ADVERTISEMENT

ನಿಯಮ ಪಾಲನೆ: ಸಾರ್ವಜನಿಕರ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 6:20 IST
Last Updated 4 ಫೆಬ್ರುವರಿ 2011, 6:20 IST


ತುರುವೇಕೆರೆ:
ಪಟ್ಟಣದ ಹೃದಯ ಭಾಗದಲ್ಲಿ ಪ.ಪಂ. ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿದ್ದ ನಿಲುಗಡೆ ಹಾಗೂ ಸಂಚಾರಿ ಸಮಸ್ಯೆ ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯನ್ನು ನಾಗರಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸುಮಾರು 3.15 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ ಕಾಮಗಾರಿಗೆ ಚಾಲನೆ ಸಿಕ್ಕ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ, ಆಟೊ ನಿಲ್ದಾಣ, ಸರಕು ಸಾಗಣೆ ವಾಹನಗಳ ನಿಲ್ದಾಣ, ಹೂ, ಹಣ್ಣು, ತರಕಾರಿ ಅಂಗಡಿಗಳು ರಾತ್ರೋ ರಾತ್ರಿ ಎತ್ತಂಗಡಿಯಾಗಬೇಕಾದ ಪರಿಸ್ಥಿತಿ ಒದಗಿಬಂದಿತ್ತು.

ಈ ಎಲ್ಲ ವ್ಯವಸ್ಥೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಸವಾಲು ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಮುಂದಿತ್ತು. ಇದನ್ನು ಸಮರ್ಥವಾಗಿ ಎದುರಿಸಿದ ಪೊಲೀಸ್ ಇಲಾಖೆ ಅಧಿಕಾರಿಗಳು ಪ.ಪಂ. ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳ ಬೆಂಬಲದೊಂದಿಗೆ ಹಗಲು ರಾತ್ರಿ ಚರ್ಚಿಸಿ ಪಟ್ಟಣದ ಸಾರಿಗೆ ಮತ್ತು ಇತರೆ ವ್ಯವಸ್ಥೆಗಳಿಗೆ ಹೊಸ ರೂಪ ಕೊಟ್ಟರು.

ಇದರ ಫಲವಾಗಿ ಈಗ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಬದಲಾಗಿದೆ. ರಸ್ತೆ ಬದಿಯ ಹೂ ಹಣ್ಣಿನ ವ್ಯಾಪಾರಿಗಳಿಗೆ ತಾ.ಪಂ ಜಾಗದಲ್ಲಿ ಅವಕಾಶ ಮಾಡಿಕೊಡಲಾಗಿದೆ. ದಬ್ಬೇಘಟ್ಟ ಹಾಗೂ ತಿಪಟೂರು ರಸ್ತೆಯಲ್ಲಿ ಅಂಗಡಿಗಳ ಮುಂದೆ ಹಾಕಿದ್ದ ಅಕ್ರಮ ಶೀಟ್ ತೆರವುಗೊಳಸಲಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ.

ಸ್ವತಃ ಸಿಪಿಐ ವಿಶ್ವನಾಥ್ ಹಾಗೂ ಪಿಎಸ್‌ಐ ನಿರಂಜನ್ ಕುಮಾರ್ ಪಟ್ಟಣದ ಮುಖ್ಯ ವೃತ್ತದಲ್ಲಿ ಮೇಲ್ವಿಚಾರಣೆ ನಡೆಸಿದ್ದು, ಜನರಿಗೆ ಕರಪತ್ರ ಮೂಲಕ ಹೊಸ ವ್ಯವಸ್ಥೆ ಬಗ್ಗೆ  ಮನವರಿಕೆ ಮಾಡಿಕೊಡುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.  ಪ.ಪಂ ಮತ್ತು ಪೊಲೀಸ್ ಇಲಾಖೆ ನಡುವಿನ ಸಹಕಾರ, ಸಾಮರಸ್ಯ ಪಟ್ಟಣದ ಸ್ವರೂಪವನ್ನೇ ಬದಲಿಸಿದೆ.

ಪೊಲೀಸರು ಹಿಂದೆಂದೂ ಇಂತಹ ನಿಷ್ಠುರ ಕ್ರಮ ಕೈಗೊಂಡಿದ್ದನ್ನು ನೋಡಿಲ್ಲ. ಇದು ಸ್ವಲ್ಪ ಕಿರಿಕಿರಿ ಅನಿಸುತ್ತಿದೆ. ಆದರೂ ಪಟ್ಟಣದ ಅಂದ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇದು ಅನಿವಾರ್ಯ. ಪಟ್ಟಣದಲ್ಲಿ ಈಗ ಶಿಸ್ತು ಎದ್ದು ಕಾಣುತ್ತಿದೆ. ದಬ್ಬೇಘಟ್ಟ ರಸ್ತೆ ಮತ್ತು ತಿಪಟೂರು ರಸ್ತೆ ವಿಸ್ತರಣೆಗೊಂಡರೆ ಪಟ್ಟಣದ ಅಂದ ಮತ್ತು ಹೆಚ್ಚುತ್ತದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.