ADVERTISEMENT

ಬಸ್ ವಿಳಂಬ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 6:20 IST
Last Updated 28 ಜನವರಿ 2012, 6:20 IST

ಕುಣಿಗಲ್: ಸಾರಿಗೆ ಸಂಸ್ಥೆ ವಾಹನ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ ಯವಕನನ್ನು ನಿರ್ವಾಹಕಿ ಪೊಲೀಸ್ ಠಾಣೆ ವಶಕ್ಕೆ ನೀಡಿದ್ದು, ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ ಅಮೃತೂರು ಹೋಬಳಿ ಯಡವಾಣಿ ಗ್ರಾಮದ ಮೂಲಕ ಗುನ್ನಾಗೆರೆ ಗ್ರಾಮದಿಂದ ಕುಣಿಗಲ್‌ಗೆ ಸಂಚರಿಸುತ್ತಿರುವ ಸಾರಿಗೆ ಸಂಸ್ಥೆ ವಾಹನ ಪ್ರತಿದಿನ ತಡವಾಗಿ ಬರುತ್ತಿದ್ದು, ನೂರಾರು ವಿದ್ಯಾರ್ಥಿಗಳಿಗೆ ತೊಂದರೆಆಗುತ್ತಿತ್ತು. ಎಂದಿನಂತೆ ತಡವಾಗಿ ಬಂದ ವಾಹನಕ್ಕೆ ಜನಸಂದಣಿ ಹೆಚ್ಚಿದ್ದರಿಂದ ಪ್ರಯಾಣಿಕ ಹರೀಶ್, ನಿರ್ವಾಹಕಿ ಸರಸ್ವತಿ ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.

ಅಸಮಾಧಾನಗೊಂಡ ನಿರ್ವಾಹಕಿ ಬಸ್‌ನ್ನು ಪೊಲೀಸ್ ಠಾಣೆಗೆ ತಂದು ಅನುಚಿತವಾಗಿ ವರ್ತಿಸಿದ ಪ್ರಯಾಣಿಕನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ ಮೇರೆಗೆ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡರು. ಈ ಘಟನೆಯಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಪ್ರಯಾಣಿಕನ ಬೆಂಬಲ ಸೂಚಿಸಿ ಸಕಾಲಕ್ಕೆ ವಾಹನ ಸಂಚಾರ ವ್ಯವಸ್ಥೆ ಮಾಡದೆ ತೊಂದರೆ ಮಾಡದ್ದನ್ನು ಪ್ರಶ್ನಿಸಿದಕ್ಕಾಗಿ ಶಿಕ್ಷಿಸುವುದು ತಪ್ಪೆಂದು ಪ್ರತಿಭಟಿಸಿ ಯುವಕನನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ಸುದ್ದಿ ತಿಳಿದ ಕೂಡಲೆ ಪಿಎಸ್‌ಐ ಚನ್ನಯ್ಯಹಿರೇಮಠ್, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ತುಳಸಿರಾಂ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎನ್.ಜಗದೀಶ್ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚೆಸಿ ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ನಿಲ್ಲಿಸಿದರು.
ರಸ್ತೆ ಗುಂಡಿ ಮುಚ್ಚಿ ಕರವೇ ಪ್ರತಿಭಟನೆ

ಕುಣಿಗಲ್: ಪಟ್ಟಣದ ಮದ್ದೂರು ರಸ್ತೆಯ ಗುಂಡಿ ಮುಚ್ಚುವಂತೆ ಆಗ್ರಹಿಸಿ ಸಂಬಂಧಪಟ್ಟ ಇಲಾಖೆ ಗಮನ ಸೆಳೆಯಲು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಕಾರ್ಯಕರ್ತರು ಒಂದು ಕಿ.ಮೀ.ರಸ್ತೆಯಲ್ಲಿನ ಗುಂಡಿ ಮುಚ್ಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ವೇದಿಕೆ ಕಾರ್ಯಾಧ್ಯಕ್ಷ ವೈ.ಎಚ್.ರವಿಚಂದ್ರ, ಅಧ್ಯಕ್ಷ ಟಿ.ಮೋಹನ್‌ಕುಮಾರ್, ಕಾರ್ಯದರ್ಶಿ ನಾಗಣ್ಣ ಸೇರಿದಂತೆ ಪದಾಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣನ್ನು ತಂದು ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಿಂದ ಚಿಕ್ಕಕೆರೆವರೆಗಿನ ಗುಂಡಿಗಳನ್ನು ಮುಚ್ಚಿದರು.

ವೈ.ಎಚ್.ರವಿಚಂದ್ರ ಮಾತನಾಡಿ, ತುಮಕೂರು- ಮೈಸೂರು ರಾಜ್ಯ ಹೆದ್ದಾರಿಯ ಕುಣಿಗಲ್‌ನಿಂದ ಹುಲಿಯೂರುದುರ್ಗದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಭಾಗದಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೂ ಬಹಳ ತೊಂದರೆಯಾಗಿದೆ. ಈ ಬಗ್ಗೆ ಹಲವು ಪ್ರತಿಭಟನೆ ನಡೆಸಿ ಮನವಿ ಮಾಡಿದ್ದರೂ; ಯಾವುದೇ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ರಸ್ತೆ ಅವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT