ADVERTISEMENT

ಫುಟ್‌ಪಾತ್ ಫುಡ್ ವ್ಯಾಪಾರಿಗಳ ಬವಣೆ

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಎಲ್ಲಿಗೆ?

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 8:55 IST
Last Updated 15 ಜುಲೈ 2013, 8:55 IST

ತುಮಕೂರು: ಸಂಜೆಗೆ ಕುರುಕುಲು ತಿಂಡಿ, ರಾತ್ರಿ ಸಸ್ತಾ ಊಟ, ರುಚಿಗೆ ಮಸಾಲೆ ದೋಸೆ, ಆಸೆಗೆ ಪಾನೀಪುರಿ, ಮೇಲೊಂದಿಷ್ಟು ಚುರುಮುರಿ- ಪಿಜ್ಜಾ- ಬರ್ಗರ್, ದೇಹಕ್ಕೆ ತಂಪು ನೀಡುವ ಗಸಗಸೆ ಹಾಲು, ಖಡಕ್ ಜನರಿಗೆ ಜೋಳದ ರೊಟ್ಟಿ- ಚಟ್ನಿಪುಡಿ, ಬೇಕಿದ್ದವರಿಗೆ ಎಗ್‌ಫ್ರೈಡ್ ರೈಸ್- ಕಬಾಬ್; ಇಷ್ಟೇ ಅಲ್ಲ ಇನ್ನಷ್ಟು...

-ಇದು ನಗರದ ವಿಶ್ವವಿದ್ಯಾಲಯ ಸಮೀಪ ಇರುವ `ಆಹಾರ ಬೀದಿ'ಯ ಚಿತ್ರಣ. ಇಳಿ ಸಂಜೆಯಲ್ಲಿ ಗೆಳತಿಗೆ ಮಸಾಲೆಪುರಿ ಕೊಡಿಸಲು ಬರುವ ಪ್ರಿಯಕರನಿಂದ ಹಿಡಿದು ಲೈಟ್‌ಕಂಬಕ್ಕೆ ಲೈನ್ ಎಳೆದು ದಣಿದು ಬರುವ ಕಾರ್ಮಿಕನವರೆಗೆ, ಚಪ್ಪಲಿ ಹೊಲಿಯುವವರಿಂದ ಹಿಡಿದು ಪ್ರತಿಷ್ಠಿತ ಬ್ಯಾಂಕ್‌ಗಳ ಮ್ಯಾನೇಜರ್‌ವರೆಗೆ ಎಲ್ಲ ವಯೋಮಾನ ಮತ್ತು ಎಲ್ಲ ವರ್ಗದ ಜನರು ಸಂಜೆಯಿಂದ ರಾತ್ರಿಯವರೆಗೆ ಹೊಟ್ಟೆ ತುಂಬಿಸಿಕೊಂಡು ನೆಮ್ಮದಿಯಿಂದ ಮನೆಗೆ ಮರಳುತ್ತಾರೆ. ರುಚಿ ಬದಲಾವಣೆಗೆಂದು ಮನೆ ಮಂದಿಯೆಲ್ಲ ವಾರಕ್ಕೊಮ್ಮೆ ಬಂದು ತಿಂಡಿ ಮೆಲ್ಲುವ ನೋಟವೂ ಅಪರೂಪವಲ್ಲ.

ಮಲ್ಲಸಂದ್ರ, ಉಪ್ಪಾರಳ್ಳಿ, ಕ್ಯಾತ್ಸಂದ್ರ, ಶಿರಾಗೇಟ್ ಸೇರಿದಂತೆ ಹೊರವಲಯದ ಬಡಾವಣೆಗಳಿಂದಲೂ ಇಲ್ಲಿಗೆ ಬರುವವರಿದ್ದಾರೆ. `ಕಡಿಮೆ ದರ- ಉತ್ತಮ ಆಹಾರ' ಇದೇ ನಮ್ಮ ಯಶಸ್ಸಿನ ಗುಟ್ಟು ಎಂದು ಇಲ್ಲಿ ಅಂಗಡಿ ಇಟ್ಟಿರುವವರು ಹೆಮ್ಮೆಯಿಂದ ಹೇಳುತ್ತಾರೆ. ವ್ಯಾಪಾರಸ್ಥರ ನಗುವಿನ ಹಿಂದೆ ಅನೇಕ ನೋವಿದೆ.

