ADVERTISEMENT

ಪುರಸಭೆ ನಿರ್ಲಕ್ಷ್ಯ: ನಿತ್ಯ ತಪ್ಪದ ಕಿರಿಕಿರಿ

ಕುಣಿಗಲ್: ರಸ್ತೆ ಬದಿ ಗೂಡಂಗಡಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:21 IST
Last Updated 27 ಡಿಸೆಂಬರ್ 2012, 6:21 IST
ಕುಣಿಗಲ್‌ನ ಬೆಸ್ಕಾಂ ಕಚೇರಿ ಮುಂಭಾಗ ಇಡಲಾಗಿರುವ ಚರ್ಮ ಕುಟೀರದ ಅಕ್ಕ-ಪಕ್ಕದಲ್ಲಿ ಇಟ್ಟಿರುವ ಅನಧಿಕೃತ ಪೆಟ್ಟಿಗೆಗಳು.
ಕುಣಿಗಲ್‌ನ ಬೆಸ್ಕಾಂ ಕಚೇರಿ ಮುಂಭಾಗ ಇಡಲಾಗಿರುವ ಚರ್ಮ ಕುಟೀರದ ಅಕ್ಕ-ಪಕ್ಕದಲ್ಲಿ ಇಟ್ಟಿರುವ ಅನಧಿಕೃತ ಪೆಟ್ಟಿಗೆಗಳು.   

ಕುಣಿಗಲ್: ಪುರಸಭೆ ಬೇಜವಾಬ್ದಾರಿಯಿಂದ ಪಟ್ಟಣದಲ್ಲಿ ಅನಧಿಕೃತ ಪೆಟ್ಟಿಗೆ ಅಂಗಡಿಗಳ ಸಂಖ್ಯೆ ಹೆಚ್ಚಿದ್ದು, ಸಾರ್ವಜನಿಕರು ಫುಟ್‌ಪಾತ್ ವ್ಯಾಪಾರಿ ವರ್ಗದವರು ಕಿರಿಕಿರಿ ಅನುಭವಿಸುವಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮೂರು ವರ್ಷದ ಹಿಂದೆ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-48ರ ವಿಸ್ತರಣೆಗೆ ಚಾಲನೆ ನೀಡಲಾಯಿತು. ಕೇವಲ ವಿಸ್ತರಣೆಗೆ ಸೀಮಿತವಾದ ಕಾರ್ಯಾಚರಣೆ ನಂತರದ ದಿನಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಾಣದೆ ಹಳೆ ರಸ್ತೆ ಹೊರತುಪಡಿಸಿ ಇಕ್ಕೆಲಗಳಲ್ಲಿ ಕಲ್ಲುಮಣ್ಣಿನ ರಸ್ತೆ ನಿರ್ಮಾಣವಾಯಿತು. ಚರಂಡಿ, ರಸ್ತೆ ನಿರ್ಮಾಣವಾಗದಿದ್ದರೂ ಪರವಾಗಿಲ್ಲ ಓಡಾಡಲು ವಿಶಾಲವಾದ ಜಾಗ ಸಿಕ್ಕಿದ್ದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.

ಇದರ ಸದುಪಯೋಗ ಪಡೆದ ಕೆಲ ವ್ಯಾಪಾರಿಗಳು ಮೊದಲಿಗೆ ತಳ್ಳುಗಾಡಿಯಲ್ಲಿ ವ್ಯಾಪಾರ ಆರಂಭಿಸಿದರು. ದಿನ ಕಳೆದಂತೆ ಸಣ್ಣ ಷೆಡ್ ನಿರ್ಮಿಸಿಕೊಂಡು ಸ್ವಂತ ಜಾಗವಾಗಿ ಮಾರ್ಪಡಿಸಿಕೊಂಡಿದ್ದಾರೆ. ಇದರಿಂದ ರಸ್ತೆ ವಿಸ್ತರಣೆಯಲ್ಲಿ ಅಂಗಡಿ ಕಳೆದುಕೊಂಡು ಯಾವುದೇ ಬೆಂಬಲವಿಲ್ಲದ ವ್ಯಾಪಾರಸ್ಥರು ಅಸಮಾಧಾನಗೊಂಡು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ಮಧ್ಯೆ ಡಾ.ಬಾಬುಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ 25 ಚರ್ಮ ಕುಟೀರ ವಿತರಿಸಲಾಗಿದೆ. ಈ ಸಂದರ್ಭ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚರ ವಹಿಸಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿತರಿಸುವಲ್ಲಿ ವಿಫಲರಾದರು. ಆಯ್ಕೆ ಮಾಡಿದ ಫಲಾನುಭವಿಗಳಿಗೆ ಸೂಕ್ತ ಜಾಗದ ಅವಕಾಶ ಮಾಡಿಕೊಡದೆ ವಿತರಿಸಿದ ನಂತರ ಕರ್ತವ್ಯ ಮುಗಿಯಿತೆಂದು ಸುಮ್ಮನಾದರು.

