ADVERTISEMENT

ತುಮಕೂರು ಇತಿಹಾಸದ ಅಚ್ಚಳಿಯದ ಪುಟಗಳು...

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 8:10 IST
Last Updated 9 ನವೆಂಬರ್ 2012, 8:10 IST

ತುಮಕೂರು ಎಂದರೆ ಏನು ಎಂಬ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವೇ ಸಿಗಲಿಲ್ಲ. ಮದುವೆ ಮಾಡಿಕೊಳ್ಳಬೇಕೆಂದರೆ ರಾಜನಿಗೆ ಸುಂಕ ತೆರುತ್ತಿದ್ದ ವಿಶಿಷ್ಟ ಪದ್ಧತಿಯ ತುಮಕೂರು ಅನೇಕ ವೈಶಿಷ್ಟತೆ ಹೊಂದಿದೆ. ಈಗ ಸಣ್ಣ ಹಳ್ಳಿಗಳಂತಿರುವ ಎಂ.ಎನ್.ಕೋಟೆ, ನಿಟ್ಟೂರು ವ್ಯಾಪಾರ, ವಹಿವಾಟು ಆಡಳಿತದ ಕೇಂದ್ರಗಳಿದ್ದವು. ಆಗ ಕೆಲ ಮನೆಗಳ ಊರು. ಯಾವುದೇ ಪ್ರಸಿದ್ಧಿಗಳಿಲ್ಲದ ತುಮಕೂರು ಮುಂದೆ ಬೆಳೆದು ಜಿಲ್ಲಾ ಕೇಂದ್ರವಾಗಿದ್ದು ಈ ಊರಿನ ಶಕ್ತಿ ಮತ್ತು ಹೆಮ್ಮೆ.

ಕಳೆದ ಆಗಸ್ಟ್ 14ಕ್ಕೆ ಸರಿಯಾಗಿ 212 ವರ್ಷದ ಹಿಂದಿನ ಮಧುಗಿರಿಯ ವೈಭವ ನೋಡಿಕೊಂಡು ತೋವಿನಕೆರೆ ಮಾರ್ಗವಾಗಿ ಶಿರಾಗೇಟ್ ಮೂಲಕ ತುಮಕೂರು ಪ್ರವೇಶಿಸಿದ ಪ್ರವಾಸಿಗ ಫ್ರಾನ್ಸಿಸ್ ಬುಖಾನನ್‌ಗೆ ತುಮಕೂರಿನಲ್ಲಿ ನೋಡಲು ಏನೇನು ಇರಲಿಲ್ಲ. ಶಿರಾಗೇಟ್ ದಾಟಿ ಆತ ಮುಂದೆ ಬಂದಾಗ ಚಿಕ್ಕಪೇಟೆಯಲ್ಲೊಂದು ಕೋಟೆ ಇತ್ತಂತೆ. ಬೆರಳಣಿಕೆ ಮನೆಗಳು, ರಾಗಿ ಹೊಲ ಇಷ್ಟೆ ಕಂಡಿದ್ದು.

ಆಗಿನ ಚಿಕ್ಕಪೇಟೆಯೇ ಈಗಿನ ತುಮಕೂರು. ಚಿಕ್ಕಪೇಟೆಯಲ್ಲಿ ಕೋಟೆಯ ಅವಶೇಷಗಳು ಈಗಲೂ ಇವೆ. ಅಲ್ಲೊಂದು ನೆಲದೊಳಗಿನ ಮಠ ಗಮನ ಸೆಳೆಯುತ್ತದೆ. ಸಮುದ್ರ ಮಟ್ಟದಿಂದ 2669 ಅಡಿ ಎತ್ತರ ಇರುವ ತುಮಕೂರಿನಲ್ಲಿ ಆಗ ಜೈನ, ಬೌದ್ಧ, ಕ್ರಿಶ್ಚಿಯನ್ನರು ಸಾಕಷ್ಟು ಸಂಖ್ಯೆಯಲ್ಲೇ ಇದ್ದರು. ಈಗಿನ ಬನಶಂಕರಿ ಆಗಿನ ಬನ್ನೆಮ್ಮನ ಕೆರೆ. ವರ್ಷಕ್ಕೊಮ್ಮೆ ಬೌದ್ಧ ಸನ್ಯಾಸಿಯರು ಬೀಡು ಬಿಡುತ್ತಿದ್ದ ತಾಣ. ಈಗ ಕುರುಹೂ ಇಲ್ಲಿಲ್ಲ.

