ADVERTISEMENT

ನೀರಿಗಾಗಿ ₹ 10 ಲಕ್ಷ ಖರ್ಚು ಮಾಡಿದ ವಿವಿQ

ಹಾಸ್ಟೆಲ್, ಉದ್ಯಾನ ಸೇರಿ ವಿವಿಧ ಕಟ್ಟಡಗಳಿಗೆ ಖಾಸಗಿ ಟ್ಯಾಂಕರ್‌ನಿಂದ ನೀರು ಪೂರೈಕೆ, ಮಾಹಿತಿ ಹಕ್ಕು ಅರ್ಜಿಯಲ್ಲಿ ಬಯಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 8:32 IST
Last Updated 6 ಜೂನ್ 2018, 8:32 IST
ತುಮಕೂರು ವಿ.ವಿ ಹೊರ ನೋಟ
ತುಮಕೂರು ವಿ.ವಿ ಹೊರ ನೋಟ   

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವು 2017ರ ಒಂದೇ ವರ್ಷದಲ್ಲಿ ಕ್ಯಾಂಪಸ್ ಒಳಗಿನ ವಿವಿಧ ಕಟ್ಟಡಗಳು, ಉದ್ಯಾನವನ, ವಿದ್ಯಾರ್ಥಿ ನಿಲಯಗಳಿಗೆ ನೀರು ಪೂರೈಕೆ ಮಾಡಲು ₹ 10,27,750 ಲಕ್ಷ ವೆಚ್ಚ ಮಾಡಿದೆ!

ನಗರದ ಮಾಹಿತಿ ಹಕ್ಕು ಕಾರ್ಯಕರ್ತ ಆರ್.ವಿಶ್ವನಾಥನ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ವಿಶ್ವವಿದ್ಯಾನಿಲಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕಾರ್ಯಪಾಲಕ ಎಂಜಿನಿಯರ್ ಲಿಖಿತವಾಗಿ (ಪತ್ರ ಸಂಖ್ಯೆ: ತುವಿ;ತಾವಿ:2018–19/23. ದಿನಾಂಕ 24–05–2018) ನೀಡಿದ ಮಾಹಿತಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಕಟ್ಟಡ, ವಸತಿ ನಿಲಯ ಮತ್ತು ಉದ್ಯಾನವನ ಸೇರಿದಂತೆ ಕಡೆ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗಿದೆ. 2017ರ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು ಇಬ್ಬರು, ಟ್ಯಾಂಕರ್‌ಗಳಿಂದ ನೀರು ಪೂರೈಕೆ ಮಾಡಿದ್ದಾರೆ.

ADVERTISEMENT

ಇಬ್ಬರಿಂದ ನೀರು ಪೂರೈಕೆ: ‘ತುಮಕೂರಿನ ಜಮ್ ಜಮ್ ವಾಟರ್ ಸಪ್ಲೈನ ಸೈಯದ್ ಪಾಷಾ ಹಾಗೂ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಎಸ್.ಎಸ್.ಸೋಮಶೇಖರ್ ಟ್ಯಾಂಕರ್‌ ನಿಂದ ನೀರು ಪೂರೈಸಿರುವ ವ್ಯಕ್ತಿಗಳು.

ಇದರಲ್ಲಿ ಸೈಯದ್ ಪಾಷಾ ಅವರಿಗೆ ಒಂದು ಟ್ಯಾಂಕಿಗೆ ₹ 300ರಂತೆ 24,300 ಪಾವತಿಸಲಾಗಿದೆ. ಸೋಮಶೇಖರ್‌ ಅವರಿಗೆ ಒಂದು ಟ್ಯಾಂಕ್‌ಗೆ ₹ 350ರಂತೆ ಒಟ್ಟು 9,77,250 ಪಾವತಿ ಮಾಡಲಾಗಿದೆ. ಸೈಯದ್ ಪಾಷಾ ಅವರಿಗೆ ಸೇರಿದ ಒಟ್ಟು 6 ಬಿಲ್‌, ಸೋಮಶೇಖರ್ ಅವರಿಗೆ ಸೇರಿದ 36 ಬಿಲ್ ಗಳನ್ನು ವಿಶ್ವವಿದ್ಯಾನಿಲಯವು ಒದಗಿಸಿದೆ’ ಎಂದು ವಿಶ್ವನಾಥನ್ ಹೇಳಿದ್ದಾರೆ.

