ADVERTISEMENT

ಫೆ.10ಕ್ಕೆ ಎಸ್‌ಎಫ್‌ಐ ವಿಧಾನಸೌಧ ಚಲೊ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 9:40 IST
Last Updated 17 ಜನವರಿ 2011, 9:40 IST

ತುಮಕೂರು: ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಬಜೆಟ್‌ನಲ್ಲಿ ಶಿಕ್ಷಣ ಅನುದಾನ ಹೆಚ್ಚಿಸಲು ಆಗ್ರಹಿಸಿ ಫೆ.10ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯದರ್ಶಿ ಎನ್.ಅನಂತನಾಯ್ಕ ತಿಳಿಸಿದರು.

ಮುಂದಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ.30 ಹಣ ಮೀಸಲಿಡಬೇಕು; ಶೈಕ್ಷಣಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಸಾವಿರಾರು ಎಸ್‌ಎಫ್‌ಐ ಕಾರ್ಯಕರ್ತರು  ಚಲೋದಲ್ಲಿ ಭಾಗವಹಿಸುವರು ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ಹಂತದಲ್ಲಿ ಹೆಚ್ಚಿಸಿರುವ ಶುಲ್ಕ ಇಳಿಸಬೇಕು. ಹೆಚ್ಚುವರಿ ಬಸ್‌ಪಾಸ್ ದರ ಹಿಂತಿರುಗಿಸಬೇಕು. ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಅಗತ್ಯವಿರುವ ಮೂಲಸೌಲಭ್ಯ ಮತ್ತು ಶಿಕ್ಷಕರ ಸಮಸ್ಯೆ ಪರಿಹರಿಸಬೇಕು. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದೀಕರಣ ತಡೆಯಬೇಕು. ವಿ.ವಿ.ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ಹಾಸ್ಟೆಲ್‌ಗಳಲ್ಲಿ ಪ್ರತಿ ವಿದ್ಯಾರ್ಥಿಗೆ ದಿನಕ್ಕೆ ಕೇವಲ ರೂ.20 ನೀಡಲಾಗುತ್ತಿದೆ. ಆದರೆ ಜೈಲುಗಳಲ್ಲಿ ಕೈದಿಗಳಿಗೆ ದಿನಕ್ಕೆ ರೂ. 80 ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೈದಿಗಳಿಗಿಂತ ಕಳಪೆ ಆಹಾರ ನೀಡಲಾಗುತ್ತಿದೆ. ಕೇರಳ ಮಾದರಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ತಲಾ ರೂ.1500 ಭತ್ಯೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಈ.ಶಿವಣ್ಣ ಮತ್ತು ಜಿ.ದರ್ಶನ್ ಹಾಜರಿದ್ದರು.

ಪೆಟ್ರೋಲ್ ಬೆಲೆ ಏರಿಕೆ: ಸಿಪಿಎಂ ಖಂಡನೆ
ಕೇಂದ್ರದ ಯುಪಿಎ ಸರ್ಕಾರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ- ಮಾರ್ಕ್ಸ್‌ವಾದಿ (ಸಿಪಿಎಂ) ನಗರ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಮತ್ತು ಮುಖಂಡ ಬಿ.ಉಮೇಶ್ ಖಂಡಿಸಿದ್ದಾರೆ.

ಕಳೆದ 7 ತಿಂಗಳ ಅವಧಿಯಲ್ಲಿ 7 ಬಾರಿ ಬೆಲೆ ಹೆಚ್ಚಿಸಲಾಗಿದೆ. ಪೆಟ್ರೋಲ್ ಮೇಲೆ ಲೀಟರ್‌ಗೆ  ಅವೈಜ್ಞಾನಿಕವಾಗಿ ರೂ. 14.35 ಅಬಕಾರಿ ಸುಂಕ ಹಾಕಲಾಗಿದೆ. ಆದರೆ ವಿಮಾನ ಬಳಕೆ ಪೆಟ್ರೋಲ್‌ಗೆ ಕೇವಲ ರೂ. 4.60 ಸುಂಕ ವಿಧಿಸಲಾಗಿದೆ. ಈ ಮೂಲಕ ಕೇಂದ್ರಸರ್ಕಾರ ಜನಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ನಿಯಂತ್ರಣ ತೆಗೆದು ಹಾಕಿರುವುದರಿಂದ  ಅರಾಜಕತೆ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.