ADVERTISEMENT

ನೀರಿಗೆ ಹಾಹಾಕಾರ; ಟ್ಯಾಂಕರ್ ನೀರಿಗೆ ಕಿತ್ತಾಟ

ಮಹಾನಗರ ಪಾಲಿಕೆಯಿಂದ ಕೊಳವೆ ಬಾವಿ ಕೊರೆಸುವ ಕಾರ್ಯ ಶುರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:57 IST
Last Updated 16 ಜೂನ್ 2018, 10:57 IST
ನೀರಿಗೆ ಹಾಹಾಕಾರ; ಟ್ಯಾಂಕರ್ ನೀರಿಗೆ ಕಿತ್ತಾಟ
ನೀರಿಗೆ ಹಾಹಾಕಾರ; ಟ್ಯಾಂಕರ್ ನೀರಿಗೆ ಕಿತ್ತಾಟ   

ತುಮಕೂರು: ನಗರಕ್ಕೆ ನೀರು ಪೂರೈಕೆಯ ಪ್ರಮುಖ ಆಸೆರೆಯಾದ ಬುಗುಡನಹಳ್ಳಿ ಕೆರೆಯಲ್ಲಿ ನೀರು ಖಾಲಿಯಾಗಿದ್ದು, ನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

ನಗರದ ಪ್ರತಿ ಬಡಾವಣೆಯಲ್ಲಿ ಕುಡಿಯಲು ಮತ್ತು ಬಳಕೆಗೆ ನೀರಿಗಾಗಿ ಕೊಡಗಳನ್ನು ಹಿಡಿದು ಜನರು ಅಲೆದಾಡುವಂತಹ ಸ್ಥಿತಿ ಬಂದಿದೆ. ಬುಗುಡನಹಳ್ಳಿ ಕೆರೆ ಬತ್ತಿದ ಬಳಿಕ ಮಹಾನಗರ ಪಾಲಿಕೆ ಮತ್ತು ಶಾಸಕರು ಕೊಳವೆ ಬಾವಿಗಳು ಮತ್ತು ಟ್ಯಾಂಕರ್‌ಗಳೇ ಗತಿ ಎಂದು ಈಗಾಗಲೇ ಹೇಳಿಯಾಗಿದೆ.

ಮಹಾನಗರ ಪಾಲಿಕೆಯು ನಗರದ 35 ವಾರ್ಡ್‌ಗಳಿಗೆ ಟ್ಯಾಂಕರ್‌ಗಳಿಂದ ನೀರು ಪೂರೈಸುತ್ತಿದೆ. ಆದರೆ, 3.80 ಲಕ್ಷ ಜನಸಂಖ್ಯೆ ಹೊಂದಿರುವ ನಗರಕ್ಕೆ ಈ ವ್ಯವಸ್ಥೆ ಸಾಲದಾಗಿದೆ. ಮಹಾನಗರ ಪಾಲಿಕೆ ಟ್ಯಾಂಕರ್‌ಗಳಿಗೆ ಕಾದು ಸುಸ್ತಾಗುವುದು, ಬಂದಾಗ ಕಿತ್ತಾಡಿ ನೀರು ಹಿಡಿದುಕೊಳ್ಳುವುದಷ್ಟೇ ಅಲ್ಲ. ಖಾಸಗಿ ಟ್ಯಾಂಕರ್‌ಗಳಿಗೆ ₹ 350ಕ್ಕೂ ಹೆಚ್ಚು ಹಣ ಪಾವತಿಸಿ ನೀರು ಪಡೆಯುತ್ತಿರುವುದು ಕಾಣುತ್ತಿದೆ.

ADVERTISEMENT

ಎಲ್ಲೆಡೆ ಮಳೆಯಾಗುತ್ತಿದ್ದರೂ ಇನ್ನೂ 3 ತಿಂಗಳು ಇದೇ ಪರಿಸ್ಥಿತಿ ಆದರೆ ಹೇಗೆ ಎಂದು ಜನರು ಗೋಳಾಡುವಂತಾಗಿದೆ. ರಂಜಾನ್ ಹಬ್ಬದ ದಿನಗಳಲ್ಲೂ ನಮಗೆ ಸರಿಯಾದ ರೀತಿ ನೀರಿನ ವ್ಯವಸ್ಥೆ ಆಗಿಲ್ಲ ಮುಸ್ಲಿಮರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.

ಪಾಲಿಕೆ ಮೂಲಗಳು ಹೇಳುವುದೇನು?

ಬುಗುಡನಹಳ್ಳಿ ಕೆರೆಯಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಸಾಧ್ಯವಿಲ್ಲ. ಆದರೆ, ಟ್ಯಾಂಕರ್‌ ಗಳಿಗೆ ಇರುವ ನೀರು ತುಂಬಿಸಿ ಪೂರೈಸ ಲಾಗುತ್ತಿದೆ. ಇನ್ನೊಂದು ವಾರವಷ್ಟೇ ಈ ನೀರು ಲಭಿಸಬಹುದು. ಬಳಿಕ ಅದೂ ನಿಂತು ಹೋಗಲಿದೆ. ಹೀಗಾಗಿ, ಕೊಳವೆ ಬಾವಿ ಮತ್ತು ಮೈದಾಳ ಕೆರೆಯೇ ಆಸರೆಯಾಗಿದೆ ಎಂದು ಹೇಳುತ್ತವೆ.