ಎತ್ತಂಗಡಿ ಕಿರಿಕಿರಿ: ಫುಟ್‌ಪಾತ್ ಅಂಗಡಿಗಳು ಎಂದು ಕರೆಸಿಕೊಳ್ಳುವ ಈ ಗಾಡಿಗಳು ನಗರಸಭೆಯಿಂದ ಪರವಾನಗಿ ಪಡೆದ ಹೋಟೆಲ್‌ಗಳಂತಲ್ಲ. ಮನೆಯಿಂದ ಅಡುಗೆ ತಯಾರಿಸಿ ತಂದು ಇಲ್ಲಿ ಮಾರಿ, ಖಾಲಿ ಪಾತ್ರೆಯನ್ನು ಮನೆಗೆ ತೆಗೆದುಕೊಂಡು ಹೋಗಿ ತೊಳೆಯಬೇಕು. ಗ್ರಾಹಕರು ಬಳಸಿದ ಎಲೆ, ಲೋಟ, ಪ್ಲೇಟ್‌ಗಳನ್ನೂ ಹೋಟೆಲ್‌ನವರೆ ಕೊಂಡೊಯ್ಯಬೇಕು. ಯುಪಿಎಸ್‌ಗಳಿಂದ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು ಅಂಗಡಿ ಮಾಲೀಕರದ್ದೇ ಹೊಣೆ.

ಈ ಮೊದಲು ವಿಶ್ವವಿದ್ಯಾಲಯ ಪಕ್ಕದ ಬೀದಿಯಲ್ಲಿ ಇರುತ್ತಿದ್ದ ಅಂಗಡಿಗಳು ನಂತರ ಬಿ.ಎಚ್.ರಸ್ತೆ ಬದಿಗೆ ಎತ್ತಂಗಡಿಯಾದವು. ಅಲ್ಲಿಂದ ಇದೀಗ ದೇಗುಲ ಪಕ್ಕದ ರಸ್ತೆಗೆ ಎತ್ತಂಗಡಿಯಾಗಿವೆ. ಮುಂದೆ ಇಲ್ಲಿಂದ ಎಲ್ಲಿಗೆ ಎಂಬುದು ಯಾರಿಗೂ ಗೊತ್ತಿಲ್ಲ.

`ಯಾವಾಗ ಯಾರು ಬಂದು ಏನು ಹೇಳುತ್ತಾರೋ ಎಂಬ ಭಯದಲ್ಲಿಯೇ ನಾವು ಬದುಕಬೇಕು. ನಗರಸಭೆ ನಮ್ಮನ್ನು ಗುರುತಿಸಿ ವರ್ಷಕ್ಕಿಷ್ಟು ಅಂತ ಕಂದಾಯ ಕಟ್ಟಿಸಿಕೊಂಡು ಪರವಾನಗಿ ಕೊಡಬೇಕು. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ನಾವು ನೆಮ್ಮದಿಯಿಂದ ಬದುಕುವುದಾದರೂ ಹೇಗೆ?' ಎಂದು ಪ್ರಶ್ನಿಸುತ್ತಾರೆ ಫುಡ್‌ಸ್ಟ್ರೀಟ್‌ನಲ್ಲಿ ಕಳೆದ ಎರಡು ವರ್ಷದಿಂದ ಗಸಗಸೆ ಹಾಲು ಮತ್ತು ಹಬೆ ವಡೆ ಮಾರುತ್ತಿರುವ ರಾಜಶೇಖರ್.

