ADVERTISEMENT

ಬಯಲಾಟವೇ ಉಸಿರು...

ದೇಸಿ ಸಾಧಕರು

ಜಿ.ಧನಂಜಯ
Published 14 ಜೂನ್ 2014, 5:43 IST
Last Updated 14 ಜೂನ್ 2014, 5:43 IST

ನೇಕಾರಿಕೆ ಬದುಕು. ಬಯಲಾಟ ಉಸಿರು. ಶಿವರಾತ್ರಿ ಹತ್ತಿರವಾದಂತೆ 58ರ ವಯಸ್ಸಿನಲ್ಲೂ ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ಮೂಡಲಪಾಯ ಯಕ್ಷಗಾನ ಕಲೆಯನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಜೀವಂತವಾಗಿರಿಸಿದ್ದಾರೆ ಚಿಗ್ಗಾವೆ ಸೋಮಶೇಖರ್.

ಶಿವರಾತ್ರಿಯಲ್ಲಿ ನಡೆಯುವ ದೇವಿ ಮಹಾತ್ಮೆ ಬಯಲಾಟಕ್ಕೆ 50 ವರ್ಷಗಳಿಂದ ತಪ್ಪದೆ ಬಣ್ಣ ಹಚ್ಚುತ್ತಾ ಬಂದಿದ್ದಾರೆ. ಅವರ ಮಕ್ಕಳು, ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳು ಹೀಗೆ ಚಿಗ್ಗಾವೆ ವಂಶಸ್ಥರೆಲ್ಲ ಬಯಲಾಟದ ತೇರನ್ನು ನಿರಂತರವಾಗಿ ಎಳೆಯುತ್ತಿದ್ದಾರೆ.

8ನೇ ವಯಸ್ಸಿನಲ್ಲಿಯೇ ಯಕ್ಷಗಾನ ರಂಗ ಸಜ್ಜಿಕೆಗೆ ಪದಾರ್ಪಣೆ ಮಾಡಿದರು. ಬಾಲಕೃಷ್ಣ, ಚಂದ್ರಸೇನ ರಾಜ ವಿಕ್ರಮನ ಪಾತ್ರ ನಿರ್ವಹಿಸಿ ಮನೆ ಮಾತಾಗಿದ್ದಾರೆ. ಅನಾರೋಗ್ಯವಿದ್ದರೂ ಗೆಜ್ಜೆ ಕಟ್ಟುವ ಆಸೆ ಇದೆ. ಮಕ್ಕಳು ಬಿಡುತ್ತಿಲ್ಲ ಎಂದು ಬಯಲಾಟದ ಗೀಳನ್ನು ತೊಡಿಕೊಳ್ಳುತ್ತಾರೆ.

ಸೋಮಶೇಖರ್ ಮಗ ಸಿ.ಎಸ್.ಗೋಪಿನಾಥ್ ನೇಕಾರಿಕೆ ಹಾಗೂ ನಟನೆಯನ್ನು ಉಸಿರಾಗಿಸಿಕೊಂಡಿದ್ದಾರೆ. ಚಿಕ್ಕಪ್ಪನ ಮಕ್ಕಳಾದ ಸಿ.ಎನ್.ವೆಂಕಟೇಶ್, ನರೇಂದ್ರಕುಮಾರ್, ಜೀವನ್‌ಕುಮಾರ್ ಮತ್ತು ಸಿ.ಡಿ.ರಂಗನಾಥ್ ಯಕ್ಷಗಾನ ನಟನೆ ಮುಂದುವರೆಸಿದ್ದಾರೆ. ಸಿ.ಎಸ್.ಧನರಾಜ್ ಭಾಗವತಿಕೆ ಕೈಗೆತ್ತಿಕೊಂಡಿದ್ದಾರೆ.

ಮೂಡಲಪಾಯ ಯಕ್ಷಗಾನ ಕಲೆ ತಂದೆ ಸಿ.ವಿ.ಮೂಡಲಗಿರಿಯಪ್ಪ ಅವರಿಂದ ಬಂದ ಬಳುವಳಿ. ಚಿಕ್ಕನಾಯಕನಹಳ್ಳಿಯಲ್ಲಿ 1923ರಲ್ಲಿಯೇ ಆದಿತ್ಯಾದಿ ನವಗ್ರಹ ಕೃಪಾಪೋಷಿತ ಯಕ್ಷಗಾನ ಬಯಲು ನಾಟಕ ಸಂಘ ಸ್ಥಾಪಿಸಿದ್ದರು. 91 ವರ್ಷಗಳಿಂದ ವೇದಿಕೆಯಿಂದ ಪ್ರತಿ ವರ್ಷ ಶಿವರಾತ್ರಿ ಜಾಗರಣೆ ದೇವಿ ಮಹಾತ್ಮೆ ಯಕ್ಷಗಾನ ನಡೆಯುತ್ತಿದೆ. 1998ರಲ್ಲಿ ರಂಗಮಂದಿರ ನಿರ್ಮಿಸಲಾಗಿದೆ.

ಗವಿರಂಗನಾಥ ಸ್ವಾಮಿ ಬೆಟ್ಟ, ತುಮಕೂರು, ಪೆದ್ದೀಹಳ್ಳಿ ಸೇರಿದಂತೆ ನಾಡಿನ ವಿವಿಧ ಭಾಗಗಲ್ಲಿ ಪ್ರದರ್ಶನ ನೀಡಿದ್ದಾರೆ. ಬನಶಂಕರಮ್ಮನ ಅಪ್ಪಣೆಯಿಲ್ಲದೆ ಹೊರಗಡೆ ಆಟ ಪ್ರದರ್ಶಿಸುವಂತಿಲ್ಲ ಎನ್ನುತ್ತಾರೆ ಸೋಮಶೇಖರ್.

69ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಶಂಸನಾ ಪತ್ರ, 2005ರಲ್ಲಿ ಯಕ್ಷಗಾನ ಕಲೋತ್ಸವಲ್ಲಿ ಸನ್ಮಾನ, ಸುವರ್ಣ ಕರ್ನಾಟಕ ಸನ್ಮಾನ, ಸಾಂಸ್ಕೃತಿಕ ದಿಬ್ಬಣ ಪುರಸ್ಕಾರ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಕಲಾವಿದರ ಸಂಘದಿಂದ ಸನ್ಮಾನ, ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ಸನ್ಮಾನ... ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳು ಅವರ ಕಲಾ ಸೇವೆ ಗುರುತಿಸಿ ಪುರಸ್ಕರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.