ADVERTISEMENT

ನಾಲ್ಕು ವರ್ಷದ ನಂತರ ಜಿಲ್ಲೆಗೆ ಸಿಕ್ಕ ಪ್ರಾತಿನಿಧ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 8:30 IST
Last Updated 13 ಜುಲೈ 2012, 8:30 IST

ತುಮಕೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಲ್ಕು ವರ್ಷಗಳ ನಂತರ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಸೊಗಡು ಶಿವಣ್ಣ ಅವರು ಗುರುವಾರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿದ ನಂತರ ಈವರೆಗೂ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಪ್ರತಿ ಬಾರಿ ಸಚಿವ ಸಂಪುಟ ವಿಸ್ತರಣೆಯಾದ ಸಮಯದಲ್ಲಿ ಶಿವಣ್ಣ ಹೆಸರು ಕೇಳಿಬಂದರೂ ಅಧಿಕಾರ ಮಾತ್ರ ದೂರವೇ ಉಳಿದಿತ್ತು.

ತುಮಕೂರು ನಗರ ವಿಧಾನಸಭಾ ಕ್ಷೇತ್ರವನ್ನು ಶಿವಣ್ಣ ಅವರು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ. ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಸಚಿವರಾಗಿದ್ದರು. 2007ರಲ್ಲಿ ಕೇವಲ ಎಂಟು ತಿಂಗಳ ಕಾಲ ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

2008ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಜಿಲ್ಲೆಯಿಂದ ಶಿವಣ್ಣ, ಬಿ.ಸುರೇಶ್‌ಗೌಡ ಮತ್ತು ಬಿ.ಸಿ.ನಾಗೇಶ್ ಬಿಜೆಪಿಯಿಂದ ಆರಿಸಿ ಬಂದಿದ್ದರು. ಆದರೆ ಯಾರಿಗೂ ಅಧಿಕಾರ ಸಿಕ್ಕಿರಲಿಲ್ಲ.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿ ಶಿವಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಧಿಕಾರದಿಂದ `ವಂಚಿತ~ವಾಗಿದ್ದ ಜಿಲ್ಲೆಯನ್ನು ಗುರುತಿಸಿದಂತಾಗಿದೆ.

ಆರ್‌ಎಸ್‌ಎಸ್ ಮೂಲಕ ಬಿಜೆಪಿಯಲ್ಲಿ ರಾಜಕೀಯ ನೆಲೆ ಕಂಡುಕೊಂಡ ಶಿವಣ್ಣ ಅವರು ಪಕ್ಷದ ಗುಂಪುಗಾರಿಕೆ ಯಿಂದ ದೂರವಿದ್ದವರು. ಯಡಿಯೂರಪ್ಪ ಜತೆಗೆ ಗುರುತಿಸಿಕೊಂಡಿದ್ದರೆ ಸರ್ಕಾರ ರಚನೆಯಾದ ಸಮಯದಲ್ಲೇ ಅಧಿಕಾರ ಪಡೆಯುತ್ತಿದ್ದರು. ನಂತರ ಬದಲಾದ ಪರಿಸ್ಥಿತಿಯಲ್ಲೂ ಯಾವುದೇ ಗುಂಪಿನ ಜತೆಗೆ ಗುರುತಿಸಿ ಕೊಳ್ಳದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಉಳಿದಿದ್ದು, ಈಗ ಅಧಿಕಾರದ ಗದ್ದುಗೆ ಏರುವಂತೆ ಮಾಡಿದೆ.

ಜಿಲ್ಲೆಗೆ ಅಧಿಕಾರ ಸಿಕ್ಕಿದೆ ಎನ್ನುವುದಕ್ಕಿಂತ ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ಸಚಿವರು ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕಿದೆ. ಬರ ಹೆಬ್ಬಂಡೆಯಂತೆ ಎದುರಾಗಿದೆ, ನಾಲ್ಕು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳು ತೊಡರುಗಾಲಾಗಲಿವೆ. ಈ ಎಲ್ಲ ಸಮಸ್ಯೆಗಳನ್ನು ನೀಗಿಸಿಕೊಂಡು ಜಿಲ್ಲೆಯನ್ನು ಮನ್ನಡೆಸುವ ದೊಡ್ಡ `ಹೊರೆ~ಯನ್ನು ಶಿವಣ್ಣ ಅವರು ಹೊತ್ತುಕೊಳ್ಳಬೇಕಾಗಿದೆ.

