ADVERTISEMENT

ತಕ್ಷಣ ಹೇಮಾವತಿ ನೀರು ಹರಿಸಲು ಆಗ್ರಹ

ಕೊಳವೆ ಬಾವಿ ಕೊರೆಸುವುದರಿಂದ ಹಣ ಪೋಲು; ಗೊರೂರಿನ ಹೇಮಾವತಿ ಜಲಾಶಯದಲ್ಲಿ 20 ಟಿ.ಎಂ.ಸಿ ನೀರು ಲಭ್ಯ– ಮಾಜಿ ಸಚಿವ ಶಿವಣ್ಣ

ಪಿಟಿಐ
Published 19 ಜೂನ್ 2018, 8:48 IST
Last Updated 19 ಜೂನ್ 2018, 8:48 IST
ಸೊಗಡು ಶಿವಣ್ಣ
ಸೊಗಡು ಶಿವಣ್ಣ   

ತುಮಕೂರು: ‘ಗೊರೂರಿನ ಜಲಾಶಯದಲ್ಲಿ 20 ಟಿ.ಎಂ.ಸಿ ನೀರಿದ್ದು, ಕೂಡಲೇ ತುಮಕೂರು ನಗರದ ನೀರು ಪೂರೈಕೆ ಜಲಸಂಗ್ರಹಾಗಾರಗಳಿಗೆ ಹೇಮಾವತಿ ನದಿ ನೀರು ಹರಿಸಬೇಕು’ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ವರ್ಷ ಮಳೆ ಇಲ್ಲದೇ ಜಲಾಶಯದಲ್ಲಿ ನೀರಿನ ಕೊರತೆ ಇತ್ತು. ಇದರಿಂದ ತುಮಕೂರು ಜಲಸಂಗ್ರಹಾಗಾರ ಬುಗುಡನಹಳ್ಳಿ ಕೆರೆಗೆ ನೀರು ಸಮರ್ಪಕವಾಗಿ ಹರಿಸಲಿಲ್ಲ. ಸಾಕಷ್ಟು ತೊಂದರೆ ಪಡಬೇಕಾಯಿತು. ಆದರೆ, ಈ ಬಾರಿ ಜಲಾಶಯದಲ್ಲಿ ನೀರು ಇದ್ದರೂ ಹರಿಸುವ ಪ್ರಯತ್ನ ಮಾಡಿಲ್ಲ’ ಎಂದು ದೂರಿದರು.

‘ಈಗ ನೀರು ಲಭ್ಯ ಇರುವುದರಿಂದ ಅರಸೀಕೆರೆ– ತಿಪಟೂರು– ಚಿಕ್ಕನಾಯಕನಹಳ್ಳಿ– ಗುಬ್ಬಿ ಪಟ್ಟಣಗಳು ಹಾಗೂ ತುಮಕೂರು ನಗರ ಹೇಮಾವತಿ ಎಡದಂಡೆ ಕಾಲುವೆಯ ವ್ಯಾಪ್ತಿಗೆ ಬರುತ್ತವೆ. ಈ ಕಾಲುವೆ ಮೂಲಕ 800 ಕ್ಯುಸೆಕ್ ನೀರು ಹರಿಸಿದರೆ ಎರಡು ದಿನಗಳಲ್ಲಿ ತುಮಕೂರಿನ ಬುಗುಡನಹಳ್ಳಿ ಕೆರೆ ತಲುಪಲಿದೆ. 5–6 ದಿನಗಳಲ್ಲಿಯೇ ತುಮಕೂರು ನಗರಕ್ಕೆ ಹೇಮಾವತಿ ನದಿ ನೀರನ್ನೇ ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಿದೆ. ಮಹಾನಗರ ಪಾಲಿಕೆ ಮತ್ತು ಹೇಮಾವತಿ ನೀರಾವರಿ ನಿಗಮದ ಅಧಿಕಾರಿಗಳು ಗಮನಹರಿಸಬೇಕು’ ಎಂದು ಹೇಳಿದರು.

ADVERTISEMENT

3 ತಿಂಗಳು ಟ್ಯಾಂಕರ್ ನೀರು, ಜನರ ಗತಿ ಏನು?

