ADVERTISEMENT

ಪುನಶ್ಚೇತನಕ್ಕೆ ಕಾದಿರುವ ಪಟ್ಟಣ ಬ್ಯಾಂಕ್

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2013, 7:05 IST
Last Updated 6 ಸೆಪ್ಟೆಂಬರ್ 2013, 7:05 IST
ಆದಾಯ ಸ್ಥಗಿತಗೊಂಡಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬ್ಯಾಂಕ್‌ನ ವಾಣಿಜ್ಯ ಸಂಕೀರ್ಣ.
ಆದಾಯ ಸ್ಥಗಿತಗೊಂಡಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬ್ಯಾಂಕ್‌ನ ವಾಣಿಜ್ಯ ಸಂಕೀರ್ಣ.   

ತುರುವೇಕೆರೆ: ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ; ಸ್ಥಳೀಯ ಪಟ್ಟಣ ಪಂಚಾಯ್ತಿ ತನ್ನ ಚಾಲ್ತಿ ಖಾತೆಯಲ್ಲಿ 13 ವರ್ಷದ ಹಿಂದೆ ತೊಡಗಿಸಿದ್ದ ರೂ. 29ಲಕ್ಷ ಗಳನ್ನು ಮರುಪಾವತಿ ಮಾಡಲಾಗದೆ ಸ್ಥಳೀಯ ಪಟ್ಟಣ ಬ್ಯಾಂಕ್ ಕಾನೂನು ಸಂಘರ್ಷ ಎದುರಿಸುವ ಮುಜಗರದ ಸ್ಥಿತಿಗೆ ಸಿಲುಕಿದೆ.

ಪಟ್ಟಣ ಪಂಚಾಯಿತಿ 2000ನೇ ಸಾಲಿನಿಂದ ತನ್ನ ವಾಣಿಜ್ಯ ಕಟ್ಟಡಗಳನ್ನು ಹರಾಜು ಹಾಕಿದ ಸಂದರ್ಭ ಬಂದಿದ್ದ ಹಣ, ಇತರೆ ಸ್ವೀಕೃತಿಗಳನ್ನು ಪಟ್ಟಣ ಬ್ಯಾಂಕ್‌ನಲ್ಲಿನ ತನ್ನ ಚಾಲ್ತಿ ಖಾತೆಗೆ ಜಮಾ ಮಾಡಿತ್ತು. ಎರಡು ವರ್ಷಗಳ ಅವಧಿಯಲ್ಲಿ ರೂ.29 ಲಕ್ಷ ಸದರಿ ಖಾತೆಗೆ ಜಮಾ ಆಗಿತ್ತು. ಅಲ್ಲಿಂದ ಈಚೆಗೆ ಪಂಚಾಯಿತಿ ಆ ಖಾತೆ ಮೂಲಕ ಹಣ ಪಡೆಯಲಾಗಿಲ್ಲ. ಪಂಚಾಯಿತಿ ಪಡೆದಿದ್ದ ಟ್ರ್ಯಾಕ್ಟರ್ ಸಾಲ ರೂ.3.5 ಲಕ್ಷ ಮಾತ್ರ. ಈ ಖಾತೆಯೊಂದಿಗೆ ಹೊಂದಣಿಕೆ ಮಾಡಿಕೊಡಲಾಗಿದೆ. ಅದನ್ನು ಬಿಟ್ಟರೆ ಇಂದಿಗೂ ಬ್ಯಾಂಕ್ ರೂ.21.46 ಲಕ್ಷ ಬಾಕಿ ಉಳಿಸಿಕೊಂಡಿದ್ದು, ಇದರಿಂದ ಪಂಚಾಯಿತಿಗೆ ಕಳೆದ 13 ವರ್ಷಗಳಲ್ಲಿ ರೂ.88 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