ಹೊರಗಿನವರ ಸವಾರಿ: ಈವರೆಗೆ ಜಿಲ್ಲೆಯ ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಹೆಸರಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರು. ಆದರೆ ಜಿಲ್ಲೆ ನಿರ್ಲಕ್ಷಿಸಿದವರೇ ಹೆಚ್ಚು. ಬಹುತೇಕರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದೇವೆ ಎಂಬುದನ್ನೇ ಮರೆತಿದ್ದರು. ನೆನಪಾದಾಗ ಮಾತ್ರ ಇತ್ತ ಒಮ್ಮೆ ಭೇಟಿಕೊಟ್ಟು, ಇಲ್ಲವೆ ಒಂದು ಸಭೆ ನಡೆಸಿ ಉಸ್ತುವಾರಿ ಸಚಿವ ಸ್ಥಾನದ ಹೊಣೆಯಿಂದ ಕೈತೊಳೆದುಕೊಳ್ಳುತ್ತಿದ್ದರು. ಕಳೆದ ನಾಲ್ಕು ವರ್ಷದಲ್ಲಿ ನಾಲ್ವರು ಉಸ್ತುವಾರಿ ಸಚಿವರು ಬದಲಾದರೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣ ಮಾತ್ರ ಬದಲಾಗಲಿಲ್ಲ, ಸಮಸ್ಯೆಗಳಿಗೆ ಪರಿಹಾರವೂ ಸಿಗಲಿಲ್ಲ.

ಮೊದಲ ಎರಡು ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾನೂನು ಸಚಿವ ಸುರೇಶ್ ಕುಮಾರ್ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಾಗಿದ್ದು, ಅಭಿವೃದ್ಧಿಯ ಕನಸು ಚಿಗುರೊಡೆಯುವ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಿದ್ದರು. ನಂತರ ಈ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸುರೇಶ್ ಕುಮಾರ್ ಅವರಿಗಿಂತ ಹೆಚ್ಚು ಶ್ರಮಿಸುವ ಸಾಮರ್ಥ್ಯ ಇದ್ದ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಯಿತು. ಶೋಭಾ ಅವರನ್ನು ಜಿಲ್ಲೆಗೆ ಕಾಲಿಡಲು ಬಿಡಲಿಲ್ಲ, ಕ್ಯಾತ್ಸಂದ್ರದಿಂದ ದೂರವೇ ತಳ್ಳಲಾಯಿತು.

ಈ ಎಲ್ಲ ಗೊಂದಲ ಮುಗಿಯುವ ವೇಳೆಗೆ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿಗೆ ನೇಮಿಸಲಾಯಿತು. ಸಚಿವರು ಜಿಲ್ಲೆಯ ಮಾಹಿತಿ ಪಡೆದುಕೊಳ್ಳುವಷ್ಟರಲ್ಲಿ ಉಸ್ತುವಾರಿ ಬದಲಾಗಿತ್ತು. ಆ ನಂತರ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಹೆಗಲಿಗೆ ಉಸ್ತುವಾರಿ ವಹಿಸಿ ಸರ್ಕಾರ ತನ್ನ ಜವಾಬ್ದಾರಿಯಿಂದ ದೂರ ಸರಿಯಿತು. ತುಮಕೂರು ಜಿಲ್ಲೆಯ ಜತೆಗೆ ಇತರ ಎರಡು ಜಿಲ್ಲೆಗಳ ಉಸ್ತುವಾರಿ, ಬೃಹತ್ ಕೈಗಾರಿಕೆ ಇಲಾಖೆ ನಿರ್ವಹಿಸುವುದರಲ್ಲೇ ಸುಸ್ತಾದರು.

ನಿರಾಣಿ ಅವರು ಜಿಲ್ಲೆಗೆ ಬಂದದ್ದು, ಮೂರು ಮತ್ತೊಂದು ಬಾರಿ. ಒಮ್ಮೆ ಕೆಡಿಪಿ ಸಭೆ ನಡೆಸಿ, ಎರಡು ಬಾರಿ ಬರ ನಿರ್ವಹಣೆ ಸಭೆ ನಡೆಸಿದ್ದು ಬಿಟ್ಟರೆ ಜಿಲ್ಲೆಯತ್ತ ಮುಖಮಾಡಿಯೂ ನೋಡಲಿಲ್ಲ.