ನಗರದಲ್ಲಿ ಮಹಾನಗರ ಪಾಲಿಕೆಯ 564 ಕೊಳವೆ ಬಾವಿಗಳಿವೆ. ಈಗಿನ ನೀರಿನ ಸಮಸ್ಯೆ ಹೋಗಲಾಡಿಸಲು ಹೊಸದಾಗಿ 35 ಕೊಳವೆ ಬಾವಿ ಕೊರೆಸಲಾಗುತ್ತಿದೆ. 12 ಕೊಳವೆ ಬಾವಿ ಕೊರೆಸುವುದಕ್ಕೆ ಟೆಂಡರ್ ಆಗಿದೆ. ಇವುಗಳ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

ಮೈದಾಳ ಕೆರೆಯಿಂದ 7 ವಾರ್ಡ್‌ಗೆ ಮೊದಲಿದ್ದಂತೆ ಪೂರೈಕೆ ಆಗುತ್ತಿದೆ. ಜತೆಗೆ ಈಗ ಟ್ಯಾಂಕರ್‌ಗಳ ಮೂಲಕ ಆ ಕೆರೆಯ ನೀರನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಾರ್ಡಿಗೆ 1 ಟ್ಯಾಂಕರ್ ನಿಗದಿಪಡಿಸಲಾಗಿದೆ. 26, 30 ಮತ್ತು 34ನೇ ವಾರ್ಡುಗಳು ದೊಡ್ಡ ವಾರ್ಡ್ ಆಗಿರುವುದರಿಂದ ಅವುಗಳಿಗೆ ಮೂರು ಟ್ಯಾಂಕರ್ ನಿಗದಿಪಡಿಸಲಾಗಿದೆ. ಪ್ರತಿ ನಿತ್ಯ ಈ ಟ್ಯಾಂಕರ್‌ಗಳು ಕನಿಷ್ಠ 5 ಟ್ರಿಪ್ ನೀರು ಪೂರೈಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಎಷ್ಟು ಟ್ಯಾಂಕರ್?: ಮಹಾನಗರ ಪಾಲಿಕೆಯದ್ದು 6 ಟ್ಯಾಂಕರ್‌ಗಳಿದ್ದು, ಖಾಸಗಿಯ 35 ಟ್ಯಾಂಕರ್ ಬಾಡಿಗೆ ಆಧಾರದ ಮೇಲೆ ಪಡೆಯಲಾಗಿದೆ. ಪ್ರತಿ ಟ್ಯಾಂಕರ್‌ಗೆ ₹ 500 ದರ ನಿಗದಿಪಡಿಸಿ ಟೆಂಡರ್ ಕರೆದು ಕೊಡಲಾಗಿದೆ. ಹೊರಗಡೆ ₹ 350 ಕ್ಕೆ ಒಂದು ಟ್ಯಾಂಕರ್ ನೀರು ಪೂರೈಸುತ್ತಾರೆ. ನಾವು ₹ 500 ಪಾವತಿಸುತ್ತೇವೆ. ಕಾರಣ, ಪಾಲಿಕೆಯ ಈ ಟ್ಯಾಂಕರ್ ಒಂದು ವಾರ್ಡ್‌ಗೆ ಹೋದರೆ ಜನರು ನೀರು ತುಂಬಿಕೊಳ್ಳುವವರೆಗೂ ಕಾದು ನಿಲ್ಲಬೇಕು. ಅಲ್ಲಿಯೇ ಸಮಯ ಕಳೆದು ಹೋಗುತ್ತದೆ. ಹೀಗಾಗಿ, ₹ 150 ಹೆಚ್ಚಿನ ದರ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಸದ್ಯಕ್ಕೆ ಈ ವ್ಯವಸ್ಥೆ ಬಿಟ್ಟರೆ ಪರ್ಯಾಯ ಮಾರ್ಗಗಳಿಲ್ಲ. ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಇದೇ ರೀತಿ ಸತತ ಮಳೆ ಸುರಿದರೆ ಇನ್ನೊಂದು ವಾರದೊಳಗಡೆ ಜಲಾಶಯ ತುಂಬಬಹುದು ಎಂದು ತಿಳಿದಿದೆ. ಜಲಾಶಯ ಭರ್ತಿಯಾದರೆ ನೀರು ಬೇಗ ಲಭಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹದಿನೈದು ದಿನಗಳಿಂದ ನೀರಿಲ್ಲ

‘ಒಂದೂವರೆ ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. 15 ದಿನಗಳಾದರೂ ನಮ್ಮ ಬಡಾವಣೆಗೆ ನೀರಿಲ್ಲ. ರಂಜಾನ್ ಹಬ್ಬ ನಾಳೆ ಇದೆ ಎಂಬ ಕಾರಣಕ್ಕೆ ಈ ದಿನ ನೀರು ಬಂದಿದೆ. ನಮ್ಮ ನೂತನ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರ ಮೇಲೆ ತುಂಬಾ ನಿರೀಕ್ಷೆ ಇದೆ. ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಲಿ’ ಎಂದು 19ನೇ ವಾರ್ಡಿನ ನಿವಾಸಿ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.