ತುಮಕೂರಿನಲ್ಲಿ ಕುರುಬ, ತಿಗಳರ ಧರ್ಮ ಪೀಠಗಳಿದ್ದವು ಎಂದರೆ ನಂಬಲು ಕಷ್ಟ. ಹಿಂದುಳಿದವರ ಪ್ರಜ್ಞೆಗೆ ಸಾಕ್ಷಿಯಾಗಬೇಕಾಗಿದ್ದ ಈ ಧರ್ಮ ಪೀಠಗಳು ನಶಸಿಹೋದುದ್ದರ ಹಿಂದೆ ದೊಡ್ಡ ಕಥೆಯೇ ಇದೆ. ಪ್ರಸಿದ್ಧ ಶಿವಶರಣ ಸಿದ್ದರಾಮ, ತೋಂಟದ ಸಿದ್ದಲಿಂಗ ಯತಿಗಳು, ಅಟವೀ ಸ್ವಾಮಿಗಳು ಈ ಭಾಗದಲ್ಲಿ ಧರ್ಮ ಪ್ರಚಾರ ನಡೆಸಿದ್ದರು. ಬೆಳಗುಂಬದಲ್ಲಿ ಸಿದ್ಧರಾಮರ ಗದ್ದುಗೆಯೇ ಇದೆ.

ಮಂತ್ರಿ ಗೂಳಿ ಬಾಚಿದೇವ ತನ್ನ ರಾಣಿ ಭೀಮವ್ವನ ನೆನಪಿಗಾಗಿ ಭೀಮವ್ವ ಜಿನಾಲಯ, ಭೀಮಸಮುದ್ರ ಕೆರೆ ಕಟ್ಟಿಸಿದ. ಈ ಭೀಮಸಮುದ್ರ ಕೆರೆಯೇ ಈಗಿನ ಭೀಮಸಂದ್ರ. ಕೋಡಿ ಬಸವೇಶ್ವರ ದೇವಾಲಯದ ಮುಂದಿನ ಕಲ್ಲಿನ ಕಂಬವನ್ನು ಮಲ್ಲಿಶೆಟ್ಟಿಯ ಮಗ ಪರ್ವತನಾಯಕ ತನ್ನ ತಂದೆ- ತಾಯಿಗಳಿಗೆ ಶುಭವಾಗಲಿ ಎಂದು ಸ್ಥಾಪಿಸಿದ. ಪರ್ವತನಾಯಕ ತುಮಕೂರು ಪ್ರಾಂತ್ಯದ ಅಧಿಪತಿ.

ತುಮಕೂರು ಜೈನ, ಬೌದ್ಧರ ತಾಣವಾಗಿತ್ತು. ಉಗಾರದ ಪಾಯಸಾಗರರು ಚಿಕ್ಕಪೇಟೆಯ ಹೆಂಚಿನ ಮನೆಯೊಂದರಲ್ಲಿ ಜಿನಾಲಯ ಸ್ಥಾಪಿಸಿದ್ದರು. ಈಗ ಮಂದರಗಿರಿ ಕ್ಷೇತ್ರ ಜೈನರ ಪ್ರಮುಖ ಕೇಂದ್ರ. ಜಿಲ್ಲೆಯ ಅತ್ಯಂತ ಹಳೆ ಶಾಸನ (ಕ್ರಿ.ಶ. 400) ಈಗಿನ ಮೆಳೆಕೋಟೆಯಲ್ಲಿ ಸಿಕ್ಕಿದೆ. ಗಂಗದೊರೆ ಮಾಧವವರ್ಮ ಬೌದ್ಧ ಧರ್ಮೀಯರಿಗೆ ಭೂಮಿದಾನ ಮಾಡಿದ ವಿವರಗಳಿವೆ. ನಾಗಾರ್ಜುನ ಎಂಬ ಹೆಸರಿನ ಹಳ್ಳಿ ಈಗಲೂ ಇಲ್ಲಿದೆ.

