ADVERTISEMENT

ದೇಶ ಪ್ರೇಮ ಹೆಚ್ಚಿಸುವ ಸೇವೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 9:32 IST
Last Updated 11 ಅಕ್ಟೋಬರ್ 2017, 9:32 IST

ಕೊಡಿಗೇನಹಳ್ಳಿ: ‘ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಸೇವಾ ಮನೋಭಾವದ ಜತೆಗೆ ದೇಶ ಪ್ರೇಮವನ್ನು ಮೂಡಿಸುವಲ್ಲಿ ಸಹಕಾರಿಯಾಗುತ್ತದೆ’ ಎಂದು ಸರ್ವೋದಯ ಸಂಯುಕ್ತ ಪಿ.ಯು.ಕಾಲೇಜಿನ ಪ್ರಾಂಶುಪಾಲ ಕೆ.ವಿ.ಸತ್ಯನಾರಾಯಣ ತಿಳಿಸಿದರು.

ಹೋಬಳಿಯ ಮುದ್ದೇನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಭಾನುವಾರ ನಡೆದ ಸರ್ವೋದಯ ಸಂಯುಕ್ತ ಪಿ.ಯು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಡೆ-ನುಡಿ, ಶಿಸ್ತು ಮತ್ತು ಸೇವೆ ಮಾಡುವ ಮನೋಭಾವ ಬೆಳಸಿಕೊಂಡಲ್ಲಿ ಮುಂದೆ ಸತ್ಪ್ರಜೆಯಾಗಿ ಭವ್ಯ ಭಾರತದ ನಿರ್ಮಾಣಕ್ಕೆ ನಾಂದಿಯಾಗುತ್ತದೆ’ ಎಂದರು.

ADVERTISEMENT

ಶಿಬಿರಾಧಿಕಾರಿ ಟಿ.ಎನ್.ರಾಮಪ್ಪ ಮಾತನಾಡಿ, ‘ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಚಿಂತನೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಶಿಬಿರಾರ್ಥಿಗಳು ಮಾಡಬೇಕು ಎಂದು ತಿಳಿಸಿದರು. ಉಪನ್ಯಾಸಕ ಕಾಂತರಾಜು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್‌ ಶರ್ಮ ನಿರೂಪಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ್, ಸರ್ವೋದಯ ಸಂಸ್ಥೆಯ ಅಧ್ಯಕ್ಷ ಎಂ.ಎನ್.ಅಶ್ವತ್ಥರೆಡ್ಡಿ, ಮುಖಂಡರಾದ ಟಿ.ಪಿ.ಮಂಜುನಾಥ್, ಲಕ್ಷ್ಮೀನಾರಾಯಣ್, ಮುತ್ಯಾಲಪ್ಪ, ಶಿವಯ್ಯ, ನರಸೀಯಪ್ಪ, ಅಂಜಿನಪ್ಪ, ಎಂ.ಎಚ್.ನಾರಾಯಣಪ್ಪ ಇದ್ದರು.

ಅ.13ರಂದು ಅರಣ್ಯ ಇಲಾಖೆಯಿಂದ ಸಸಿಗಳನ್ನು ನೀಡುತ್ತಿದ್ದು, ಗ್ರಾಮದ ಪ್ರತಿ ಮನೆ ಮುಂದೆ ಶಿಬಿರಾರ್ಥಿಗಳಿಂದ ನೆಡಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.