ADVERTISEMENT

ಡಯಾಲಿಸಿಸ್‌ಗೆ ಬೇಡಿಕೆ; ತಂತ್ರಜ್ಞರ ಕೊರತೆ

ಜಿಲ್ಲಾಸ್ಪತ್ರೆಯ 6 ಯುನಿಟ್‌ನಲ್ಲಿ ನಿತ್ಯ 12 ಮಂದಿಗೆ ಉಚಿತ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಮೇ 2014, 5:39 IST
Last Updated 3 ಮೇ 2014, 5:39 IST
ಡಯಾಲಿಸಿಸ್‌ಗೆ ಬೇಡಿಕೆ; ತಂತ್ರಜ್ಞರ ಕೊರತೆ
ಡಯಾಲಿಸಿಸ್‌ಗೆ ಬೇಡಿಕೆ; ತಂತ್ರಜ್ಞರ ಕೊರತೆ   

ತುಮಕೂರು: ಜಿಲ್ಲೆಯಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಡಯಾಲಿಸಿಸ್‌ಗೆ ಬೇಡಿಕೆ ಜಾಸ್ತಿಯಾಗಿದೆ. ಆದರೆ ಬೇಡಿಕೆ ಇರುವ ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಕಿಡ್ನಿ ಡಯಾಲಿಸಿಸ್‌ ಮಾಡಲು ಅಗತ್ಯ ಯಂತ್ರಗಳು ಮತ್ತು ಸಿಬ್ಬಂದಿ ಕೊರತೆ ಇದೆ.
ಜಿಲ್ಲಾಸ್ಪತ್ರೆಯಲ್ಲಿ 2010ರಲ್ಲಿ 6 ಡಯಾಲಿಸಿಸ್‌ ಯುನಿಟ್‌ಗಳನ್ನು ಅಳವಡಿಸ­ಲಾಯಿತು. ಒಂದು ಯುನಿಟ್‌ನಲ್ಲಿ ದಿನಕ್ಕೆ ಇಬ್ಬರಿಗೆ ಡಯಾಲಿಸಿಸ್‌ ಮಾಡಬಹುದು. ಇದರಿಂದ ದಿನಕ್ಕೆ 12 ಮಂದಿಗೆ ಚಿಕಿತ್ಸೆ ದೊರೆ­ಯುತ್ತದೆ. ಹಗಲು ಪಾಳಿಯಲ್ಲಿ 6 ಮಂದಿಗೆ ಮತ್ತು ರಾತ್ರಿ ಪಾಳಿಯಲ್ಲಿ 6 ಮಂದಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ.

ಕೆಲವು ರೋಗಿಗಳಿಗೆ ವಾರಕ್ಕೆ ಎರಡು ದಿನ, ಮತ್ತೆ ಕೆಲವರಿಗೆ ವಾರಕ್ಕೊಮ್ಮೆ ಡಯಾಲಿಸಿಸ್‌ ನಡೆಯುತ್ತಿದೆ. ಆದರೂ ಡಯಾಲಿಸಿಸ್‌ ಚಿಕಿತ್ಸೆಗೆ ಹೆಸರು ನೋಂದಾಯಿಸುವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲರಿಗೂ ಅಗತ್ಯ ಸೇವೆ ಒದಗಿಸಲು ಆಸ್ಪತ್ರೆಯಲ್ಲಿ ತಾಂತ್ರಿಕ ಸಿಬ್ಬಂದಿಯ ಕೊರತೆ ಇದೆ. ಈಗ 60ಕ್ಕೂ ಹೆಚ್ಚು ರೋಗಿಗಳು ಡಯಾಲಿಸಿಸ್‌ಗೆ ಒಳಗಾಗು­ತ್ತಿದ್ದಾರೆ. ಅಲ್ಲದೆ 12 ಮಂದಿ ಹೆಸರು ನೋಂದಾ­ಯಿಸಿದ್ದು, ಡಯಾಲಿಸಿಸ್‌ಗಾಗಿ ಕಾಯುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲು ಬಿಪಿಎಲ್‌ ಕಾರ್ಡ್‌ ಇರುವವರಿಗೆ ಮಾತ್ರ ಸಂಪೂರ್ಣ ಉಚಿತವಾಗಿ ಡಯಾಲಿಸಿಸ್‌ ಮಾಡಲಾಗುತ್ತಿತ್ತು. ಉಳಿದವರಿಗೆ ಅರ್ಧ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಡಯಾಲಿಸಿಸ್‌ ಅನಿವಾರ್ಯತೆ ಅರಿತು ಈಗ ಎಲ್ಲರಿಗೂ (ಪಡಿತರ ಚೀಟಿ ಇಲ್ಲದವರಿಗೂ) ಉಚಿತವಾಗಿ ಡಯಾಲಿಸಿಸ್‌ ಮಾಡಲಾಗುತ್ತಿದೆ. ಇದರಿಂದ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರದಲ್ಲಿ ಬೇಡಿಕೆ ಹೆಚ್ಚಾಗಿದೆ.