ತುಮಕೂರು ಭಾಗದಲ್ಲಿ ನಡೆಯುತ್ತಿದ್ದ ಮದುವೆಗಳ ಸುಂಕ ಸಂಗ್ರಹಿಸಿ ಕೊಟ್ಟ ಬಗ್ಗೆ ಹೆಬ್ಬೂರಿನಲ್ಲಿ ದಾಖಲೆಗಳಿವೆ. ಆದರೆ ಇದಕ್ಕೆ ಸೆಡ್ಡು ಹೊಡೆದು ನಿಂತದ್ದು ಚಿಕ್ಕನಾಯಕನಹಳ್ಳಿಯ ಕಂದಿಗೆರೆಯವರು. ಈ ಕುರಿತು ಕಂದಿಗೆರೆ ಶಾಸನದಲ್ಲಿ ವಿವರಗಳಿವೆ.

ಹೊರಪೇಟೆಯಲ್ಲಿರುವ ದೇಶದ ಗರಡಿ ಮನೆ ಕಂಡವರಿಗೆ ಏನೇನು ಅನಿಸದೇ ಇರಬಹುದು. ಇದು ಒಂದು ಕಾಲದ ತುಮಕೂರಿನ ಕುಸ್ತಿಯ ಇತಿಹಾಸವನ್ನೇ ಒಡಳಲ್ಲಿ ಸೇರಿಸಿಕೊಂಡಿದೆ. ಚಿಕ್ಕಪೇಟೆ, ಹೊರಪೇಟೆ ಆಗ ಪೇಟೆ ಎನಿಸಿದ್ದವು. ಪೇಟೆಯವರೆಗೂ ನಮಗೂ ಕುಸ್ತಿ ಬಿದ್ದಾಗ ಸಾವಿರಾರು ಜನರು ಸೇರುತ್ತಿದ್ದರು ಎಂಬುದನ್ನು ಕಥೆಗಾರ ಜಿ.ವಿ.ಆನಂದಮೂರ್ತಿ ನೆನಪು ಮಾಡುತ್ತಾರೆ.

ಈಗಿನ ಚಿಕ್ಕಪೇಟೆ ಅಗ್ರಹಾರ, ಕೈದಾಳ, ಚಿನಗ, ಚಿನಿವಾರ, ಬೆಳ್ಳಿಬಟ್ಟಲ ಹಳ್ಳಿ, ಮಂಚಕಲ್‌ಕುಪ್ಪೆ, ಹಿರೇಗುಂಡ್‌ಗಲ್, ಹಿರೇಹಳ್ಳಿ ತುಮಕೂರಿನ ಅತಿ ಪ್ರಾಚೀನ ಹಳ್ಳಿಗಳು. ಕೈದಾಳ, ಗೂಳೂರು ಒಳಗೊಂಡ ತುಮಕೂರಿಗೆ ಹಿಂದೆ ಕ್ರೀಡಾಪುರ ಎಂಬ ಹೆಸರಿತ್ತು ಎನ್ನುತ್ತಾರೆ ಇತಿಹಾಸ ಸಂಶೋಧಕ ಜಿ.ಎಂ.ಶ್ರೀನಿವಾಸ್‌ಮೂರ್ತಿ.

