರಿಲ್ಲ.

ಜಿಲ್ಲೆಯ ಕ್ಷೇತ್ರವಾರು ನಕ್ಷೆಗಳು ವೆಬ್‌ಸೈಟ್‌ನಲ್ಲಿ ದೊರೆಯುತ್ತವೆ ಎಂದು ಉಪವಿಭಾಗಾಧಿಕಾರಿ ನಕುಲ್ `ಪ್ರಜಾವಾಣಿ'ಗೆ ತಿಳಿಸಿದ್ದರು. ಆದರೆ ಈ 11 ಕ್ಷೇತ್ರಗಳ ನಕ್ಷೆಯನ್ನು ವೆಬ್‌ಸೈಟ್‌ಗೆ ಸೇರಿಸಿಲ್ಲ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.