ಸೌಲಭ್ಯ ಬೇಕು: ಮಳೆ ಬಂದರೂ ಗ್ರಾಹಕರು ನೆಮ್ಮದಿಯಾಗಿ ನಿಂತು ನಿಲ್ಲಲು ಸಾಧ್ಯವಾಗುವಂತೆ ಶೀಟ್‌ನ ತಾರಸಿ, ವಾಹನ ಪಾರ್ಕಿಂಗ್‌ಗೆ ಜಾಗ, ರೊಚ್ಚಾಗದಂತೆ ಕಾಂಕ್ರಿಟ್ ಸ್ಲ್ಯಾಬ್ ಅಳವಡಿಸಿದರೆ ಅನುಕೂಲ. ಇದೆಲ್ಲವನ್ನೂ ವರ್ಷಕ್ಕೊಂದು ಕಡೆಗೆ ಎತ್ತಂಗಡಿಯಾಗುವ ಆಹಾರ ಬೀದಿಗೆ ಒದಗಿಸುವುದು ಕಷ್ಟ. ನಗರಸಭೆ ಒಂದು ಸ್ಥಳ ಗುರುತಿಸಿ, ಅಲ್ಲಿ ಎಲ್ಲ ಸೌಲಭ್ಯಗಳನ್ನೂ ಒದಗಿಸಿದರೆ ಒಳ್ಳೆಯದು ಎನ್ನುವುದು ಇಲ್ಲಿನ ವ್ಯಾಪಾರಸ್ಥರ ಒಕ್ಕೊರಲ ಮಾತು.

`ಮಳೆ ಬಂದ ದಿನ ನಮ್ಮ ತಂದ ಮಾಲು ಪೂರ್ತಿ ಖರ್ಚಾಗುವುದಿಲ್ಲ. ಸಿದ್ಧಪಡಿಸಿದ ಆಹಾರ ಪದಾರ್ಥಗಳು ಉಳಿದು ಹೋದರೆ ಹಾಕಿದ ಬಂಡವಾಳಕ್ಕೂ ಹೊಡೆತ' ಎಂದು ಅಳಲು ತೋಡಿಕೊಂಡವರು ರೇವಣ್ಣ.

ಅನಿವಾರ್ಯ: ಫುಡ್‌ಸ್ಟ್ರೀಟ್‌ನಲ್ಲಿ ಕೇವಲ ರೂ.25ಕ್ಕೆ ಸಿಗುವ ಸೆಟ್ ದೋಸೆಗೆ ಹೋಟೆಲ್‌ಗಳಲ್ಲಿ 35 ರೂಪಾಯಿ ತೆರಬೇಕು. ಯಾವುದೇ ರೈಸ್‌ಐಟಂಗ್‌ಗೆ ಹೊರಗೆ ರೂ.35 ಇದೆ. ಇಲ್ಲಿ ಕೇವಲ 20 ರೂಪಾಯಿಗೆ ಸಿಗುತ್ತೆ. ಕಡಿಮೆ ದರದ ಕಾರಣದಿಂದಲೇ ನಗರದಲ್ಲಿರುವ ಹೆಚ್ಚಿನ ಸಂಖ್ಯೆಯ ಅವಿವಾಹಿತ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಫುಡ್‌ಸ್ಟ್ರೀಟ್‌ನತ್ತ ಹೆಜ್ಜೆ ಹಾಕುತ್ತಾರೆ.

`ನಾನು ಖಾಸಗಿ ಕಾರ್ಖಾನೆಯಲ್ಲಿ ನೌಕರ. ಬೆಳಿಗ್ಗೆ 9ಕ್ಕೆ ನನ್ನ ಕೆಲಸ ಶುರು. ಪ್ರತಿ ದಿನ ಓಟಿ ಮಾಡುತ್ತೇನೆ. ರಾತ್ರಿ 9ಕ್ಕೆ ಕೆಲಸ ಮುಗಿಯುತ್ತದೆ. ಓಟಿ ಹಣದಿಂದಲೇ ಹೊಟ್ಟೆ ತುಂಬಿಸಿಕೊಂಡು ಸಂಬಳದ ಹಣವನ್ನು ಊರಿಗೆ ಕಳುಹಿಸುತ್ತೇನೆ. ರಾತ್ರಿ ವೇಳೆ ಇಲ್ಲಿ ಮಾತ್ರ ಊಟ ಸಿಗುತ್ತದೆ' ಎಂದು ಅಂತರಸನಹಳ್ಳಿಯ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುವ ರಮೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.