13 ವರ್ಷ ಈ ಹಣವನ್ನು ಪಂಚಾಯಿತಿಗೆ ವಾಪಸ್ ಪಡೆಯುವ ಬಗ್ಗೆ ಅಧಿಕಾರಿಗಳು ಯಾವ ಗಂಭೀರ ಪ್ರಯತ್ನವನ್ನೂ ಮಾಡಿಲ್ಲ. ಪಂಚಾಯಿತಿ ನೀಡಿದ ಚೆಕ್‌ಗಳೆಲ್ಲ ಬೌನ್ಸ್ ಆಗಿದ್ದರೂ ಕಾನೂನು ಕ್ರಮ ಜರುಗಿಸಿರಲಿಲ್ಲ. ಕಾಂಗ್ರೆಸ್‌ನ ಒಂದಿಬ್ಬರು ಸದಸ್ಯರು ಬಿಟ್ಟರೆ ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಯಾರೂ ತುಟಿಬಿಚ್ಚಿಲ್ಲ. ಕೆಲ ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಯಿಂದ ಬ್ಯಾಂಕ್, ಪಂಚಾಯಿತಿ ಎರಡೂ ನಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಸದಸ್ಯರು ದೂರುತ್ತಾರೆ. ಈಗ ಪಂಚಾಯಿತಿ ಎಚ್ಚೆತ್ತು ಈ ಹಣದ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಪಟ್ಟಣ ಬ್ಯಾಂಕ್ ಈ ಮೊತ್ತವನ್ನು ಹಿಂದಿರುಗಿಸಲಾಗದಷ್ಟು ಆಸ್ತಿ ಹೊಂದಿಲ್ಲದಿಲ್ಲ. ಪಟ್ಟಣದ ಹೃದಯ ಭಾಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಾಣಿಜ್ಯ ಸಂಕೀರ್ಣವಿದೆ. ಆದರೆ ಬ್ಯಾಂಕ್ ನಗದು ವಹಿವಾಟಿನ ಕೊರತೆ ಎದುರಿಸುತ್ತಿದೆ. ಬ್ಯಾಂಕ್‌ಗೆ ಸೇರಿದ 47 ಅಂಗಡಿ ಮಳಿಗೆಗಳಿವೆ. ಈ ಮಳಿಗೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಇಲ್ಲದ ಕಾರಣವೊಡ್ಡಿ ಸುಮಾರು 42 ಅಂಗಡಿ ಮಳಿಗೆಯ ಬಾಡಿಗೆ ವರ್ಷಗಳಿಂದ ಬಾಕಿ ನಿಂತಿದೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಆದಾಯ ಬರುವ ಕಡೆ ಕೇವಲ 13 ಸಾವಿರ ಬಾಡಿಗೆ ಬರುತ್ತಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಳೇ ಕಟ್ಟಡ ಕೆಡವಿ ಆದಾಯದ ಮೂಲ ಹಾಳುಗೆಡವಲಾಗಿದೆ. ನೌಕರರಿಗೆ ವೇತನ, ಠೇವಣಿದಾರರಿಗೆ ಬಡ್ಡಿ ನೀಡಲೂ ಬ್ಯಾಂಕ್‌ನಲ್ಲಿ ನಗದು ಉಳಿಕೆ ಇಲ್ಲದ ದುಸ್ಥಿತಿ ತಲುಪಿದೆ.

