ತುರುವೇಕೆರೆ: ನಂಬಿದರೆ ನಂಬಿ ಬಿಟ್ಟರೆ ಬಿಡಿ. ಸ್ಥಳೀಯ ಪಟ್ಟಣ ಪಂಚಾಯಿತಿ ಸಹಕಾರಿ ಬ್ಯಾಂಕೊಂದರಲ್ಲಿ ತೊಡಗಿಸಿರುವ ರೂ.28 ಲಕ್ಷಕ್ಕೆ ಕಳೆದ 15 ವರ್ಷಗಳಿಂದ ನಯಾಪೈಸೆ ಬಡ್ಡಿ ಬಂದಿಲ್ಲ. ಇದರಿಂದ ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರದಲ್ಲಿ ಪಂಚಾಯಿತಿಗೆ ಈವರೆಗೆ ಆಗಿರುವ ನಷ್ಟ ರೂ. 1ಕೋಟಿ 62ಲಕ್ಷ 79 ಸಾವಿರ! ಪಟ್ಟಣ ಪಂಚಾಯಿತಿಯ 2011-12ನೇ ಸಾಲಿನ ಆಯವ್ಯಯ ಮಂಡನೆಗೆಂದು ಸೋಮವಾರ ಕರೆದಿದ್ದ ಸಭೆಯ ವೇಳೆ ಈ ಅಂಶ ಬೆಳಕಿಗೆ ಬಂದು ಸಭೆಯಲ್ಲಿ ಕೋಲಾಹಲ ಉಂಟಾಯಿತು.
ಪ್ರತಿ ವರ್ಷ ಖರ್ಚಿನ ಬಾಬತ್ತು ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಹೆಚ್ಚುವರಿ ಆದಾಯದ ಮೂಲ ಕಂಡುಕೊಳ್ಳಬೇಕು ಎಂಬ ಚರ್ಚೆಗೆ ಪೂರಕವಾಗಿ ಕಾಂಗ್ರೆಸ್‌ನ ಟಿ.ಎನ್.ಶಿವರಾಜ್ ಪಟ್ಟಣ ಪಂಚಾಯಿತಿಯ ಹಾಲಿ ಹೂಡಿಕೆಗಳ ಬಗ್ಗೆ ವಿವರಣೆ ಕೇಳಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸ್ಥಳೀಯ ಸಹಕಾರಿ ಬ್ಯಾಂಕೊಂದರಲ್ಲಿ 10ನೇ ಹಣಕಾಸು ಯೋಜನೆಯಡಿ ನಿರ್ಮಿಸಲಾದ ಕಟ್ಟಡಗಳ ಮುಂಗಡ ಹರಾಜು ಹಣ ರೂ.28 ಲಕ್ಷವನ್ನು 15 ವರ್ಷಗಳ ಹಿಂದೆ ಠೇವಣಿ ಇಡಲಾಗಿದ್ದು, ಈವರೆಗೆ ಯಾವುದೇ ಬಡ್ಡಿ ಬಂದಿಲ್ಲ ಎಂಬುದನ್ನು ಬಹಿರಂಗಪಡಿಸಿದರು. ಇದು ಸದಸ್ಯರಲ್ಲಿ ತೀವ್ರ ಸಂಚಲನವನ್ನುಂಟು ಮಾಡಿತು. ಸದಸ್ಯರು ಪಕ್ಷ ಭೇದ ಮರೆತು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಹಕಾರಿ ಬ್ಯಾಂಕ್ ಪಂಚಾಯಿತಿಯ ಟ್ರ್ಯಾಕ್ಟರ್ ಸಾಲ ರೂ.3 ಲಕ್ಷವನ್ನು ಬಡ್ಡಿ ಸಮೇತ ವಸೂಲಿ ಮಾಡಿದೆ. ಆದರೆ ಪಂಚಾಯಿತಿಯ ಹೂಡಿಕೆಗೆ ಬಡ್ಡಿ ನೀಡಿಲ್ಲ. ಪಂಚಾಯಿತಿ ಈ ಕೂಡಲೇ ಠೇವಣಿ ಹಿಂದೆ ಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯ ದಿವಾಕರ್ ಒತ್ತಾಯಿಸಿದರು. ಈ ಬಗ್ಗೆ ಈಗಾಗಲೇ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಮುಖ್ಯಾಧಿಕಾರಿಗಳು ಸ್ಪಷ್ಟಪಡಿಸಿದರು. ಸಭೆಯಲ್ಲಿ ರೂ.4.75 ಲಕ್ಷದ ಉಳಿತಾಯ ಬಜೆಟನ್ನು ಅನುಮೋದಿಸಲಾಯಿತು. ನಗದು ಉಳಿಕೆ ರೂ.3-81 ಕೋಟಿಯನ್ನು ಆರಂಭಿಕ ಶಿಲ್ಕಾಗಿ ತೋರಿಸಿ ಉಳಿತಾಯ ಬಜೆಟ್ ಎಂದು ಹೇಳಿಕೊಳ್ಳಲಾಗಿದೆ.ಅದನ್ನು ಹೊರತುಪಡಿಸಿದರೆ ಪಂಚಾಯಿತಿ ಮಂಡಿಸಿರುವುದು ರೂ.37.72ಲಕ್ಷದ ಕೊರತೆ ಬಜೆಟ್ ಎಂದು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪ.ಪಂ.ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎನ್. ಪಾಂಡುರಂಗಯ್ಯ, ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಹಾಗೂ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.