ADVERTISEMENT

ಬಾಡಿಗೆ ಪಾವತಿಸದೆ ಬೀಗ ಒಡೆದ ವ್ಯಾಪಾರಸ್ಥರು; ಬಂಧನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 8:25 IST
Last Updated 10 ಜೂನ್ 2011, 8:25 IST

ಮಧುಗಿರಿ: ಗ್ರಾಮ ಪಂಚಾಯಿತಿಗೆ ಸೇರಿದ ಅಂಗಡಿ ಮಳಿಗೆಗಳ ಬಾಡಿಗೆ ಹಣ ಉಳಿಸಿಕೊಂಡಿದ್ದ ಕಾರಣಕ್ಕೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಅಂಗಡಿಗಳಿಗೆ ಹಾಕಿದ್ದ ಬೀಗ ಒಡೆಯಲು ಬಾಡಿಗೆದಾರರಿಗೆ ಪೊಲೀಸರು ಬೆಂಬಲ ನೀಡಿದ್ದಾರೆಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಗುರುವಾರ ಧರಣಿ ನಡೆಸಿದರು.

ಘಟನೆ ಹಿನ್ನೆಲೆ
ಬಡವನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ 9 ಅಂಗಡಿ ಮಳಿಗೆಗಳಿಗೆ ಕಳೆದ 2006ರಿಂದ ರೂ. 6.8 ಲಕ್ಷ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ  ಗ್ರಾಮ ಪಂಚಾಯಿತಿ ಠರಾವು ಮಾಡಿತ್ತು. ಅಂಗಡಿ ತೆರವುಗೊಳಿಸುವಂತೆ ತಾ.ಪಂ ಇಒ ಬಾಡಿಗೆದಾರರಿಗೆ ನೋಟಸ್ ಜಾರಿ ಮಾಡಿದ್ದರು. ಬಾಡಿಗೆದಾರರು ಹೈಕೋರ್ಟ್ ಮೆಟ್ಟಿಲೇರಿ ಏ. 26ರಂದು ನೋಟೀಸ್‌ಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಆದೇಶ ತಲುಪುವ ಮುನ್ನವೇ ಗ್ರಾ.ಪಂ. ಅಂಗಡಿಗಳಿಗೆ ಬೀಗಮುದ್ರೆ ಹಾಕಿ ವಶಕ್ಕೆ ಪಡೆದಿತ್ತು.

ತಡೆಯಾಜ್ಞೆ ಅವಧಿ ಮುಗಿದು ಜೂ. 7ಕ್ಕೆ ಪ್ರಕರಣದ ವಿಚಾರಣೆ ನಡೆಯದೆ ಮತ್ತೆ ತಡೆಯಾಜ್ಞೆ ಅವಧಿ 4 ವಾರಗಳ ಕಾಲ ಮುಂದೂಡಿದ್ದರಿಂದ ಗುರುವಾರ ಬೆಳಿಗ್ಗೆ ಬಾಡಿಗೆದಾರರು ಬೀಗ ಒಡೆದು ವ್ಯಾಪಾರ ಪ್ರಾರಂಭಿಸಿದ್ದರು.  ಈ ಸಂದರ್ಭ ಬೀಗ ಒಡೆಯಲು ಪೊಲೀಸರು ರಕ್ಷಣೆ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಎದುರು ಧರಣಿ ಕುಳಿತರು.

ಇನ್ಸ್‌ಪೆಕ್ಟರ್ ಸ್ಪಷ್ಟನೆ: ಅಂಗಡಿ ಮಳಿಗೆಗಳಿಗೆ ಬೀಗ ಹಾಕುವ ಅಥವಾ ತೆರವುಗೊಳಿಸುವ ಸಂದರ್ಭದ್ಲ್ಲಲಿ ರಕ್ಷಣೆ ನೀಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಪಡೆ ಯೊಂದಿಗೆ ಹಾಜರಿದ್ದವೆಂದು ಸರ್ಕಲ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಕುದೂರ್ ಸ್ಪಷ್ಟಪಡಿಸಿದರು.

ದೂರು: ಬೀಗ ಮುದ್ರೆ ಹಾಕಿ ಪಂಚಾಯಿತಿ ವಶಪಡಿಸಿಕೊಂಡಿದ್ದ ಅಂಗಡಿಗಳ ಬೀಗವನ್ನು ಬೆಳಗಿನ ಜಾವ ಒಡೆದು ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು 14 ಮಂದಿ ವಿರುದ್ಧ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಅಧಿಕಾರಿಗಳು ಅಂಗಡಿ ಬಾಡಿಗೆದಾರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.                                      

ಬೀಗಮುದ್ರೆ: ರಸ್ತೆ ತಡೆ
ತಾಲ್ಲೂಕು ದಂಡಾಧಿಕಾರಿ ಆರ್. ನಾಗರಾಜಶೆಟ್ಟಿ ಗುರುವಾರ ಸಂಜೆ ಸ್ಥಳಕ್ಕೆ ಬಂದು ಪುನಃ ಅಂಗಡಿ ಮಳಿಗೆಗಳಿಗೆ ಬೀಗಮುದ್ರೆ ಹಾಕಿಸಿದರು.

ಉಪವಿಭಾಗಾಧಿಕಾರಿ ದೀಪ್ತಿ ಭೇಟಿ ನೀಡಿ ರಸ್ತೆತಡೆ ನಡೆಸುತ್ತಿದ್ದ ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಿ ಆರೋಪಿಗಳನ್ನು ಬಂಧಿಸುವಂತೆ ಸರ್ಕಲ್ ಇನ್ಸ್‌ಪೆಕ್ಟರ್ ಸತ್ಯನಾರಾಯಣಕುದೂರ್ ಅವರಿಗೆ ಸೂಚನೆ ನೀಡಿದ ನಂತರ ರಸ್ತೆತಡೆ ತೆರವುಗೊಳಿಸಿದರು.  ಪೊಲೀಸರು 7 ಮಂದಿ ಮಳಿಗೆದಾರರನ್ನು ಬೀಗ ಒಡೆದ ಆರೋಪದಲ್ಲಿ ವಶಕ್ಕೆ ತೆಗೆದು ಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.