‘ನಗರದಲ್ಲಿ ಈಗಾಗಲೇ ಖಾಸಗಿ ವಾಟರ್ ಟ್ಯಾಂಕರ್‌ನಿಂದ ಜನರು ಪಡೆದುಕೊಳ್ಳುತ್ತಿದ್ದಾರೆ. ಮಹಾನಗರ ಪಾಲಿಕೆಯು ಇನ್ನೂ 3 ತಿಂಗಳು ಹೇಮಾವತಿ ನೀರು ಲಭಿಸುವುದಿಲ್ಲ ಎಂದು ಹೇಳಿದ್ದು, ಜನರು ಆತಂಕಗೊಂಡಿದ್ದಾರೆ. ಪಾಲಿಕೆಯು ಬಡಾವಣೆಗಳಿಗೆ ನೀರು ಪೂರೈಸಲು ಟ್ಯಾಂಕರ್‌ಗಳಿಗೆ ಪ್ರತಿ ಟ್ರಿಪ್‌ಗೆ ₹ 500ರಂತೆ ನಿಗದಿಪಡಿಸಿದ್ದು, ಇದಕ್ಕಾಗಿ 35 ಟ್ಯಾಂಕರ್ ಬಾಡಿಗೆ ಪಡೆದಿದೆ. ಪ್ರತಿ ದಿನಕ್ಕೆ ಒಂದು ಟ್ಯಾಂಕರ್‌ 8 ಟ್ರಿಪ್ ನಂತೆ ಲೆಕ್ಕ ಹಾಕಿದರೆ ₹ 1.40 ಲಕ್ಷ ಆಗುತ್ತದೆ. ಮೂರು ತಿಂಗಳಿಗೆ ₹ 1.5 ಕೋಟಿ ಪಾವತಿಸಬೇಕಾಗುತ್ತದೆ’ ಎಂದು ವಿವರಿಸಿದರು.

‘ಅದೇ ರೀತಿ 35 ಕೊಳವೆ ಬಾವಿ ಕೊರೆಸುತ್ತಿದ್ದು, ಇದೂ ಕೂಡಾ ಅಗತ್ಯವಿಲ್ಲ. ಈಗಾಗಲೇ 550ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಲಾಗಿದೆ. ಒಂದು ಸಾವಿರ ಅಡಿ ಕೊರೆದರೂ ನೀರಿಲ್ಲ. ಮತ್ತೆ ಅದೇ ಕೆಲಸ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

‘ಟ್ಯಾಂಕರ್ ನೀರಿಗೆ, ಕೊಳವೆ ಬಾವಿ ಕೊರೆಸಲು ಹಣ ಪೋಲು ಮಾಡುವ ಬದಲು ಹೇಮಾವತಿ ಜಲಾಶಯದಿಂದ ತ್ವರಿತವಾಗಿ ನೀರು ಪಡೆಯುವ ಪ್ರಯತ್ನಕ್ಕೆ ಒತ್ತು ಕೊಡಬೇಕು. ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮನವಿ ಪತ್ರ ಸಲ್ಲಿಸಿದ್ದು, ಬೇಗ ನೀರು ಹರಿಸುವ ವ್ಯವಸ್ಥೆ ಮಾಡಲು ಕೋರಿದ್ದೇನೆ’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಕೆ.ಪಿ.ಮಹೇಶ್, ಊರುಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜುಂಡಪ್ಪ, ಬನಶಂಕರಿ ಬಾಬು,  ಹರೀಶ್ ಗೋಷ್ಠಿಯಲ್ಲಿದ್ದರು.