ಸವಾಲು: ಸತತ ಎರಡು ವರ್ಷದಿಂದ ಜಿಲ್ಲೆಯನ್ನು ಬರ ಕಾಡುತ್ತಿದೆ. ಈ ವರ್ಷ ಬರದ ಕರಿನೆರಳು ಜನರ ಜಂಘಾಬಲವನ್ನೇ ಉಡುಗಿಸಿದೆ. ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಮಳೆಗಾಲ ಮುಗಿಯುತ್ತಾ ಬಂದರೂ ಮಳೆ ಪ್ರಾರಂಭವಾಗಿಲ್ಲ. ಗ್ರಾಮೀಣ ಭಾಗದಲ್ಲಿ ಜನರು ಕೆಲಸವಿಲ್ಲದೆ ಗೂಳೆ ಹೊರಟಿದ್ದಾರೆ, ಜಾನುವಾರುಗಳಿಗೆ ನೀರು, ಮೇವು ಸಿಗದಾಗಿದೆ. ಕಾಟಾಚಾರಕ್ಕೆ ಗೋಶಾಲೆಗಳು ಆರಂಭವಾಗಿವೆ.
ದಿನ ಕಳೆದಂತೆ ಬರದ ತೀವ್ರತೆ ಹೆಚ್ಚುತ್ತಿರುವುದನ್ನು ಕಂಡ ಹಳ್ಳಿಯ ಜನತೆ ದಿಕ್ಕು ತೋಚದೆ ಕುಳಿತಿದ್ದಾರೆ. ಜೀವ ಉಳಿಸಿಕೊಳ್ಳುವ ದಾರಿಗಾಗಿ ಎದುರು ನೋಡುತ್ತಿದ್ದಾರೆ.


ಇಂತಹ ಅವಕಾಶವನ್ನೇ ಬಯಸುವ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಕೊರೆದ ಕೊಳವೆ ಬಾವಿಗಳಿಗೆ ಈವರೆಗೂ ಪಂಪು, ಮೋಟಾರ್ ಅಳವಡಿಸಲಿಲ್ಲ. ಸರ್ಕಾರ ಕೂಡ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ನಗರದಲ್ಲಿ ಕುಡಿಯುವ ನೀರು ಸಿಗದಾಗಿದೆ. ನಗರ ಜನರ ಗಂಟಲು ನೆನೆಸುವ ಬುಗುಡನಹಳ್ಳಿ ಕೆರೆ ಬರಿದಾಗಿದೆ, ಕೊಳವೆ ಬಾವಿಗಳು ಬತ್ತುತ್ತಿವೆ. ಇಂದು ಕೊರೆದ ಕೊಳವೆ ಬಾವಿಯಲ್ಲಿ ನಾಳೆ ನೀರು ಸಿಗುವ ಖಾತರಿಯಿಲ್ಲ. ಹಳ್ಳಿ ಜನತೆ ನಗರದತ್ತ ಗುಳೆ ಹೊರಟರೆ, ನಗರದ ಜನತೆ ನೀರು ಸಿಗದೆ ಎಲ್ಲಿಗೆ ಹೋಗಬೇಕು ಎಂಬ ಚಿಂತೆ ಕಾಡುತ್ತಿದೆ.

ಪರಿಸ್ಥಿತಿ ಇಷ್ಟೊಂದು ಕಠೋರವಾಗಿದ್ದರೂ ಜನತೆಗೆ ದಾರಿ ತೋರಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯತ್ತ ಮುಖ ಮಾಡಲಿಲ್ಲ. ಈಗಲಾದರೂ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿದ್ದು, ಶಿವಣ್ಣ ಅವರಿಗೆ ಜಿಲ್ಲಾ ಉಸ್ತುವಾರಿಯೂ ಸಿಗಲಿದೆ. ಯುದ್ಧೋಪಾದಿಯಲ್ಲಿ ಬರ ನಿರ್ವಹಣೆಗೆ ಕಾರ್ಯಕ್ರಮಗಳನ್ನು ರೂಪಿಸಿ, ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬುದು ಜಿಲ್ಲೆಯ ಜನತೆಯ ಒತ್ತಾಸೆಯಾಗಿದೆ.

ಅವರೆಕಾಯಿ ಮಾರುತ್ತಿದ್ದ ಹುಡುಗನೀಗ ಸಚಿವ

ADVERTISEMENT

ತುಮಕೂರು: ಅವರೆಕಾಯಿ ಮಾರುತ್ತಿದ್ದ, ಕೇವಲ ಎರಡೇ ಜೊತೆ ಬಟ್ಟೆಯ ಹುಡುಗನೀಗ ರಾಜ್ಯದ ಸಚಿವ ಸಂಪುಟ ದರ್ಜೆ ಸಚಿವ.

ಇದು ಸಚಿವ ಸೊಗಡು ಶಿವಣ್ಣ ಅವರ ಜೀವನಗಾಥೆ. ತುಮಕೂರು ಸಮೀಪದ ಹೊಸಹಳ್ಳಿಯಲ್ಲಿ ಏಪ್ರಿಲ್ 14, 1947ರಲ್ಲಿ ಜನನ. ಅವರೆಕಾಯಿ ಮಾರುತ್ತಿದ್ದ ಕಾರಣ ಸೊಗಡಿನ ವಾಸನೆ ಬೀರುತ್ತಿದ್ದ ಶಿವಣ್ಣ ಅವರನ್ನು ಸ್ನೇಹಿತರು ಪ್ರೀತಿಯಿಂದ `ಸೊಗಡು~ ಎಂದೇ ಕರೆಯುತ್ತಿದ್ದರು. ಕೊನೆಗೆ ಆ ಹೆಸರೇ ಅವರ ಹೆಸರಿನ ಹಿಂದೆ ಅಂಟಿಕೊಂಡಿತು.