ಬ್ಯಾಂಕ್‌ನಲ್ಲಿ ರೂ.80 ಲಕ್ಷ ಸಾರ್ವಜನಿಕ ಠೇವಣಿ ಇದೆ. ರೂ. 1 ಕೋಟಿಗೂ ಹೆಚ್ಚು ರೂಪಾಯಿ ಸಾಲ ಸುಸ್ತಿಯಾಗಿದೆ. ಇದರ ಮೇಲಿನ ಬಡ್ಡಿ ಬಾಕಿಯೇ ಒಂದು ಕೋಟಿಗೂ ಹೆಚ್ಚು ಎಂದು ಬ್ಯಾಂಕ್‌ನ ವ್ಯವಸ್ಥಾಪಕರು ಹೇಳುತ್ತಾರೆ. ಎಂಟು ವರ್ಷಗಳ ಹಿಂದೆ ಸಾಲ ವಸೂಲಾತಿಗಾಗಿ 25 ಪ್ರಕರಣಗಳಲ್ಲಿ ಸಾಲಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 16ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಿಲ್ಲಾ ಸಹಕಾರ ನ್ಯಾಯಾಲಯದಿಂದ ಬ್ಯಾಂಕ್ ಪರ ತೀರ್ಪು ಬಂದಿದ್ದು, ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿ ಬಾಕಿ ವಸೂಲಿ ಮಾಡಿಕೊಳ್ಳಲು ಆದೇಶ ನೀಡಲಾಗಿದೆ.

ಸುಮಾರು ರೂ.7.61 ಲಕ್ಷ ಅಸಲಿನ ಜತೆಗೆ ಶೇ.19ರ ಬಡ್ಡಿ ದರದಲ್ಲಿ ಎಲ್ಲ ವೆಚ್ಚಗಳು ಸೇರಿದಂತೆ ವಸೂಲು ಮಾಡಲು ಆದೇಶಿಸಲಾಗಿದೆ. ಅಚ್ಚರಿ ಎಂದರೆ ಎಂಟು ವರ್ಷಗಳಲ್ಲಿ ಬಂದ ಯಾವ ಆಡಳಿತ ಮಂಡಳಿಯೂ ನಿಷ್ಠುರ ಕಾನೂನು ಕ್ರಮ ಜರುಗಿಸಿ ಒಂದು ನಯಾಪೈಸೆ ವಸೂಲಿ ಮಾಡಿದ ಉದಾಹರಣೆ ಇಲ್ಲ. ಅದು ಹೋಗಲೆಂದರೆ ಆ ನಂತರ ಬ್ಯಾಂಕ್ ಆಡಳಿತ ಮಂಡಳಿ ಕೋಟ್ಯಂತರ ರೂಪಾಯಿ ಸಾಲ ವಸೂಲಿ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ದಿವ್ಯ ನಿರ್ಲಕ್ಷ್ಯ ತಾಳಿರುವುದು ಹಲ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಸಾಲ ವಸೂಲಾತಿಗಾಗಿ ಒಬ್ಬ ಸಾಲಗಾರರ ವಿರುದ್ಧವೂ ಕಾನೂನು ಕ್ರಮ ಜರುಗಿಸಿಲ್ಲ. ಆಡಳಿತ ಮಂಡಳಿಗೆ ಅಂತಹ ಇಚ್ಛಾಶಕ್ತಿಯೇ ಇಲ್ಲ ಎಂದು ಬ್ಯಾಂಕ್‌ನ ನಿರ್ದೇಶಕರೇ ದೂರುತ್ತಾರೆ. ಸಾಲ ಪಡೆದವರು ಯಾವುದೇ ಅಂಕೆ ಶಂಕೆ ಇಲ್ಲದೆ ಸಿಕ್ಕಿದ್ದೇ ಸೀರುಂಡೆ ಎಂದು ನಿರಾಳವಾಗಿದ್ದಾರೆ.

ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ಕಳೆದ ಕೆಲ ತಿಂಗಳ ಹಿಂದೆ ಸೂಪರ್ ಸೀಡ್ ಮಾಡಲಾಗಿತ್ತು. ಇದನ್ನು ಬ್ಯಾಂಕ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈ ಮಧ್ಯೆ ಬ್ಯಾಂಕ್ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬ್ಯಾಂಕ್‌ನ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಂಡು ವಾಣಿಜ್ಯ ಸಂಕೀರ್ಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಬ್ಯಾಂಕ್‌ನ ಗತವೈಭವ ಮರಳುವಂತೆ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.