ADVERTISEMENT

ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 9:00 IST
Last Updated 19 ಸೆಪ್ಟೆಂಬರ್ 2011, 9:00 IST

ಶಿರಾ: ನಗರಸಭೆ ಉಪಾಧ್ಯಕ್ಷೆ ರತ್ನಮ್ಮ ತಿಪ್ಪಣ್ಣ ರಾಜೀನಾಮೆಯಿಂದ ತೆರವಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದರೆ, ಬಿಜೆಪಿ ಏಕೈಕ ಸದಸ್ಯ ಕೂಡ ತಾನು ಒಂದು ಕೈ ನೋಡೋಣ ಎಂದು ಸಜ್ಜಾಗಿದ್ದಾರೆ ಎನ್ನಲಾಗಿದೆ.

ನಗರಸಭೆಯಲ್ಲಿ ಜೆಡಿಎಸ್ ಪ್ರಬಲವಾಗಿದ್ದರೂ ಈಚೆಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಪ್ರತಿತಂತ್ರ ರೂಪಿಸುವಲ್ಲಿ ವಿಫಲವಾದ ಕಾರಣ ನಗರಸಭೆ ಈಗ ಕಾಂಗ್ರೆಸ್ ಹಿಡಿತದಲ್ಲಿದೆ. ಪಕ್ಷೇತರರು ಹಾಗೂ ಕೆಲ ಜೆಡಿಎಸ್ ಸದಸ್ಯರೂ ಕೂಡ ಕಾಂಗ್ರೆಸ್ ಪರವಾಗಿದ್ದಾರೆ. ಹೀಗಾಗಿ ಉಪಾಧ್ಯಕ್ಷ ಸ್ಥಾನ ಕೂಡ ಕಾಂಗ್ರೆಸ್ ಪಾಲಾಗುವುದು ಬಹುತೇಕ ನಿಶ್ಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯ ಅಮಾನುಲ್ಲಾಖಾನ್ ಪಕ್ಷೇತರವಾಗಿ ಆಯ್ಕೆಯಾಗಿ ನಂತರ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಸದಸ್ಯೆ ಅಭಿದಾಖಾನಂ ನೂರಿ ಕೂಡ ಕಾಂಗ್ರೆಸ್ ಪಕ್ಷದಿಂದಲೇ ಉಪಾಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿದ್ದಾರೆ. ಈ ಮಧ್ಯೆ ಬಿಜೆಪಿ ಏಕೈಕ ಸದಸ್ಯ ಪಾಂಡುರಂಗಪ್ಪ ಕೂಡ ಕಾಂಗ್ರೆಸ್ ಸಖ್ಯದಲ್ಲಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಒಂದು ಕೈ ನೋಡೋಣ ಎಂದು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಸ್ಲಿಂ ಸಮುದಾಯಕ್ಕೆ ಉಪಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಆಸಕ್ತಿ ಹೊಂದಿರುವ ಶಾಸಕ ಟಿ.ಬಿ.ಜಯಚಂದ್ರ ಅವರು  ಸದಸ್ಯ ನೂರುಲ್ಲಾಖಾನ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.

ನೂರುಲ್ಲಾಖಾನ್ ಈ ಹಿಂದೆ ಕಾಂಗ್ರೆಸ್‌ನಿಂದಲೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಭಾವಗೊಂಡಿದ್ದರು. ಹೀಗಾಗಿ ಮತ್ತೆ ಅವರನ್ನೇ ಪಕ್ಷದಿಂದ ಆಯ್ಕೆ ಮಾಡುವ ಬದಲು ಮುಸ್ಲಿಂ ಮಹಿಳೆಗೆ ಈವರೆಗೂ ನಗರಸಭೆಯಲ್ಲಿ ಅವಕಾಶ ದೊರೆತಿಲ್ಲ. ಈ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಹೊಂದಿರುವ ಪಕ್ಷೇತರ ಸದಸ್ಯೆ ಅಭಿದಾಖಾನಂ ನೂರಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಕೆಲ ಸದಸ್ಯರು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಬಿಜೆಪಿಯಿಂದ ಏಕೈಕ ಸದಸ್ಯರಾಗಿ ಆಯ್ಕೆಯಾಗಿರುವ ಪಾಂಡುರಂಗಪ್ಪ ಕಾಂಗ್ರೆಸ್ ಸಖ್ಯದಲ್ಲಿದ್ದು, ಮುಸ್ಲಿಂ ಸದಸ್ಯರನ್ನು ಉಪಾಧ್ಯಕ್ಷರ ನ್ನಾಗಿ ಆಯ್ಕೆಮಾಡದಿದ್ದರೆ ಪಾಂಡುರಂಗಪ್ಪ ಅವರನ್ನೇ ಆಯ್ಕೆ ಮಾಡಿ ಎಂದು ಶಾಸಕ ಟಿ.ಬಿ.ಜಯಚಂದ್ರ ಅವರ ಮೇಲೆ ಮುಸ್ಲಿಂ ಸದಸ್ಯರ ಒಂದು ಗುಂಪು ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಎಡವಿದ ಜೆಡಿಎಸ್ ಇನ್ನು ಚೇತರಿಸಿಕೊಳ್ಳದ ಸ್ಥಿತಿಯಲ್ಲಿದ್ದು, ಉಪಾಧ್ಯಕ್ಷ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿಯೂ ಆಸಕ್ತಿ ತೋರದೆ ತಟಸ್ಥ ನಿಲುವು ತಳೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.