ಶಿವಣ್ಣ ಅವರೇ ಬಹಿರಂಗವಾಗಿ ಹೇಳಿಕೊಳ್ಳುವಂತೆ ಅವರ ಬಳಿ ಇದ್ದದ್ದು ಎರಡೇ ಜೊತೆ ಬಟ್ಟೆ. ನನ್ನಲ್ಲಿ ಎರಡು ಜೊತೆ ಬಟ್ಟೆ ಇದ್ದಾಗ ಯಾವ ಲಿಂಗಾಯತರು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಈಗ ಬಟ್ಟೆ, ಕಾರು, ಬಂಗಲೆ ಬಂದಾಕ್ಷಣ ಲಿಂಗಾಯತ ಎಂದು ಅಪ್ಪಿಕೊಳ್ಳಲು ಹಾತೊರೆಯುತ್ತಾರೆ ಎಂದು ಸಾರ್ವಜನಿಕವಾಗಿಯೇ ಜಾತಿ, ಸಮುದಾಯ ಟೀಕಿಸಿದ ರಾಜಕಾರಣಿ.

ತುಮಕೂರಿನಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಸಿಪಿಇಡಿ ಶಿಕ್ಷಣ. ತುರ್ತು ಪರಿಸ್ಥಿತಿ ವಿರೋಧಿಸಿ 18 ತಿಂಗಳ ಕಾಲ ಜೈಲುವಾಸ. ಜೈಲಿನಿಂದ ಹೊರಬಂದ ಅವರು `ಸೊಗಡು~ ಹೆಸರಿನ ಪತ್ರಿಕೆ ಆರಂಭಿಸಿ ಸಂಪಾದಕರಾದರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ನಂತರ ಹಿಂದಿರುಗಿ ನೋಡಿಲ್ಲ. ಸತತ ನಾಲ್ಕು ಸಲ ಗೆಲುವಿನ ಸರದಾರ.

ವಿದ್ಯಾರ್ಥಿ ದೆಸೆಯಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ. ಒಂದು ಕಾಲದ ತುಮಕೂರಿನ `ಫೈರ್ ಬ್ರಾಂಡ್~. ರಾಜ್ಯಮಟ್ಟದ ಕಬಡ್ಡಿ ಆಟಗಾರ. ಕೃಷಿ ಎಂದರೆ ಈಗಲೂ ಅವರಿಗೆ ಪಂಚಪ್ರಾಣ. ಎಮ್ಮೆ, ಹಸು, ಎಮು ಪಕ್ಷಿಗಳ ಸಾಕಣೆಯನ್ನು ಈಗಲೂ ಮಾಡುತ್ತಿದ್ದಾರೆ. ಹೊಸ ಪಕ್ಷಿ, ಪ್ರಾಣಿಗಳನ್ನು ಸಾಕುವುದು ಅವರ ಪ್ರೀತಿಯ ಹವ್ಯಾಸ.

ಯಾರಿಗೂ ಬಗ್ಗಿ ಸಲಾಮ್ ಹೇಳುವರರಲ್ಲ. ಇದೇ ಕಾರಣಕ್ಕೆ ನಾಲ್ಕು ಸಲ ಗೆದ್ದರೂ ಪಕ್ಷ ಅಧಿಕಾರಕ್ಕೆ ಬಂದಾಗ ಮಂತ್ರಿ ಸ್ಥಾನದಿಂದ ವಂಚಿತರಾದರು. ಆದರೆ ಜೆಡಿಎಸ್-ಬಿಜೆಪಿ ಸರ್ಕಾರದಲ್ಲಿ ಕೇವಲ 8 ತಿಂಗಳ ಕಾಲ ರೇಷ್ಮೆ ಸಚಿವರಾಗಿದ್ದರು.

ಕೇಸರೀಕರಣದ ಪರ ಮಾತನಾಡುವಷ್ಟೇ ಸಲೀಸಲಾಗಿ ಮುಸ್ಲಿಂರ ಮನೆಯಲ್ಲೇ ಊಟ ಮಾಡಿ ಎಲ್ಲರನ್ನು ಮೆಚ್ಚಿಸುವ ಚಾಣಾಕ್ಷರು. ತಾಯಿ ತಿಮ್ಮವ್ವ, ಪತ್ನಿ ನಾಗರತ್ನಾ, ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳಿದ್ದಾರೆ. ಮನೆ ನಿರ್ವಹಣೆ ಅವರ ಪತ್ನಿ ನಾಗರತ್ನಾ ಅವರದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.