ತುಮಕೂರು: ಸ್ವಲ್ಪ ಮೈ ಮರೆತು ಗಾಡಿ ಓಡಿಸಿದ್ರು ಪ್ರಾಣಕ್ಕೆ ಕುತ್ತು. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಹಂಪ್‌ಗಳು ಪ್ರಾಣ ಕಸಿಯಲು ಬಾಯ್ತೆರದು ಕಾಯ್ತಿವೆ...
ಹೀಗೆ ರೋಡ್ ಹಂಪ್‌ಗಳ ಕುರಿತು ಮಾತಿಗೆ ಎಳೆಯುತ್ತಿದ್ದಂತೆ ಬನಶಂಕರಿ ನಿವಾಸಿ, ಬೈಕ್ ಸವಾರ ವಿನಯ್ ಆಕ್ರೋಶದಿಂದಲೇ ಉತ್ತರಿಸಿದರು.
ನಿತ್ಯ ಸಂಭವಿಸುವ ಅಪಘಾತಗಳನ್ನು ನೋಡಿಯೂ ಅವೈಜ್ಞಾನಿಕ ರೋಡ್ ಹಂಪ್ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.
ನಗರದ ವಿವಿಧ ಬಡಾವಣೆಗಳ ರಸ್ತೆಗಳು, ಬಸ್ ನಿಲ್ದಾಣ ರಸ್ತೆ, ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ ಅವೈಜ್ಞಾನಿಕ ಹಂಪ್‌ಗಳು ವಾಹನ ಸವಾರರು ಅದರಲ್ಲೂ; ದ್ವಿಚಕ್ರ ವಾಹನ ಸವಾರರಲ್ಲಿ ಪ್ರಾಣ ಭೀತಿ ಹುಟ್ಟಿಸಿವೆ. ಅವೈಜ್ಞಾನಿಕ ಹಂಪ್ ತೆರವು ಮಾಡಬೇಕು ಎಂಬ ಮನವಿಗೆ ಯಾರೊಬ್ಬರೂ ಕಿವಿಗೊಡುತ್ತಿಲ್ಲ ಎಂದು ನಾಗರಿಕರು, ಸಂಘ ಸಂಸ್ಥೆಗಳು ದೂರಿವೆ.
ನಗರ ಬಸ್ ನಿಲ್ದಾಣದ ರಸ್ತೆಯಲ್ಲಿ ಹಂಪ್‌ಗಳು ಒಂದು ರೀತಿಯ ಸಮಸ್ಯೆಯಾದರೆ, ಗುಂಡಿಗಳು ಮತ್ತೊಂದು ಸಮಸ್ಯೆಯಾಗಿ ಕಾಡುತ್ತಿವೆ. ಒಳಚರಂಡಿ ಕಟ್ಟಿಕೊಂಡ ಸಮಯದಲ್ಲಿ ಪದೇ–ಪದೇ ರಸ್ತೆ ಅಗೆಯುವುದು, ಅದನ್ನು ಸರಿಯಾಗಿ ಮುಚ್ಚದಿರುವುದು ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಹೇಶ್ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ 10–12 ಸೆಂ.ಮೀ ಉದ್ದ, 3.5 ಮೀಟರ್ ಅಗಲದ ಹಂಪ್ ನಿರ್ಮಿಸಬೇಕು ಎಂಬ ನಿಯಮ ಇದ್ದರೂ ಅದು ಪಾಲನೆಯಾಗುತ್ತಿಲ್ಲ. ಬದಲಿಗೆ ಕಡಿದಾದ, ಅಪಘಾತಕ್ಕೆ ಆಸ್ಪದ ನೀಡುವ ಹಂಪ್ ಹಾಕಲಾಗಿದೆ. ಈ ರೀತಿಯ ಹಂಪ್‌ಗೆ ಎರಡು ದಿನಗಳ ಹಿಂದಷ್ಟೇ ನಗರದ ಮಹಿಳೆ ಬಲಿಯಾಗಿದ್ದಾರೆ.