ಕೈದಾಳದ ಚನ್ನಕೇಶವ ದೇವಾಲಯ ಗಮನ ಸೆಳೆಯುತ್ತದೆ. ಶಿಲ್ಪಿ ಡಕಣಾಚಾರಿ ಹುಟ್ಟೂರು ಎಂಬ ಐತಿಹ್ಯವಿದೆ. ಗೂಳೂರಿನ ಗಣಪತಿಯ ಕಥೆ ಈ ಹಿಂದೆ ಪ್ರಾಥಮಿಕ ಶಾಲೆಗೆ ಪಠ್ಯವಾಗಿದ್ದನ್ನು ಸ್ಮರಿಸಬಹುದು.
ದೇವರಾಯನದುರ್ಗದಲ್ಲಿ ಚಿಕ್ಕದೇವರಾಜ ಒಡೆಯರು ಕೋಟೆ ನಿರ್ಮಿಸಿದ್ದರು. ಏಳು ಬಾಗಿಲಿದ್ದ ಕೋಟೆ ಈಗಿಲ್ಲ. ಇದು ಜಯಮಂಗಲಿ, ಗರುಡಾಚಲ, ಶಿಂಷಾ ನದಿಯ ಉಗಮ ಸ್ಥಾನ. ಆದರೆ ಈಗ ಈ ನದಿಗಳ ವೈಭವ ನೆನಪಿಗೂ ಸಿಗದಷ್ಟು ಮಾಸಿ ಹೋಗಿವೆ. ಆದರೆ ಈ ನದಿಗಳ ಉಳಿವಿಗೆ ಯಾರೂ ಪ್ರಯತ್ನಿಸಿದಂತೆ ಕಾಣುತ್ತಿಲ್ಲ.

ದೇವರಾಯನದುರ್ಗಕ್ಕೆ ಬಂದಿದ್ದ ಶಂಕರಾಚಾರ್ಯರು ವಿದ್ಯಾಶಂಕರ ದೇವಾಲಯ ಸ್ಥಾಪಿಸಿದರು. ಶ್ರೀರಾಮ, ಸೀತಾ, ಲಕ್ಷ್ಮಣರು ನಾಮದಚಿಲುಮೆಗೆ ಆಗಮಿಸಿದ್ದರು ಎಂಬ ಕಥೆಯಿದೆ.

ದೇವರಾಯನದುರ್ಗದಲ್ಲಿರುವ ಯೋಗ, ಭೋಗ ನರಸಿಂಹಸ್ವಾಮಿ ದೇವಸ್ಥಾನ, ಬೆಟ್ಟದ ಮೇಲಿನ ಸೌಂದರ್ಯ ತುಮಕೂರಿನ ಜಾಗತಿಕ ಹೆಮ್ಮೆಗೆ ಹಿಡಿದ ಕನ್ನಡಿ. ಇಲ್ಲಿ ಕಾಗೆ ಹಾರಾಡುವುದಿಲ್ಲ ಎಂಬುದೇ ಮತ್ತೊಂದು ಕೌತುಕ.

ಗೂಳೂರು ಸಿದ್ದವೀರಣ್ಣನ್ನೊಡೆಯ ಶೂನ್ಯ ಸಂಪಾದನೆ ಹೆಸರಾಗಿದೆ. ಕೆಸ್ತೂರಿನ ಕೆಸ್ತೂರ ದೇವ ಇಲ್ಲಿನ ವಚನಕಾರ. ಬೆಳ್ಳಾವಿಯ ನರಹರಿಶಾಸ್ತ್ರಿ, ಬೆಳ್ಳಾವೆ ವೆಂಕಟನಾರಾಯಣಪ್ಪ, ಹೆಬ್ಬೂರಿನ ಹೇರಂಬ ಕವಿ, ಬಿ.ಶಿವಮೂರ್ತಿಶಾಸ್ತ್ರಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿದ್ದರು. ಕೀರ್ತನಕಾರರು ಇಲ್ಲಿದ್ದರು.

ಟಿ.ಎನ್.ಮಹದೇವಯ್ಯ, ಜಿ.ಎಸ್.ಸಿದ್ದಲಿಂಗಯ್ಯ, ಚಿಕ್ಕವೀರಯ್ಯ, ಸಣ್ಣಗುಡ್ಡಯ್ಯ. ಕಾಶಿ ವಿಶ್ವನಾಥಶೆಟ್ಟಿ, ಕೆ.ಬಿ.ಸಿದ್ದಯ್ಯ. ಟಿ.ಸುನಂದಮ್ಮ, ಕಮಲಾ ಹಂಪನಾ, ಸುಲೋಚನಾದೇವಿ ಆರಾಧ್ಯ, ಛಾಯಾದೇವಿ ನಂಜಪ್ಪ ಅವರು ತುಮಕೂರಿನ ಹೆಮ್ಮೆ.

ಎಂ.ವಿ.ರಾಮ್‌ರಾವ್, ವೀ.ಸಿ.ನಂಜುಂಡಯ್ಯ, ಕೆ.ಎಲ್.ನರಸಿಂಹಯ್ಯ, ಆರ್.ಎಸ್.ಆರಾಧ್ಯ, ಟಿ..ಕೆ.ಗೋವಿಂದರಾಜು ಸ್ವಾತಂತ್ರ್ಯ ಹೋರಾಟಗಾರರು. ಗಾಂಧೀಜಿಯೂ ಇಲ್ಲಿಗೆ ಬಂದಿದ್ದರು. ಭೂದಾನ ಚಳವಳಿಯ ವಿನೋಬಭಾವೆ ಅವರನ್ನೂ ತುಮಕೂರು ಸೆಳೆದಿತ್ತು. ಎಂಪ್ರೆಸ್ ಕಾಲೇಜಿನಲ್ಲಿ ತಂಗಿದ್ದ ಅವರು ಭಾಷಣ ಮಾಡಿ ಪಾದಯಾತ್ರೆ ನಡೆಸಿದ್ದರು.

ಕೆರೆಗಳ ಬೀಡೆಂದು ಕರೆಸಿಕೊಂಡಿದ್ದ ತುಮಕೂರಿನಲ್ಲಿ 114 ಶಾಸನಗಳು ಸಿಕ್ಕಿವೆ. ಅಮಾನಿಕೆರೆಯನ್ನು ಗುಬ್ಬಿ ಹೊಸಹಳ್ಳಿಯ ಮಹಾನಾಡ ಪ್ರಭುಗಳು ಜೀರ್ಣೋದ್ಧಾರ ಮಾಡಿರುವ ಬಗ್ಗೆ ಟಿ.ಬೇಗೂರಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಶಾಸನವಿದೆ.

ಸೀಬಿ ಕ್ಷೇತ್ರದಲ್ಲಿ ನರಸಿಂಹಸ್ವಾಮಿ ದೇವಾಲಯದ ವರ್ಣಚಿತ್ರಕಲೆಯು ವರ್ಣ ಚಿತ್ರ ಇತಿಹಾಸದ ದಾಖಲೆ. ದಾಸೋಹ ಹಾಗೂ ಶಿಕ್ಷಣ ದಾಸೋಹದ ಸಿದ್ದಗಂಗಾ ಕ್ಷೇತ್ರ ಸಾರ್ವಕಾಲಿಕ ದಾಖಲೆಯ ಧಾರ್ಮಿಕ ಕ್ಷೇತ್ರ.

ಈಗಿನ ಜಿಲ್ಲಾಧಿಕಾರಿ ಕಚೇರಿ (ಈಗ ಹೊಸ ಕಟ್ಟಡ ಇದೆ) ಬ್ರಿಟಿಷರ ಬಂಗಲೆಯಾಗಿತ್ತು. ಒಂದನೇ ಮಹಡಿಯಲ್ಲಿ ಜಿಲ್ಲಾಧಿಕಾರಿ ಇರುತ್ತಿದ್ದರು. ಕಚೇರಿ ನೆಲಕ್ಕೆ ರತ್ನಗಂಬಳಿ ಹಾಸಲಾಗಿತ್ತು. ಕೆಲಸ ಮುಗಿಸಿದ ಜಿಲ್ಲಾಧಿಕಾರಿ ಅಮಾನಿಕೆರೆಯ ಮೂಲಕ ದೋಣಿಯಲ್ಲಿ ಶಿರಾಗೇಟ್‌ನ ಮನೆಗೆ ತೆರಳುತ್ತಿದ್ದರು. ಜಿಲ್ಲಾಧಿಕಾರಿ ಮನೆ ಬಿಟ್ಟರೆ ಹಸಿರು ಧ್ವಜ ಹಾರಿಸುತ್ತಿದ್ದರು. ಮನೆಯಲ್ಲೇ ಇದ್ದರೆ ಕೆಂಪು ಧ್ವಜ ಹಾರುತ್ತಿತ್ತಂತೆ. ಆದರೆ ಈಗ ನೆನಪಿಗಾಗಿ ಅಲ್ಲಿರುವುದು ಗಡಿಯಾರ ಮಾತ್ರ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.