ನಗರದ ಮೂರು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಯಂತ್ರವಿದೆ. ಆದರೆ ಇಲ್ಲಿ ₨ 900ರಿಂದ ₨ 1200 ಶುಲ್ಕ ವಿಧಿಸಲಾಗುತ್ತದೆ. ರೋಗಿ ನಿರಂತರವಾಗಿ ಡಯಾಲಿಸಿಸ್‌ಗೆ ಒಳಗಾಗ­ಬೇಕು. ಇದರಿಂದ ತಿಂಗಳಿಗೆ 8ರಿಂದ 10 ಬಾರಿ ಡಯಾಲಿಸಿಸ್‌ಗೆ ಮಾಡಿಸಿಕೊಂಡರೆ ₨ 10ರಿಂದ ₨ 12 ಸಾವಿರ ಖರ್ಚು ಬರುತ್ತದೆ. ಇದನ್ನು ತಡೆದುಕೊಳ್ಳುವ ಶಕ್ತಿ ಬಡವರಿಗೆ ಮಾತ್ರವಲ್ಲ, ಮಧ್ಯಮ ವರ್ಗಕ್ಕೂ ಇರುವುದಿಲ್ಲ. ಜಿಲ್ಲಾಸ್ಪತ್ರೆಗೆ ಸದ್ಯಕ್ಕೆ ಇನ್ನು 4 ಡಯಾಲಿಸಿಸ್‌ ಯಂತ್ರಗಳ ಅಗತ್ಯವಿದೆ.

ಸರ್ಕಾರ 4 ವರ್ಷಗಳ ಹಿಂದೆ ಡಯಾಲಿಸಿಸ್‌ ಯಂತ್ರ ನೀಡಿತ್ತು. ಆದರೆ ಡಯಾಲಿಸಿಸ್‌ ತಂತ್ರಜ್ಞರನ್ನು ಇನ್ನೂ ನೀಡಿಲ್ಲ. ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳ ನರ್ಸ್‌ಗಳನ್ನು ಬೆಂಗಳೂರಿಗೆ ಕಳುಹಿಸಿ, ಯಂತ್ರ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ. ರಾಜ್ಯದ ಸಾಕಷ್ಟು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ತಂತ್ರಜ್ಞರಿಲ್ಲ. ಸರ್ಕಾರ ತಂತ್ರಜ್ಞರ ನೇಮಕಾತಿ ಮಾಡುವವರೆಗೆ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇಲ್ಲ.

ತಿಪಟೂರು, ಮಧುಗಿರಿಗೂ...
ತುಮಕೂರು:
ಜಿಲ್ಲೆಯ ತಿಪಟೂರು ಮತ್ತು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ನೀಡಲಾಗುತ್ತಿದೆ. ಅಲ್ಲಿನ ಸಿಬ್ಬಂದಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ತರಬೇತಿ ನೀಡಲಾಗುತ್ತಿದೆ. ವಿಭಾಗ ಮಟ್ಟದ ಆಸ್ಪತ್ರೆಗಳಿಗೆ ಡಯಾಲಿಸಿಸ್‌ ಯಂತ್ರ ನೀಡಲು ಸರ್ಕಾರ ನಿರ್ಧಾರ ಮಾಡಿದ್ದು, ಶೀಘ್ರ ಯಂತ್ರಗಳನ್ನು ನೀಡುವ ಸಾಧ್ಯತೆ ಇದೆ. ಇಲ್ಲಿನ ಆಸ್ಪತ್ರೆಗಳಲ್ಲಿ ಯಂತ್ರ ಅಳವಡಿಸಿದರೆ, ಜಿಲ್ಲಾಸ್ಪತ್ರೆ ಮೇಲಿರುವ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ.

ಆಸ್ಪತ್ರೆ ನವೀಕರಣ
ಜಿಲ್ಲಾಸ್ಪತ್ರೆಯನ್ನು ₨ 7 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, 6 ತಿಂಗಳಲ್ಲಿ ಕೆಲಸ ಮುಗಿಯುವ ಸಾಧ್ಯತೆ ಇದೆ. ಒಪಿಡಿ ಸಮೀಪ ಹೊರ ರೋಗಿಗಳಿಗೆ ವಿಶ್ರಾಂತಿ ಕೊಠಡಿ, ಸುಸಜ್ಜಿತ ಕ್ಯಾಂಟಿನ್‌ ಮುಂತಾದ ಕಟ್ಟಡ ನಿರ್ಮಾಣ ಕಾಮಗಾರಿ ಸಹ ಇದರಲ್ಲಿ ಸೇರಿದೆ.

ಡಯಾಲಿಸಿಸ್‌ ಕೊಠಡಿಗೆ ಅಳವಡಿಸಿದ್ದ ಎ.ಸಿ ಪೈಪ್‌ಲೈನ್‌ ಹಾಳಾಗಿದ್ದು, ಈಗ ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲಿಯೇ ದುರಸ್ತಿ ಮಾಡಲಾಗುವುದು. ಡಯಾಲಿಸಿಸ್‌ ಕೇಂದ್ರದಲ್ಲಿ ಫ್ಯಾನ್‌ಗಳಿದ್ದು, ರೋಗಿಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ.ರುದ್ರಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT