ADVERTISEMENT

ದಶಕವಾದರೂ ಪೂರ್ಣಗೊಳ್ಳದ ಭವನ

ದೇವರಹಳ್ಳಿ ಧನಂಜಯ
Published 25 ನವೆಂಬರ್ 2017, 9:35 IST
Last Updated 25 ನವೆಂಬರ್ 2017, 9:35 IST
ಅರ್ಧಕ್ಕೆ ನಿಂತ ಶತಮಾನೋತ್ಸವ ಭವನ ಕಾಮಗಾರಿ
ಅರ್ಧಕ್ಕೆ ನಿಂತ ಶತಮಾನೋತ್ಸವ ಭವನ ಕಾಮಗಾರಿ   

ಚಿಕ್ಕನಾಯಕನಹಳ್ಳಿ: ಭಾಷಾಪಂಡಿತ, ನಿಘಂಟು ರಚನೆಕಾರರಾದ ತೀ.ನಂ. ಶ್ರೀಕಂಠಯ್ಯ ತಾಲ್ಲೂಕಿನ ತೀರ್ಥಪುರ ದವರು. ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಬಹುಕೋಟಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಶತಮಾನೋತ್ಸವ ಭವನ ನಿರ್ಮಾಣ ಕನಸು ಇನ್ನೂ ನನಸಾಗಿಲ್ಲ.

2006ರಲ್ಲಿಯೇ ಶತಮಾನೋತ್ಸವ ಭವನ ನಿರ್ಮಾಣದ ಕನಸು ಗರಿಗೆದರಿ ದರೂ ಈವರೆಗೂ ಸಾಕಾರಗೊಂಡಿಲ್ಲ. ನ.26ರಂದು ತೀ.ನಂ. ಶ್ರೀಕಂಠಯ್ಯ ಅವರ 111ನೇ ಜನ್ಮದಿನೋತ್ಸವ. ಸಾಹಿತಿಗಳು, ಅವರ ಅಭಿಮಾನಿಗಳು ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಶತಮಾನೋತ್ಸವ ಭವನ ನಿರ್ಮಾಣ ನನೆಗುದಿಗೆ ಬಿದ್ದಿರುವುದು ಅವರಲ್ಲಿ ಬೇಸರವನ್ನುಂಟು ಮಾಡಿದೆ.

ಕನಸು ಗರಿಗೆದರಿದ್ದು ಹೇಗೆ: 2006ರಲ್ಲಿ ತೀ.ನಂ.ಶ್ರೀ ಅವರಿಗೆ 100 ವರ್ಷ ತುಂಬಿದಾಗ ಅಂದಿನ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ADVERTISEMENT

ಬಳಿಕ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ₹ 1 ಕೋಟಿ ಅನುದಾನ ಕಲ್ಪಿಸಲು ಸಂಪುಟ ಅನುಮೋದನೆ ದೊರಕಿತ್ತು. ತಾಂತ್ರಿಕ ಅನುಮೋದನೆ ಲಭಿಸಿ ಕಟ್ಟರ ನಿರ್ಮಾಣ ಕಾಮಗಾರಿಯೂ ಪ್ರಾರಂಭಕ್ಕೆ ಚಾಲನೆ ಲಭಿಸಿತ್ತು.

2013ರ ವಿಧಾನಸಭೆ ಚುನಾವಣೆಯಲ್ಲಿ ಸಿ.ಬಿ.ಸುರೇಶ್ ಬಾಬು ಅವರು ಶಾಸಕರಾದರು. ತೀ.ನಂ.ಶ್ರೀ ಶತಮಾನೋತ್ಸವ ಭವನ ಸ್ಥಳವನ್ನೇ ಬದಲಾಯಿಸಿದರು. ಪಟ್ಟಣದ ಶೆಟ್ಟಿಕೆರೆ ರಸ್ತೆಯಲ್ಲಿನ ವೆಂಕಣ್ಣನ ಕಟ್ಟೆಯಲ್ಲಿ ನಿವೇಶನ ಗುರುತಿಸಿ ಅಲ್ಲಿ ನಿರ್ಮಾಣಕ್ಕೆ ಸಿದ್ಧತೆ ನಡೆಯಿತು.

ಅನುದಾನ ಕೊರತೆಯಿಂದ ಕಾಮಗಾರಿ ವಿಳಂಬವಾಗಿ ಕುಟುಂತ್ತ ಸಾಗಿತು. 2015ರಲ್ಲಿ ₹ ₹ 50 ಲಕ್ಷ ಹೆಚ್ಚುವರಿ ಅನುದಾನವನ್ನು ಶಾಸಕರು ದೊರಕಿಸಿದರೂ ಮತ್ತೆ ಹಣದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತು. ಈಗ ಹೆಚ್ಚುವರಿ ₹ 1.75 ಕೋಟಿಗೆ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ಕಂಡ ಸಾಹಿತಿಗಳು, ಸಾಹಿತ್ಯ ಪ್ರಿಯರು ಶತಮಾನೋತ್ಸವ ಭವನ ನಿರ್ಮಾಣ ಪೂರ್ಣವಾಗುವಾದರೂ ಎಂದು? ಎಂದು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.

ಮತ್ತೊಂದೆಡೆ ಅರೆಬರೆ ನಿರ್ಮಾಣ ಆಗಿರುವ ಸಭಾಂಗಣಕ್ಕೆ ಬಾಗಿಲು ಹಚ್ಚಿಲ್ಲ. ಹೀಗಾಗಿ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ. ಮತ್ತೊಂದೆಡೆ ಗೋಡೆ ಗಳ ಮೇಲೆ ಅಶ್ಲೀಲ ಬರಹಗಳು ಎದ್ದು ಹೊಡೆಯುತ್ತಿವೆ. ಸಭಾಂಗಣದ ಆವರಣ ಷಟಲ್ ಬ್ಯಾಡ್ಮಿಂಟನ್ ಅಂಕಣವಾಗಿದೆ. ಹೀಗೆ ಯಾವ್ಯಾವುದೆ ಕೆಲಸಕ್ಕೆ, ಯಾರ್‍ಯಾರೋ ಬಳಸಿಕೊಳ್ಳುತ್ತಿದ್ದಾರೆ. ಪುರಸಭೆಯಾಗಲಿ, ಜನಪ್ರತಿನಿಧಿ ಗಳಾಗಲಿ ಈವರೆಗೂ ಕಣ್ತೆರೆದು ನೋಡಿಲ್ಲ ಎಂದು ಸಾರ್ವಜನಿಕರು ಆರೋಪ.

ತೀ.ನಂ.ಶ್ರೀ ವ್ಯಕ್ತಿತ್ವ, ಸಾಧನೆ
ಶ್ರೀಕಂಠಯ್ಯ ಅವರು ತಾಲ್ಲೂಕಿನ ತೀರ್ಥಪುರದ ನಂಜುಂಡಯ್ಯ ಮತ್ತು ಭಾಗೀರಥಮ್ಮ ಅವರ ಪುತ್ರ. 1906ರಲ್ಲಿ ಜನಿಸಿದರು. ಚಿಕ್ಕನಾಯಕನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1022ರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಭಾರತೀಯ ಕಾವ್ಯ ಮೀಮಾಂಸೆ ಹಾಗೂ ಸಂವಿಧನದ ಕನ್ನಡ ಅವತರಣಿಕೆ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅವರು ನೀಡಿರುವ ಉಪಯುಕ್ತ ಕೃತಿಗಳು. ಅವರು ಸಂವಿಧಾನ ರಚನಾ ಸಮಿತಿ ಸದಸ್ಯರೂ ಆಗಿದ್ದರು.

ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೂ ಅವರ ಹೆಸರು ಪ್ರಸ್ತಾಪವಾಗಿತ್ತು. 1966ರಲ್ಲಿ ಸೆಪ್ಟೆಂಬರ್ 7ರಂದು ಕೋಲ್ಕತ್ತಾದಲ್ಲಿ 59ನೇ ವಯಸ್ಸಿಗೆ ನಿಧನರಾದರು.

2006ರಲ್ಲಿ ಸರ್ಕಾರವು ತೀ.ನಂ.ಶ್ರೀ ಶತಮಾನೋತ್ಸವ ವರ್ಷವಾಗಿ ಘೋಷಣೆ ಮಾಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀ.ನಂ.ಶ್ರೀ ಬಗ್ಗೆ ವಿಚಾರಸಂಕಿರಣಗಳನ್ನು ಆಯೋಜಿಸಿತು.

ಆದರೆ, ಅವರ ಜನ್ಮಸ್ಥಳವಾದ ಚಿಕ್ಕನಾಯಕನಹಳ್ಳಿಯ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮಾತ್ರ ಇಂದಿಗೂ ನಿರ್ಲಕ್ಷ್ಯ ಮಾಡಿಕೊಂಡೇ ಬಂದಿದೆ ಎಂಬ ನೋವು ಅವರ ಅಭಿಮಾನಿಗಳನ್ನು ಕಾಡು

ಅಂಕಿ ಅಂಶ

₹ 1 ಕೋಟಿ ಮೊದಲು ಕಂತು ಬಿಡಗಡೆಯಾದ ಅನುದಾನ
₹ 50 ಲಕ್ಷ 2ನೇ ಕಂತಿನಲ್ಲಿ ಬಿಡುಗಡೆಯಾದ ಅನುದಾನ
₹ 1.75 ಕೋಟಿ ಹೆಚ್ಚುವರಿ ಅನುದಾನಕ್ಕೆ ಸಲ್ಲಿಸಿದ ಪ್ರಸ್ತಾವನೆ
₹ 3.25 ಕೋಟಿ ಒಟ್ಟು ಅಂದಾಜು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.