ಮೂರು ಹಂತ ವಿಂಗಡಿಸಿ ಹೂಳೆತ್ತಲಿ

ತುಮಕೂರು ನಗರದ ಕುಡಿಯುವ ನೀರಿನ ಬಗುಡುನಹಳ್ಳಿ ಜಲಸಂಗ್ರಹಾಗಾರದ ಹೂಳೆತ್ತುವ ಕಾರ್ಯವನ್ನು ಈ ಮಳೆಗಾಲದಲ್ಲಿ ಪ್ರಾರಂಭಿಸಿರುವುದು ಸರಿಯಲ್ಲ ಎಂದರು. ‘ನೀರು ಸಂಗ್ರಹ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಹೂಳೆತ್ತುವ ಕಾರ್ಯ ಮೂರು ಹಂತಗಳಾಗಿ ವಿಂಗಡಿಸಿಕೊಳ್ಳಬೇಕು. ಮೊದಲ ಹಂತದಲ್ಲಿ ನೀರು ಬರುವ ಜಾಗದಲ್ಲಿ ನೀರು ತುಂಬಿಸಿಕೊಂಡು ಉಳಿದ ಭಾಗದಲ್ಲಿ ಹೂಳೆತ್ತುವ ಕಾಮಗಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಮಧ್ಯಮ ವರ್ಗದ ಕುಟುಂಬಕ್ಕೆ ದೊಡ್ಡ ಹೊರೆ

‘ಮೂರು ತಿಂಗಳು ಹೇಮಾವತಿ ನದಿ ನೀರು ಇಲ್ಲ ಎಂದು ಮಹಾನಗರ ಪಾಲಿಕೆ, ಜನಪ್ರತಿನಿಧಿಗಳು ಸರಳವಾಗಿ ಹೇಳಿಬಿಟ್ಟರೆ ಹೇಗೆ? ಮಧ್ಯಮವ ವರ್ಗದ ಕುಟುಂಬಗಳು 3 ತಿಂಗಳು ಟ್ಯಾಂಕರ್ ನೀರು ಖರೀದಿಸಿದರೆ ನೀರಿಗಾಗಿಯೇ ₹ 10 ಸಾವಿರ ಖರ್ಚು ಮಾಡಬೇಕಾಗುತ್ತದೆ. ಇದು ಭಾರಿ ಹೊರೆಯಾಗಲಿದೆ’ ಎಂದು ತಿಳಿಸಿದರು.

ಲೋಕಸಭೆಗೆ ಸ್ಪರ್ಧಿಸುವೆ

ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಉದ್ದೇಶಿಸಿದ್ದು, ಈ ಕುರಿತು ಪಕ್ಷದ ಮುಖಂಡರು, ಬೆಂಬಲಿಗರೊಂದಿಗೆ ಚರ್ಚಿಸಲಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಬಳಿಕ ಒಂದು ಹಂತಕ್ಕೆ ತೀರ್ಮಾನ ಮಾಡಲಿದ್ದೇನೆ ಎಂದರು. ‘ನಮ್ಮ ಪಕ್ಷ ಜಿಲ್ಲೆಯಲ್ಲಿ ಸದೃಢವಾಗಿದೆ. ಹಿಂದೆ ಈ ಲೋಕಸಭಾ ಕ್ಷೇತ್ರ ಬಿಜೆಪಿಯದ್ದೇ ಆಗಿತ್ತು. ತುರುವೇಕೆರೆ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೂ ಬಿಜೆಪಿ ಬಲಿಷ್ಠವಾಗಿತ್ತು. ಈಗಲೂ ಇದೆ’ ಎಂದು ಹೇಳಿದರು.

ಅಪರಾಧ ಕೃತ್ಯ ತಡೆಯಲಿ

ನಗರದಲ್ಲಿ ಈಚೆಗೆ ಕಳ್ಳರು, ದುಷ್ಕರ್ಮಿಗಳು ಹೆಚ್ಚಾಗಿದ್ದಾರೆ. ಹಗಲು ಹೊತ್ತಿನಲ್ಲಿಯೇ ಮನೆಗೆ ನುಗ್ಗಿ ಹಣ ದೋಚಿದ ಪ್ರಕರಣಗಳು ನಡೆದಿವೆ. ಸರಣಿ ಸರಗಳ್ಳತನ ಪ್ರಕರಣ ವರದಿಯಾಗಿವೆ. ಅಂಗಡಿ ಕಳವು ನಡೆದಿವೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಪರಾಧ ಕೃತ್ಯ ತಡೆಯಬೇಕು’ ಎಂದು ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.