ತುಮಕೂರು: ನಗರದ ಎಸ್‌ಐಟಿ ಆವರಣದಲ್ಲಿ ಮಂಗಳವಾರ ಮುಕ್ತಾಯಗೊಂಡ 30ನೇ ರಾಜ್ಯಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ತಾಂತ್ರಿಕ ಕಾಲೇಜು ಲೀಗ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ವಿಜೇತರಾಗಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಎರಡು ಗೆಲುವಿನೊಂದಿಗೆ ಮೂಡುಬಿದಿರೆಯ ಆಳ್ವಾಸ್ ತಾಂತ್ರಿಕ ಕಾಲೇಜು ರನ್ನರ್ ಆಗಿ ನಗೆ ಬೀರಿತು.
ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದರೂ ತುಮಕೂರಿನ ಎಸ್‌ಐಟಿ ತಂಡ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟಿತು.
ಮಹಿಳೆಯರ ವಿಭಾಗದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ವಿಜೇತರಾಗಿ ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಕಾಲೇಜು ತಂಡ ಚಾಂಪಿಯನ್ ಆಗಿ ನಗೆಬೀರಿದರು. ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜು ತಂಡ ದ್ವಿತೀಯ ಸ್ಥಾನ ಹಾಗೂ ತುಮಕೂರಿನ ಎಸ್‌ಐಟಿ ತಂಡ ಮೂರನೇ ಸ್ಥಾನಗಳಿಸಿತು.
ಪಂದ್ಯಾವಳಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ರಾಮಯ್ಯ ತಂಡದ ಕಾರ್ತಿಕ್ ಉತ್ತಮ ಹೊಡೆತಗಾರ, ಆಳ್ವಾಸ್ ತಂಡದ ಅರ್ಜುನ್ ಉತ್ತಮ ಪಾಸಾರ್ ಹಾಗೂ ಎಸ್‌ಐಟಿ ತಂಡದ ಕೆ.ಬಿಜು ಸರ್ವಾಂಗೀಣ ಆಟಗಾರರಾಗಿ ಪ್ರಶಸ್ತಿ ಪಡೆದರು.
ಮಹಿಳೆಯರ ವಿಭಾಗದಲ್ಲಿ ಸಹ್ಯಾದ್ರಿ ತಂಡದ ಶ್ರದ್ಧಾ ಉತ್ತಮ ಹೊಡೆತಗಾರ್ತಿ, ಎಂ.ಎಸ್. ರಾಮಯ್ಯ ತಂಡದ ಮೇಘನಾ ಉತ್ತಮ ಪಾಸರ್ ಹಾಗೂ ಎಸ್‌ಐಟಿಯ ಶಾಲಿನಿ ಸರ್ವಾಂಗೀಣ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾದರು.
ಶಿಕ್ಷಕರ ತಾತ್ಕಾಲಿಕ ವರ್ಗಾವಣೆ ಪಟ್ಟಿ
ತುಮಕೂರು: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಇದ್ದಲ್ಲಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಮೋಹನ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಉಪ ನಿರ್ದೇಶಕ ಕಚೇರಿಯಲ್ಲಿ ಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನು ಏ.21ರೊಳಗೆ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವಂತೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.