ADVERTISEMENT

ಪಶುಪಾಲನೆಗೂ ಸೈ ಎಂದ ಯುವತಿಯರು...

ಪ್ರಜಾವಾಣಿ ವಿಶೇಷ
Published 14 ಆಗಸ್ಟ್ 2012, 8:05 IST
Last Updated 14 ಆಗಸ್ಟ್ 2012, 8:05 IST

ತೋವಿನಕೆರೆ: ಗೋಶಾಲೆಯಲ್ಲಿ ಪಡ್ಡೆಕರುವೊಂದು ಹಗ್ಗ ಕಿತ್ತುಕೊಂಡು ಓಡಿತು. ಮಾಲೀಕ ಹರಸಾಹಸಪಟ್ಟರೂ ಕರು ಹಿಡಿಯಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಓಡಿಬಂದ ಮುದಿಗೌಡನಹಟ್ಟಿಯ ಕಲಾವತಿ ಕರುವಿನ ಮೂಗುದಾರಕ್ಕೆ ಕೈ ಹಾಕಿ ಜಗ್ಗಿದಳು. ಒಂದು ಕ್ಷಣ ಗೋಶಾಲೆಯಲ್ಲಿದ್ದವರೆಲ್ಲ ಆವಕ್ಕಾದರು.

ಬರಗಾಲದಿಂದ ಕಂಗಾಲಾಗಿರುವ ಗ್ರಾಮೀಣ ಭಾಗದ ರೈತರು ಗೋಶಾಲೆಗಳಿಗೆ ರಾಸುಗಳನ್ನು ಹೊಡೆದಿದ್ದಾರೆ. ದುಡಿಯುವ ಸಾಮರ್ಥ್ಯ ಇರುವವರು ಕೆಲಸ ಹುಡುಕಿ ಗುಳೆ ಹೊರಟರೆ, ಅಜ್ಜಂದಿರು ಗೋಶಾಲೆಗೆ ದನ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವು ಮನೆಗಳಿಂದ ಅನಿವಾರ್ಯವಾಗಿ ಹೆಣ್ಣು ಮಕ್ಕಳೇ ಗೋಶಾಲೆಗೆ ದನ ತರುತ್ತಿದ್ದಾರೆ.

ಇಂಥ ಹಲವು ಉದಾಹರಣೆಗಳು ತೋವಿನಕೆರೆ ಗೋಶಾಲೆಯಲ್ಲಿ ಸಿಗುತ್ತವೆ. ಇಲ್ಲಿ 15ಕ್ಕೂ ಹೆಚ್ಚು ಯುವತಿಯರು ಗೋ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನುವಾರುಗಳಿಗೆ ಮೇವು ಹಾಕುವುದು, ನೀರು ಕುಡಿಸುವುದು, ಮೈ ತೊಳೆಯುವುದು, ಸೆಗಣಿ ಬಾಚುವುದು ಸೇರಿದಂತೆ ಅನೇಕ ಕೆಲಸಗಳನ್ನು ಉತ್ಸಾಹದಿಂದ ಮಾಡುತ್ತಿದ್ದಾರೆ.

ಗೋಶಾಲೆಯಲ್ಲಿ ದನಗಳಿಗೆ ಮೇವು ತಿನ್ನಿಸುತ್ತಿರುವ ಅನೇಕ ಯುವತಿಯರು ಪಿಯುಸಿ ಹಂತದ ಶಿಕ್ಷಣ ಪಡೆದಿದ್ದಾರೆ. ಓದಿದವರು ಪಟ್ಟಣ ಸೇರಬೇಕು ಎಂಬ ಜನಪ್ರಿಯ ನಂಬಿಕೆಗೆ ವ್ಯತಿರಿಕ್ತವಾಗಿ, `ಪಶುಪಾಲನೆ ನಮ್ಮ ಕುಟುಂಬದ ವೃತ್ತಿ. ಅದನ್ನು ಮುಂದುವರಿಸುವುದರಲ್ಲಿ ಅವಮಾನವಿಲ್ಲ~ ಎಂದು ಆತ್ಮವಿಶ್ವಾಸದಿಂದ ಬೀಗುತ್ತಾರೆ.

`ನಾನು ಚಿಕ್ಕ ಹುಡುಗಿಯಿಂದ ದನಗಳ ಜೊತೆಗೆ ಆಡಿ ಬೆಳೆದವಳು. ಪಶುಪಾಲನೆಯಿಂದ ಸಂತೋಷ ಸಿಗುತ್ತದೆ. ಕಲಿತವರು ಸೆಗಣಿ ಬಾಚಬಾರದು ಎಂಬ ಪೊಳ್ಳು ಮಾತನ್ನು ನಾನು ಒಪ್ಪುವುದಿಲ್ಲ. ನನಗೆ ಇಂದಿಗೂ ದನಗಳ ಒಡನಾಟ ಖುಷಿ ಕೊಡುತ್ತದೆ~ ಎನ್ನುತ್ತಾರೆ ಪಿಯುಸಿ ಶಿಕ್ಷಣ ಪಡೆದಿರುವ ವೀಣಾ.

`ನನಗೆ ಪದವಿ ಶಿಕ್ಷಣ ಪಡೆಯುವ ಆಸೆಯಿದೆ. ಶಿಕ್ಷಣ ಮುಗಿದ ನಂತರ 10 ಉತ್ತಮ ತಳಿಯ ಹಸುಗಳನ್ನು ಸಾಕಿ ಸ್ವಾವಲಂಬಿಯಾಗಿ ಬದುಕುತ್ತೇನೆ. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಿಲ್ಲ~ ಎನ್ನುತ್ತಾರೆ ಸೂರೇನಹಳ್ಳಿಯ ರಮ್ಯಾ.

`ಸರ್ಕಾರದವರು ರಾಸುಗಳಿಗೆ ಪ್ರತಿದಿನ 8 ಕೆ.ಜಿ ಹುಲ್ಲು ಕೊಡುತ್ತಿದ್ದಾರೆ. ಸರ್ಕಾರ ಗೋಶಾಲೆ ತೆರೆಯುವ ಮೊದಲು ನಮ್ಮ ಹಸುಗಳು ಹಸಿವಿನಿಂದ ಅರಚುತ್ತಿದ್ದವು. ಈಗ ರಾತ್ರಿ ವೇಳೆ ನೆಮ್ಮದಿಯಾಗಿ ಮೆಲುಕು ಹಾಕುತ್ತವೆ. ನಾವು ನಿಶ್ಚಿಂತೆಯಿಂದ ಮಲಗುತ್ತೇವೆ~ ಎನ್ನುತ್ತಾರೆ ಸೂರೇನಹಳ್ಳಿ ಕಾವ್ಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.