ADVERTISEMENT

ನನೆಗುದಿಗೆ ಬಿದ್ದ ಗುಬ್ಬಿ ‘ಯಾತ್ರಿ ನಿವಾಸ’

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 9:16 IST
Last Updated 17 ಅಕ್ಟೋಬರ್ 2017, 9:16 IST
ಗುಬ್ಬಿ ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಅರ್ಧಕ್ಕೆ ಕಾಮಗಾರಿ ನಿಂತಿರುವ ‘ಯಾತ್ರಿನಿವಾಸ’ ಕಟ್ಟಡ
ಗುಬ್ಬಿ ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಅರ್ಧಕ್ಕೆ ಕಾಮಗಾರಿ ನಿಂತಿರುವ ‘ಯಾತ್ರಿನಿವಾಸ’ ಕಟ್ಟಡ   

ಗುಬ್ಬಿ: ಪಟ್ಟಣದ ಶ್ರೀಚನ್ನಬಸವೇಶ್ವರ ಸ್ವಾಮಿ ದೇವರ ಭಕ್ತರ ಅನುಕೂಲಕ್ಕಾಗಿ ಪ್ರವಾಸೋದ್ಯಮದ ಇಲಾಖೆ ನಿರ್ಮಿಸಬೇಕಿದ್ದ ಯಾತ್ರಿ ನಿವಾಸದ ನನೆಗುದಿಗೆ ಬಿದಿದ್ದೆ. ದಶಕದ ಹಿಂದೆ ಆರಂಭವಾದ ಕಟ್ಟಡ ಪೂರ್ಣಗೊಂಡಿಲ್ಲ.

ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳು ತಂಗುವ ವ್ಯವಸ್ಥೆ ಕಲ್ಪಿಸಲೆಂದು 2008ರಲ್ಲಿ ಯಾತ್ರಿನಿವಾಸವನ್ನು ಮಂಜೂರು ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಮಂಜೂರಾದ ದೇವರಾಯನ ದುರ್ಗದ ಯಾತ್ರಿನಿವಾಸ ಕಳೆದ ನಾಲ್ಕು ವರ್ಷದ ಹಿಂದೆಯೇ ಬಳಕೆಯಾಗುತ್ತಿದೆ. ಆದರೆ ಗುಬ್ಬಿ ಚನ್ನಬಸವೇಶ್ವರ ದೇವಾಲಯದ ಆವರಣದಲ್ಲಿನ ಯಾತ್ರಿನಿವಾಸ ಅರ್ಧಕ್ಕೆ ನಿಂತಿದೆ.

ಗೋಡೆ ಕಟ್ಟಿ, ಚಾವಣಿ ನಿರ್ಮಿಸಲಾಗಿದೆ. ಇದರಿಂದ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸಿಮೆಂಟ್ ಪ್ಲಾಸ್ಟಿಂಗ್, ನೆಲಹಾಸು, ಚಾವಣಿ, ಬಾಗಿಲು, ಕಿಟಕಿ ಅಳವಡಿಸುವ ಕಾರ್ಯಕ್ಕೆ ಕಾಲಕೂಡಿಬಂದಿಲ್ಲ. ಐದು ವರ್ಷದಿಂದ ಕಟ್ಟಡ ಇದ್ದ ಸ್ಥಿತಿಯಲ್ಲಿಯೇ ಇದೆ.

ADVERTISEMENT

ರಾಸುಗಳನ್ನು ಕಟ್ಟಲು, ನಾಯಿಗಳು ಮಲಗಲು ಬಳಕೆಯಾಗುತ್ತಿದೆ. ಕೂಲಿ ಕಾರ್ಮಿಕರು, ಅಲೆಮಾರಿ ಭಿಕ್ಷುಕರು ಬಂದಾಗ ತಂಗುವ ತಾತ್ಕಾಲಿಕ ತಾಣವಾಗಿದೆ. ಇಲ್ಲಿ ಯಾವಾಗಲೂ ಕತ್ತಲು ಆವರಿಸಿರುವುದರಿಂದ ರಾತ್ರಿಹೊತ್ತು ಕುಡಿಯಲು ಕುಡುಕರ ಅಡ್ಡೆ ಮಾಡಿಕೊಂಡಿದ್ದಾರೆ. ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೆ ಬಳಕೆಗೆ ಬರುವುದು ಯಾವಾಗ ಎನ್ನುತ್ತಾರೆ ಇಲ್ಲಿನ ಭಕ್ತರು.

‘ಪ್ರತಿ ವರ್ಷ ನಡೆಯುವ ವಾರ್ಷಿಕ ಜಾತ್ರೆ, ಹೂವಿನ ವಾಹನೋತ್ಸವ ಹಾಗೂ ವರ್ಷಕ್ಕೆ ಒಮ್ಮೆ ನಡೆಯುವ ವಿಶೇಷ ಪೂಜೆಗೆ ನಮ್ಮ ಕುಟುಂಬದವರು ಬಂದು ಹೋಗುತ್ತಾರೆ. ದೂರದಿಂದ ಇಲ್ಲಿಗೆ ಬಂದಾಗ ತಂಗುವ ವ್ಯವಸ್ಥೆಗಾಗಿ ಪರದಾಡುವಂತಾಗಿದೆ. ಈ ಪರದಾಟಕ್ಕೆ ಮುಕ್ತಿಯಾವಾಗ?’ ಎಂದು ಪ್ರಶ್ನಿಸುತ್ತಾರೆ ಬೆಂಗಳೂರಿನ ವೀರೇಶ್.

ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟುಹೋಗಿದ್ದಾರೆ ಎನ್ನುವ ಆರೋಪ ದೇವಸ್ಥಾನದ ಆಡಳಿತ ಮಂಡಳಿಯಲ್ಲಿದೆ. ಕಟ್ಟಡ ಅರ್ಧಕ್ಕೆ ನಿಂತು ಹೋಗಿರುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಕಚೇರಿ, ಮುಜುರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯೇ ಹೊರಬೇಕಿದೆ. ಈ ಕಟ್ಟಡದ ಕಡತ ಎಲ್ಲಿದೆ? ಕಡತಕ್ಕೆ ಮುಕ್ತಿಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಈ ಬಗ್ಗೆ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಮಾಹಿತಿ ಲಭ್ಯ ಇಲ್ಲ. ಕಳೆದ 6ತಿಂಗಳ ಹಿಂದೆ ಶ್ರೀಚನ್ನಬಸವೇಶ್ವರ ದೇವಸ್ಥಾನಕ್ಕೆ ಬಂದಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಶೀಘ್ರ ಕಟ್ಟಡ ಪೂರ್ಣಗೊಳ್ಳಲಿದೆ. ಇದನ್ನು ನಾನೇ ವಿಶೇಷ ಆಸಕ್ತಿ ವಹಿಸಿ ಕಟ್ಟಡ ಪ್ರಾರಂಭವಾಗುವಂತೆ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿಹೋಗಿದ್ದರು. ಈ ಮಾತು ಹೇಳಿ 6ತಿಂಗಳಾದರೂ ಕಟ್ಟಡ ಕಾಮಗಾರಿ ಆರಂಭದ ಮುನ್ಸೂಚನೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.