ADVERTISEMENT

ನಾಯಕತ್ವ ನಿರ್ಮಾಣಕ್ಕೆ ಸಂವಾದದ ಮಾರ್ಗ

ಜಿ.ಧನಂಜಯ
Published 1 ಆಗಸ್ಟ್ 2013, 9:45 IST
Last Updated 1 ಆಗಸ್ಟ್ 2013, 9:45 IST

`ನಿಮ್ಮಲ್ಲಿ ಕೆಲಸ ಮಾಡಿಕೊಂಡು ಕಲಿಯುತ್ತಿರುವವರು ಇದ್ದರೆ ಕೈ ಮೇಲೆ ಮಾಡಿ'
-ನೇಪಾಳಿ ಉಚ್ಚಾರದ ಇಂಗ್ಲಿಷ್‌ನಲ್ಲಿ ಯುವತಿಯೊಬ್ಬರು ಈ ಮಾತು ಉಲಿದಾಗ ನೆಲೆ ನಿಂತಿದ್ದು ಮೌನ. ಕೆಲ ಹೊತ್ತಿನ ಬಳಿಕ ಶರತ್ ಮುಜುಗರದ ಮುದ್ದೆಯಂತೆ ಮೇಲೆದ್ದು, `ನಾನು ಬೆಳಗಿನ ಹೊತ್ತು ಮನೆಗಳಿಗೆ ಪೇಪರ್ ಹಾಕ್ತೀನಿ, ಮೇಡಂ' ಎಂದು ಕುಳಿತ. ಅವನು ಕುಳಿತ ನಂತರದ ಐದು ನಿಮಿಷ ಕಾಲೇಜು ಕೊಠಡಿಯಲ್ಲಿ ಚಪ್ಪಾಳೆಯದ್ದೇ ಸದ್ದು!

ಈ ಪ್ರಸಂಗ ನಡೆದದ್ದು ಚಿಕ್ಕನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ. ರೋಟರಾಕ್ಟ್ ತಂಡದ ಕ್ರಿಪಾಜೋಶಿ ಕೇಳಿದ ಪ್ರಶ್ನೆ ಕೇಳಿದ ನಂತರದ ಪ್ರಸಂಗಗಳಿವು.

ಯುವ ಜನತೆಯಲ್ಲಿ ನಾಯಕತ್ವ ಬೆಳೆಸುವ ಉದ್ದೇಶದಿಂದ ಕಾಲೇಜಿಗೆ ಆಗಮಿಸಿದ್ದ ರೋಟರಾಕ್ಟ್ ತಂಡ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.

ಪ್ರಸ್ತುತ ಸಾಫ್ಟ್‌ವೇರ್ ಕಂಪೆನಿಯನ್ನು ಮುನ್ನಡೆಸುತ್ತಿರುವ ಟಿಪ್‌ಟಾಪ್ ಸೂಟ್‌ಧಾರಿ ಹರಿಹಂತ್‌ಕುಮಾರ್ ತಮ್ಮ ಭೂತಕಾಲವನ್ನು ನೆನೆಸಿಕೊಂಡರು. `ನೀವು ಬೆಳಿಗ್ಗೆ ಎದ್ದು ಹೊಲ ತೋಟಗಳಿಗೆ ಹೋಗಿ ಮಣ್ಣು ಮುಟ್ಟಿ ಕೆಲಸ ಮಾಡ್ತೀರಲ್ವಾ? ಕೊಟ್ಟಿಗೆ ಗುಡಿಸಿ ಸಗಣಿ ಬಾಚ್ತೀರಲ್ವಾ? ಅದನ್ನು ಹೇಳಿಕೊಳ್ಳಲು ಹಿಂಜರಿತವೇಕೆ? ನಿಮ್ಮ ಬಗ್ಗೆ ನೀವು ಹೆಮ್ಮೆಪಟ್ಟುಕೊಳ್ಳಬೇಕಾದ ಸಂಗತಿ ಅದು. ರೈತಾಪಿ ಕುಟುಂಬದಿಂದ ಬಂದ ನಾನು ಈಗ ಒಂದು ಸಾಫ್ಟ್‌ವೇರ್ ಕಂಪೆನಿ ನಡೆಸುತ್ತಿದ್ದೇನೆ. ತಳುಕು ಬಳುಕಿನ ಜಗತ್ತಿನ ಆಚೆಗಿರುವ ಆತ್ಮಸ್ಥೈರ್ಯ ಮತ್ತು ಕಷ್ಟ ಸಹಿಷ್ಣುತೆ ನಮ್ಮಳಗಿನ `ನಾಯಕ'ನನ್ನು ಹುರಿದುಂಬಿಸುವ ರಕ್ಷಾಕವಚ' ಎಂದು ಮಾತು ಮುಗಿಸಿದರು.
ಹರಿಹಂತ್‌ಕುಮಾರ್ ಮಾತು ಕೇಳಿದ ಕಾಲೇಜು ವಿದ್ಯಾರ್ಥಿಗಳಲ್ಲಿ ಹೊಸ ಲವಲವಿಕೆ ಗೋಚರಿಸಿತು.