ಕೋರಿದಷ್ಟು ಪೂರ್ಣ ಮಾಹಿತಿ ನೀಡಿಲ್ಲ

‘ನೀರಿನ ಟ್ಯಾಂಕರ್‌ಗಳಿಗೆ ಮಾಡಿರುವ ಒಟ್ಟು ವೆಚ್ಚ, ಪ್ರತಿ ತಿಂಗಳೂ ಎಷ್ಟು ವೆಚ್ಚ ಮಾಡಲಾಗಿದೆ. ಟ್ಯಾಂಕರ್‌ಗೆ ನಿಗದಿ ಪಡಿಸಿರುವ ದರ ಎಷ್ಟು? ಪ್ರತಿ ನಿತ್ಯ ಪೂರೈಸುತ್ತಿದ್ದ ನೀರಿನ ಟ್ಯಾಂಕರ್ ಸಂಖ್ಯೆ, ನೀರು ಪೂರೈಕೆ ಮಾಡಿರುವವ ಹೆಸರು, ವಿಳಾಸ ಮತ್ತು ಬಿಲ್ ಮೊತ್ತದ ವಿವರಗಳನ್ನು ಪ್ರತ್ಯೇಕವಾಗಿ ನೀಡಲು ಅರ್ಜಿಯಲ್ಲಿ ಕೋರಿದ್ದೆ. ಆದರೆ, ವಿಶ್ವವಿದ್ಯಾನಿಲಯವು ಆ ರೀತಿ ಮಾಹಿತಿ ನೀಡಿಲ್ಲ' ಎಂದು  ವಿಶ್ವನಾಥನ್ ದೂರಿದ್ದಾರೆ.

'ಇಬ್ಬರು ಗುತ್ತಿಗೆದಾರರು ಸಲ್ಲಿಸಿರುವ ಒಟ್ಟು 42 ಬಿಲ್‌ನ ಜೆರಾಕ್ಸ್ ಪ್ರತಿಗಳನ್ನು ಮಾತ್ರ ನೀಡಿ ವಿಶ್ವವಿದ್ಯಾನಿಲಯ ಕೈ ತೊಳೆದುಕೊಂಡಿದೆ. ಕೇವಲ ನೀರು ಪೂರೈಕೆ ಮಾಡಲಾದ ಸ್ಥಳಗಳ ಪಟ್ಟಿಯೊಂದನ್ನು ಮಾತ್ರ ಸಮರ್ಪಕವಾಗಿ ನೀಡಿದೆ' ಎಂದು ಹೆಳಿದ್ದಾರೆ.

ಪರ್ಯಾಯದತ್ತ ಚಿಂತನೆ ಏಕಿಲ್ಲ?

‘ವಿಶ್ವವಿದ್ಯಾನಿಲಯವು ತಜ್ಞರು, ಪ್ರಜ್ಞಾವಂತರು, ವೈಜ್ಞಾನಿಕವಾಗಿ ಮತ್ತು ಪರಿಸರ ಕಾಳಜಿಯುಳ್ಳವರು ಇರುವ ಸ್ಥಳ. ಅಲ್ಲಿ ನೀರಿನ ಮಿತವ್ಯಯ ಬಳಕೆ, ಮಳೆ ನೀರು ಸಂಗ್ರಹ ಮತ್ತು ಬಳಕೆ ಮುಂತಾದವುಗಳತ್ತ ಗಮನಹರಿಸಿದ್ದರೆ ಇಷ್ಟೊಂದು ಹಣ ವೆಚ್ಚ ಮಾಡಬೇಕಾದ ಅಗತ್ಯತೆ ಇರಲಿಲ್ಲವೇನೊ ಅನಿಸುತ್ತದೆ’ ಎಂದು ವಿಶ್ವನಾಥನ್ ‘ಪ್ರಜಾವಾಣಿ’ಗೆತಿಳಿಸಿದರು. ‘ಒಂದು ವಿಶ್ವವಿದ್ಯಾನಿಲಯವೇ ಇಷ್ಟೊಂದು ಪ್ರಮಾಣದಲ್ಲಿ ನೀರಿಗೆ ಹಣ ವ್ಯಯಿಸಿದರೆ ಬೇರೆ ಬೇರೆ ಸಂಸ್ಥೆಗಳು ಎಷ್ಟು ವೆಚ್ಚ ಮಾಡಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನೀರು ಪೂರೈಸಿದ ಸ್ಥಳ ಪಾವತಿಸಿದ ಮೊತ್ತ (ಲಕ್ಷಗಳಲ್ಲಿ)

ಸ್ನಾತಕೋತ್ತರ ವಿದ್ಯಾರ್ಥಿನಿಯರ ಹಾಸ್ಟೆಲ್  ₹ 1.93
ಸ್ನಾತಕ ವಿದ್ಯಾರ್ಥಿನಿಯರ ಹಾಸ್ಟೆಲ್  ₹ 3.08
ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್  ₹1.67
ಸ್ನಾತಕ ವಿದ್ಯಾರ್ಥಿಗಳ ಹಾಸ್ಟೆಲ್  ₹ 1.26
ಉದ್ಯಾನಗಳಿಗೆ   ₹ 2.32

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.