ಸಾಲು ಸಾಲು ರೋಡ್ ಹಂಪ್: ಜನವಸತಿ ಪ್ರದೇಶಗಳಲ್ಲಿ ಹಾಕಿರುವ ಸಾಲು ಸಾಲು ರೋಡ್ ಹಂಪ್‌ಗಳು ವಾಹನ ಸವಾರರಲ್ಲಿ ದಿಗಿಲು ಹುಟ್ಟಿಸಿವೆ. ಸದಾಶಿವನಗರದ ದೇವೇಗೌಡ ಲೇಔಟ್ 7ನೇ ಮುಖ್ಯರಸ್ತೆಯಲ್ಲಿ ಅರ್ಧ ಕಿ.ಮೀ ವ್ಯಾಪ್ತಿಯಲ್ಲೇ 7 ಕಡೆ ಹಂಪ್ ಹಾಕಲಾಗಿದೆ. ಕುಣಿಗಲ್ ರಸ್ತೆಯಲ್ಲಿ 5 ಕಡೆ ಅವೈಜ್ಞಾನಿಕ ರಸ್ತೆ ಉಬ್ಬುಗಳಿವೆ. ಬನಶಂಕರಿ ಮುಖ್ಯರಸ್ತೆ, ಉಪ್ಪಾರಹಳ್ಳಿ, ಎಸ್.ಎಸ್.ಪುರಂ, ಎಸ್‌ಐಟಿ, ಜಯನಗರ ಮುಖ್ಯರಸ್ತೆಯಲ್ಲಿ ಉಬ್ಬುಗಳ ಜತೆಗೆ ಗುಂಡಿಗಳೂ ಅಪಾಯವನ್ನು ಸೃಷ್ಟಿಸಿವೆ.
ಅವೈಜ್ಞಾನಿಕ ರೋಡ್ ಹಂಪ್‌ಗಳ ಬಗ್ಗೆ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸುವ ಅಥವಾ ಪರ್ಯಾಯ ವ್ಯವಸ್ಥೆ ರೂಪಿಸುವ ಆಸಕ್ತಿ ತೋರುತ್ತಿಲ್ಲ. ಬಹುತೇಕ ದ್ವಿಚಕ್ರ ವಾಹನಗಳ ಅಪಘಾತಕ್ಕೆ ರಸ್ತೆಯಲ್ಲಿರುವ ಹಂಪ್‌ಗಳೇ ಕಾರಣವಾಗಿವೆ. ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಹಂಪ್ ಕಾಣುವುದಿಲ್ಲ. ಆಗ ಬ್ರೇಕ್ ಹಾಕಿಯೋ ಇಲ್ಲವೇ ಹಂಪ್ ದಾಟಿಸಿಯೋ ವಾಹನ ಸವಾರರು ಬಿದ್ದು ಸಾಯುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ರಸ್ತೆಯ ಹಂಪ್ ದಾಟುವಾಗ ದ್ವಿಚಕ್ರ ವಾಹನ ಸವಾರರ ಬೆನ್ನುಹುರಿ ಸ್ಪ್ರಿಂಗ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆರಂಭದಲ್ಲಿ ಇದರ ಪರಿಣಾಮ ಗೊತ್ತಾಗದಿದ್ದರೂ; ವಯಸ್ಸಾದಂತೆ ಬೆನ್ನು ನೋವು, ನರಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ರಸ್ತೆಯಲ್ಲಿ ಹಂಪ್ ಇರುವ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಜತೆಗೆ ಬೆಳಕು ಪ್ರತಿಫಲಿಸುವ ಬಣ್ಣವನ್ನು ರಸ್ತೆ ಹಂಪ್‌ಗಳಿಗೆ ಬಳಿಯಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಟಿ.ಎ.ಈಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.