`ಕಷ್ಟದಿಂದ ಬಂದ ಹಳ್ಳಿಗಾಡಿನ ಯುವಕರಿಗೆ ನಾಯಕತ್ವ ಗುಣ ತಂತಾನೆ ಒಲಿದು ಬಂದಿರುತ್ತದೆ. ಅದು ಹೊರಹೊಮ್ಮಲು ಅವಕಾಶ ಬೇಕು. ಯುವಕರು ಕೀಳರಿಮೆ ಚಿಪ್ಪಿನಿಂದ ಹೊರಬಂದರೆ ನಾಯಕತ್ವ ಗುಣ ತಂತಾನೆ ಪ್ರಕಟಗೊಳ್ಳುತ್ತದೆ' ಎಂದು ರೋಟರಾಕ್ಟ್ ತಂಡದ 10 ಸದಸ್ಯರು ಒಬ್ಬೊಬ್ಬರಾಗಿ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಿಗೆ ತಮ್ಮ ಆತ್ಮೀಯ ಮಾತುಗಳಲ್ಲಿ ಸ್ಪರ್ಶಿಸತೊಡಗಿದರು.

ಪ್ರಾಂಶುಪಾಲ ವರದರಾಜ್, ರೋಟರಿ ತಾಲ್ಲೂಕು ಘಟಕದ ಕಾರ್ಯದರ್ಶಿ ಡಾ.ಪ್ರಶಾಂತ್‌ಕುಮಾರ್ ಶೆಟ್ಟಿ, ಸದಸ್ಯರು, ಕಾಲೇಜು ಸಿಬ್ಬಂದಿ ಮತ್ತು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ಏನಿದು ರೋಟರಾಕ್ಟ್?
ರೋಟರಾಕ್ಟ್ ಎಂಬುದು ರೋಟರಿಯ ಅಂಗ ಸಂಸ್ಥೆ. ಯುವಕರಲ್ಲಿ ನಾಯಕತ್ವ ರೂಪಿಸುವ ಸಲುವಾಗಿ ಈ ಸಂಸ್ಥೆ ಕಾರ್ಯ ಪ್ರವೃತ್ತವಾಗಿದೆ. 18ರಿಂದ 30 ವರ್ಷ ವಯೋಮಿತಿಯಲ್ಲಿರುವವರು ಇದರ ಸದಸ್ಯರಾಗಬಹುದು. ಯಾವುದೇ ಶುಲ್ಕ ಇಲ್ಲ. 1968ರಲ್ಲಿ ಅಮೇರಿಕಾದ ಕರೋಲಿನಾದಲ್ಲಿ ಸಂಸ್ಥೆ ಪ್ರಾರಂಭವಾಯಿತು. ಪ್ರಸ್ತುತ 139 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೋಟರಾಕ್ಟ್ ಭಾರತದಲ್ಲಿ 74 ಶಾಖೆ ಹೊಂದಿದೆ. 75ನೇ ಶಾಖೆಯನ್ನು ಚಿಕ್ಕನಾಯಕನಹಳ್ಳಿಯಲ್ಲಿ ತೆರೆಯಲಾಗಿದೆ. ಇದು ತುಮಕೂರು ಜಿಲ್ಲೆಯಲ್ಲಿರುವ ಏಕೈಕ ಶಾಖೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.