ಇದರಿಂದ ಮತ್ತಷ್ಟು ಸಮಸ್ಯೆ ಉದ್ಭವಿಸಿದ್ದು, ಫಲಾನುಭವಿಗಳು ಚರ್ಮ ಕುಟೀರಗಳನ್ನು ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಇಟ್ಟುಕೊಂಡರು. ಇದರ ದುರುಪಯೋಗ ಪಡೆದುಕೊಂಡ ಪ್ರಭಾವಿಗಳೂ ಸಹ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಇಟ್ಟುಕೊಂಡು ವ್ಯಾಪಾರ ಆರಂಭಿಸಲು ಮುಂದಾಗಿದ್ದಾರೆ.

ಬೆಸ್ಕಾಂ, ಗ್ರಾಮ ದೇವತೆ ದೇವಸ್ಥಾನ, ಸಂತೇಬೀದಿ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಪುರಸಭೆ ಬಸ್‌ನಿಲ್ದಾಣದ ಮುಂಭಾಗಗಳಲ್ಲಿ ಪೆಟ್ಟಿಗೆ ಅಂಗಡಿಗಳ ಹಾವಳಿ ಹೆಚ್ಚಿದ್ದು, ಸುಂಕ ವಸೂಲಿಗಾರರಿಗೆ ಅನುಕೂಲವಾದರೆ, ವಿಸ್ತರಣೆ ಜಾಗವನ್ನು ಅತಿಕ್ರಮಿಸಿಕೊಂಡಿರುವುದರಿಂದ ಪುನಃ ಸಂಚಾರಿ ವ್ಯವಸ್ಥೆಗೆ ತೊಂದರೆಯಾಗಿದೆ.

ಈಚೆಗೆ ಗ್ರಾಮದೇವತಾ ದೇವಾಲಯದ ಬಳಿ ಸಮಿತಿ ವತಿಯಿಂದ ಕಾರ್ಯಾಲಯದ ನೆಪದಲ್ಲಿ ಷೆಡ್ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪುರಸಭೆ ಸದಸ್ಯ ಚಂದ್ರಶೇಖರ್ ತೀವ್ರ ವಿರೋಧ ವ್ಯಕ್ತಪಡಿಸಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಮೇರೆಗೆ ಮುಖ್ಯಾಧಿಕಾರಿಗಳು ಷೆಡ್ ತೆರವುಗೊಳಿಸುವ ಬದಲು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಪುರಸಭೆ ವ್ಯಾಪ್ತಿಗೆ ಒಳಪಡುವ ವಿಚಾರವಾದ್ದರಿಂದ ಪುರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದರೆ ಅಗತ್ಯ ರಕ್ಷಣೆ ಕೊಡುವುದಾಗಿ ತಿಳಿಸಿ ಕೈತೊಳೆದುಕೊಂಡಿದ್ದಾರೆ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾರ ದ್ವೇಷವನ್ನು ಕಟ್ಟಿಕೊಳ್ಳಲು ಇಷ್ಟಪಡದ ಜನಪ್ರತಿನಿಧಿಗಳು, ಮುಖಂಡರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಸುಗಮ ಸಂಚಾರ ವ್ಯವಸ್ಥೆಗೆ ಫುಟ್‌ಪಾತ್ ವ್ಯಾಪಾರಿಗಳು ಅಡ್ಡವಾಗಿದ್ದಾರೆಂದು ನಿತ್ಯವೂ ಎತ್ತಂಗಡಿ ಮಾಡುವ ಪೊಲೀಸ್ ಸಿಬ್ಬಂದಿ ಅನಧಿಕೃತವಾಗಿ ಸ್ಥಾಪನೆಗೊಂಡಿರುವ ಪೆಟ್ಟಿಗೆ ಅಂಗಡಿಗಳ ತೆರವಿಗೂ ಪುರಸಭೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪುರಸಭೆ ಸದಸ್ಯರಾದ ಕೆ.ಕೆ.ರಮೇಶ್, ಕನ್ನಡ ಸೇನೆ ಅಧ್ಯಕ್ಷ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT