ADVERTISEMENT

ಬಯಲಿಗೆ ಬಂದ ಬಿಜೆಪಿ ಬಂಡಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 8:30 IST
Last Updated 9 ಫೆಬ್ರುವರಿ 2011, 8:30 IST

ತುರುವೇಕೆರೆ: ತಾಲ್ಲೂಕು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಎರಡು ಗುಂಪಿನ ಕಾರ್ಯಕರ್ತರ ಅಸಮಾಧಾನ ಸ್ಫೋಟಕ್ಕೆ, ಪರಸ್ಪರ ವಾಗ್ದಾಳಿಗೆ ವೇದಿಕೆಯಾಗುವ ಮೂಲಕ ಬಿಜೆಪಿ ಬಂಡಾಯ ಬಯಲಿಗೆ ಬಂತು.ಪಟ್ಟಣದಲ್ಲಿ ಈಚೆಗೆ ತಾ.ಪಂ. ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಪಕ್ಷದ ವತಿಯಿಂದ ಮಂಗಳವಾರ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.ಸಭೆಯಲ್ಲೇ ಭಿನ್ನಮತ ಸ್ಫೋಟಿಸಿತು.

ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಸಭೆ ಉದ್ಘಾಟಿಸಿ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಗೊಂದಲ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಆದರೆ ರಾಜ್ಯ ಕಾರ್ಯದರ್ಶಿ ನಂದೀಶ್ ಮಾತನಾಡಲು ನಿಂತ ಕೂಡಲೇ ಕೆಲವು ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು.ತಾಲ್ಲೂಕು ಘಟಕದ ನಿರ್ಧಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸುತ್ತಾರೆ ಎಂದು ಆರೋಪಿಸಿದ ಕಾರ್ಯಕರ್ತರು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮಾತನಾಡದಂತೆ ತಡೆದರು. ತುಮಕೂರು ಶಾಸಕ ಎಸ್.ಶಿವಣ್ಣ ಸಭೆಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು.

ಸಭೆ ಸ್ವಲ್ಪ ನಿಯಂತ್ರಣಕ್ಕೆ ಬಂತಾದರೂ ಹಲವು ಕಾರ್ಯಕರ್ತರು ತಾಲ್ಲೂಕು ಘಟಕದ ಅಧ್ಯಕ್ಷ ಬೋರೇಗೌಡರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ, ಏಕಪಕ್ಷೀಯ ನಿರ್ಣಯ ಕೈಗೊಂಡು ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಅವರನ್ನು ಕಿತ್ತೊಗೆಯಬೇಕು ಎಂದು ಏರಿದ ದನಿಯಲ್ಲಿ ಆಗ್ರಹಿಸಿದರು.ಮುಖಂಡರಾದ ಹೇಮಚಂದ್ರ, ಶಿವಕುಮಾರ್ ಮೊದಲಾದವರು ಇದಕ್ಕೆ ದನಿಗೂಡಿಸಿದರು. ಆಗ ಇದ್ದಕ್ಕಿದ್ದಂತೆ ಹುಲ್ಲೇಕೆರೆ ಬಿಜೆಪಿ ಮುಖಂಡ ರಮೇಶ್ ವೇದಿಕೆ ಬಳಿ ಸಾಗಿ ಕೈಮಗ್ಗ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ವಿರುದ್ಧ ಆರೋಪಗಳ ಸುರಿಮಳೆ ಮಾಡಲು ತೊಡಗಿದಾಗ ರೊಚ್ಚಿಗೆದ್ದ ಎಂಡಿಎಲ್ ಬೆಂಬಲಿಗರು ಅಡ್ಡಿಪಡಿಸಿದರು.ವೇದಿಕೆಯಲ್ಲಿದ್ದ ಮುಖಂಡರು ಎರಡೂ ಗುಂಪುಗಳನ್ನು ಸಮಾಧಾನಪಡಿಸಿದರು. ಕೂಡಲೇ ಎಂಡಿಎಲ್ ಬೆಂಬಲಿಗರು ತಾಲ್ಲೂಕು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗುತ್ತಾ ಸಭೆ ಬಹಿಷ್ಕರಿಸಿ ಹೊರನಡೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.