ತಿಪಟೂರು: ನಗರಸಭೆಯ 2012-13ನೇ ಸಾಲಿನ ಆಯುವ್ಯಯ ಸಿದ್ಧತೆಗೆ ಸಂಬಂಧಿಸಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ಮೂಲ ಸೌಲಭ್ಯವನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸುವ ಸಲಹೆ ಕೇಳಿಬಂದವು.
ನಗರಸಭೆ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಪ್ರಕಾಶ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ್ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೆಲ ಸದಸ್ಯರು ನಾಗರಿಕ ಸಂಬಂಧಿ ಸಮಸ್ಯೆ ಪರಿಹಾರಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಕೋರಿದರು.
ವಾರ್ಡ್‌ಗೊಂದು ಪ್ರತ್ಯೇಕ ಕೌಂಟರ್ ತೆರೆದು ನಾಗರಿಕರ ದೂರು-ದುಮ್ಮೋನ ಆಲಿಸಬೇಕು. ಕಂದಾಯ, ತೆರಿಗೆ ಮತ್ತಿತರ ಹಣ ಪಾವತಿಗೆ ಸಾರ್ವಜನಿಕರಿಗೆ ಅಲ್ಲಿಯೇ ಅನುಕೂಲ ಮಾಡಿಕೊಡಬೇಕು. ನಾಗರಿಕರು ನಗರಸಭೆಗೆ ಅಲೆಯುವುದನ್ನು ತಪ್ಪಿಸಲು ಎಲ್ಲ ಕೆಲಸಗಳು ಅವರ ವಾರ್ಡ್‌ನ ಕೌಂಟರ್‌ನಲ್ಲಿ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಲಹೆಗೆ ಬಹುತೇಕರು ಸಮ್ಮತಿಸಿದರು.
ಕೋಳಿ ಮತ್ತು ಮಾಂಸದ ವ್ಯಾಪಾರಕ್ಕೆ ಸೂಕ್ತ ಸ್ಥಳ ನಿಗದಿ ಸಂಬಂಧ ಕಟ್ಟುನಿಟ್ಟು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ರಸ್ತೆ ಆಕ್ರಮಿಸಿ ವ್ಯಾಪಾರ ಮಾಡುವವರಿಂದ ಸಂಚಾರ ತೊಂದರೆ ಎದುರಾಗುತ್ತಿದ್ದು, ಈ ಸಂಬಂಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಗರದ ಜನರ ದೀಘ್ರ ಕಾಲದ ಬೇಡಿಕೆಯಾದ ಈಜು ಕೊಳ ನಿರ್ಮಾಣಕ್ಕೆ ಈ ಬಾರಿಯಾದರೂ ಆದ್ಯತೆ ನೀಡಬೇಕು ಎಂದು ಕೆಲವರು ಕೋರಿದರು.
ಕಾಟಚಾರಕ್ಕೆ ಬಜೆಟ್ ಮಂಡಿಸದೆ ದೂರದೃಷ್ಟಿಯುಳ್ಳ ಯೋಜನೆ ಹಾಕಿಕೊಂಡು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು ಎಂಬ ಒತ್ತಾಯವೂ ಕೇಳಿಬಂತು. ಸಾರ್ವಜನಿಕರು ಮತ್ತು ಸಂಘ-ಸಂಸ್ಥೆ ಪದಾಧಿಕಾರಿಗಳ ಹಾಜರಿ ಕಡಿಮೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.